ಬೆಂಗಳೂರು: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣದ (DJ Halli-KG Halli riots case) ಬಗ್ಗೆ ಸ್ಫೋಟಕ ಸುದ್ದಿ ಇಲ್ಲಿದೆ. ಗಲಭೆ ನಡೆಸುತ್ತಿದ್ದ ಕಿಡಿಗೇಡಿಗಳ ಗುಂಪಿನ ಮೇಲೆ ನಡೆದ ಗೋಲಿಬಾರ್‌ನಲ್ಲಿ (DJ Halli-KG Halli Golibar) ಸತ್ತವರು ಅಮಾಯಕರಲ್ಲ ಎಂದು ಕಾಂಗ್ರೆಸ್ ಸರ್ಕಾರ (Karnataka government) ಒಪ್ಪಿಕೊಂಡಿದೆ.
ಈ ಕುರಿತ ಮ್ಯಾಜಿಸ್ಟ್ರೇಟ್ ವರದಿಯನ್ನು ಒಪ್ಪಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರ, ಆ ಮೂಲಕ ಈ ಹಿಂದೆ ತಾನೇ ಮಾಡಿದ್ದ ಆರೋಪವನ್ನು ನಿರಾಕರಿಸಿದಂತಾಗಿದೆ.
ಕೆಜಿ ಹಳ್ಳಿ ಡಿಜಿ ಹಳ್ಳಿಯಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮನೆ ಮೇಲೆ ನಡೆದಿದ್ದ ದಾಳಿ ಹಾಗೂ ಬಳಿಕ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಕಿಡಿಗೇಡಗಳು ಮುಂದಾಗಿದ್ದ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣ ಮಾಡಲು ವಿಫಲವಾಗಿದ್ದ ಪರಿಣಾಮ ಪೊಲೀಸರು ಗೋಲಿಬಾರ್ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ಗಲಭೆ ಆರೋಪಿಯೊಬ್ಬ ಮೃತಪಟ್ಟಿದ್ದ.
ಇದು ನಕಲಿ ಎನ್‌ಕೌಂಟರ್ ಎಂದು ಮೃತ ಆರೋಪಿಯ ಕುಟುಂಬ ಪ್ರಶ್ನೆ ಮಾಡಿತ್ತು. ಘಟನೆಯನ್ನು ಖಂಡಿಸಿ, ಬಿಜೆಪಿ ಸರ್ಕಾರದ ಕೈವಾಡದ ಬಗ್ಗೆ ಕಾಂಗ್ರೆಸ್ ಶಂಕೆ ವ್ಯಕ್ತಪಡಿಸಿತ್ತು. ಮುಸ್ಲಿಂ ಸಮುದಾಯವನ್ನು ಬಿಜೆಪಿ ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿತ್ತು. ಹೀಗಾಗಿ ಪ್ರಕರಣವನ್ನು ಬಿಜೆಪಿ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿತ್ತು.
ಇದೀಗ ಮ್ಯಾಜಿಸ್ಟ್ರೇಟ್ ತನಿಖೆಯ ಪಿನ್ ಟು ಪಿನ್ ಮಾಹಿತಿ ದೊರೆತಿದೆ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದ ಮ್ಯಾಜಿಸ್ಟ್ರೇಟ್, ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ವರದಿ ನೀಡಿದ್ದರು. ಪೊಲೀಸ್ ಕ್ರಮ ಸರಿಯಿದೆ. ಅಂದು ಪೊಲೀಸರು ಗೋಲಿಬಾರ್ ಮಾಡಿರದಿದ್ದರೆ ಆರೋಪಿಗಳು ಇಡೀ ಠಾಣೆ ಬೆಂಕಿ ಹಚ್ಚುತ್ತಿದ್ದರು. ಸ್ವಯಂ ರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಕಾಪಾಡಲು ಗೋಲಿಬಾರ್ ನಡೆದಿದೆ ಎಂದು ಜಿಲ್ಲಾಧಿಕಾರಿ ರಿಪೋರ್ಟ್ ನೀಡಿದ್ದಾರೆ.
2023ರ ಜನವರಿ ತಿಂಗಳಲ್ಲಿ ಮ್ಯಾಜಿಸ್ಟ್ರೇಟ್ ವರದಿ ನೀಡಿದ್ದರು. ಈ ವರದಿಯನ್ನೂ ಕಾಂಗ್ರೆಸ್ ಸರ್ಕಾರ ಟೀಕಿಸಿತ್ತು. ಚುನಾವಣಾ ಸಮಯದಲ್ಲಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಟೀಕಿಸಿತ್ತು. ಇದೀಗ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ರಿಪೋರ್ಟ್ ಅನ್ನು ಒಪ್ಪಿಕೊಂಡಿದೆ. ಬಿಜೆಪಿ ಸರ್ಕಾರದ ಕ್ಯಾಬಿನೆಟ್ ನಿರ್ಧಾರವನ್ನು ಒಪ್ಪಿ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದೆ. ಅಂದು ಟೀಕೆ ಮಾಡಿ, ಇಂದು ಅಧಿಕಾರಕ್ಕೆ ಬಂದ ಬಳಿಕ ಘಟನೆ ಬಗ್ಗೆ ಕಾಂಗ್ರೆಸ್ ನಿಜ ಒಪ್ಪಿಕೊಂಡಿದೆ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: Power Point with HPK : ಕೆಜಿ ಹಳ್ಳಿ ಗಲಭೆ ಕೇಸ್ ವಾಪಸ್ ಹಿಂದೆ ಸಿಎಂ ಸಿದ್ದರಾಮಯ್ಯ: ಆರಗ ಜ್ಞಾನೇಂದ್ರ