ಬೆಂಗಳೂರು: ನಮ್ಮ ಪಕ್ಷದಿಂದ ರಾಜ್ಯ ಸಭೆಗೆ ಅರ್ಜಿ ಹಾಕಿ. ನಾವು ಗೆಲ್ಲಿಸುತ್ತೇವೆ ಎಂದು ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಹೇಳಿದೆವು. ಬಿ.ಎಂ. ಫಾರೂಕ್ (BM Farooq) ಅವರು ಕುಮಾರಣ್ಣ.. ಕುಮಾರಣ್ಣ ಅಂತ ಹೋದ್ರು. ಈಗ ಕಾಲ ಪಕ್ವವಾಗಿದೆ. ಈಗಲಾದರೂ ನಮ್ಮಲ್ಲಿಗೆ ಬನ್ನಿ: ಹೀಗೆಂದು ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ (JDS MLC) ಬಿ.ಎಂ. ಫಾರೂಕ್ ಅವರಿಗೆ ನೇರ ಮತ್ತು ಬಹಿರಂಗ ಆಹ್ವಾನ ನೀಡಿದರು ಡಿ.ಕೆ. ಶಿವಕುಮಾರ್ (DK Shivakumar).
ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೆಲವೊಂದು ಪ್ರಭಾವಿ ಮುಸ್ಲಿಂ ಮುಖಂಡರನ್ನು ಸೆಳೆಯುವ ಪ್ರಯತ್ನದಲ್ಲಿದ್ದು, ಬಿ.ಎಂ. ಫಾರೂಕ್‌ಗೆ ಬಹಿರಂಗವಾಗಿಯೇ ಆಹ್ವಾನ ನೀಡಲಾಗಿದೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್‌ನ ನೂತನ ಸೌಹಾರ್ದ ಭವನ ಉದ್ಘಾಟನಾ ಸಮಾರಂಭದಲ್ಲಿ ಡಿ.ಕೆ. ಮಾತನಾಡಿದರು. ಇಲ್ಲಿ ರಾಜಕೀಯದ ವಿಚಾರವೇ ಹೆಚ್ಚು ಚರ್ಚೆಯಾಯಿತು. ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಕೂಡಾ ತಮಗೆ ಮಂತ್ರಿಮಂಡದಲ್ಲಿ ಹೆಚ್ಚಿನ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿತು.
ಬಿ.ಎಂ.ಫಾರೂಕ್ ಅವರಿಗೆ ನಾನು ಮತ್ತು ಸಿದ್ದರಾಮಯ್ಯ ಅವರು ಅನೇಕ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಿ, ರಾಜ್ಯಸಭೆ ಸದಸ್ಯನನ್ನಾಗಿ ಮಾಡುತ್ತೇವೆ ಎಂದು ಹೇಳಿದೆವು. ಆದರೆ ಕುಮಾರಸ್ವಾಮಿ ಅವರೇ ಮುಖ್ಯ ಎಂದು ಅವರ ಜೊತೆ ಹೋದರು. ಮುಂದಕ್ಕೆ ಈ ತಪ್ಪು ಮಾಡಲು ಹೋಗಬೇಡಿ, ಇಡೀ ಸಮುದಾಯ ಬಳಲುತ್ತಾ ಇದೆ ಎಂದರು. ಸಿದ್ದರಾಮಯ್ಯ ಅವರು ಕೂಡಾ ತಮ್ಮ ಭಾಷಣದಲ್ಲಿ ಫಾರೂಕ್ ಬಗ್ಗೆ ಮಾತನಾಡಿದರು.
ಯು.ಟಿ.ಖಾದರ್‌ಗೆ ಸಿಎಂ ಆಗೋ ಚಾನ್ಸೂ ಇದೆ!
ಸ್ಪೀಕರ್ ಆಗಿರುವಂತಹ ಯು.ಟಿ.ಖಾದರ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಮನವಿ ಮಾಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಅವರು ನಮಗಿಂತ ಎತ್ತರದ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಎಸ್.ಎಂ.ಕೃಷ್ಣ, ಜಗದೀಶ್ ಶೆಟ್ಟರ್ ಅವರುಗಳು ಸ್ಪೀಕರ್ ಆಗಿದ್ದರು. ಯಾರ ಹಣೆಯಲ್ಲಿ ಏನು ಬರೆದಿರುತ್ತದೆ ಎಂದು ಯಾರಿಗೂ ತಿಳಿದಿಲ್ಲ, ನೀವು ನಮ್ಮನ್ನೆಲ್ಲಾ ಮೀರಿಸಿ ಮುಂದೊಂದು ದಿನ ಬೆಳೆಯಬಹುದು ಎಂದರು. ʻʻಖಾದರ್ ಅವರೇ ನಿವೇನು ಮಂತ್ರಿ ಆಗ್ಲಿಲ್ಲ ಎಂದು ಚಿಂತೆ ಮಾಡೊದು ಬೇಡ.. ನಿಮಗೆ ಭವ್ಯ ಭವಿಷ್ಯವಿದೆʼʼ ಎಂದರು.
ಉಡುಪಿ, ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಿ ಎಂದ ಡಿಕೆಶಿ
“ಲೋಕಸಭೆ ಚುನಾವಣೆ ವೇಳೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಕಾಂಗ್ರೆಸ್ ಪಕ್ಷದ ಕೈ ಹಿಡಿಯಬೇಕು” ಎಂದು ಡಿ.ಕೆ.ಶಿ ಮನವಿ ಮಾಡಿದರು. ʻʻನೀವೆಲ್ಲ ಬೆಂಗಳೂರಿನಲ್ಲಿದ್ದರೆ ಪ್ರಯೋಜನ ಇಲ್ಲ. ಮಂಗಳೂರಿಗೆ ಹೋಗಿ, ಉಡುಪಿಗೆ ಹೋಗಿ ಕೆಲಸ ಮಾಡಿ ಇಡೀ ದೇಶಕ್ಕೆ ಒಂದು ಸಂದೇಶ ಕಳುಹಿಸಿ. ಮಂಗಳೂರಿನಲ್ಲಿ, ಉಡುಪಿಯಲ್ಲಿ ನಮ್ಮವರನ್ನ ಗೆಲ್ಲಿಸಿʼʼ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ಹುಟ್ಟಿದ ಊರಿನಲ್ಲೇ ಉದ್ಯೋಗ ಸೃಷ್ಟಿ ಮಾಡಿ, ಕರಾವಳಿಯ ಕಳಂಕ ಅಳಿಸಿ ಹಾಕಿ
ಬಿಜೆಪಿ ಸರ್ಕಾರ ಇದ್ದ ವೇಳೆ ಹೂಡಿಕೆದಾರರ ಸಮಾವೇಶದ ಮೂಲಕ 10 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿತು ಎಂದು ಹೇಳಿದ್ದರು. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಒಬ್ಬರೂ ಬಂದಿರಲಿಲ್ಲ. ಗಲ್ಫ್ ಸೇರಿದಂತೆ ಹೊರದೇಶಗಳಿಗೆ ಹೋಗದೆ, ಹುಟ್ಟಿದ ಊರಿನಲ್ಲಿ ಉದ್ಯೋಗ ಸೃಷ್ಟಿ ಮಾಡಿ, ಪ್ರತಿಭಾ ಪಲಾಯನ ರಾಜ್ಯದ ಅಭಿವೃದ್ಧಿಗೆ ಮಾರಕ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ಮಲೇಷ್ಯಾದಲ್ಲಿ ಟ್ವಿನ್ ಸಿಟಿ ಕಟ್ಟಿದ್ದೇ ಬ್ಯಾರಿಗಳು, ನಿಮಗೆ ಎಲ್ಲವೂ ಸಾಧ್ಯವಿದೆ
ʻʻಮಂಗಳೂರು ಹೂಡಿಕೆದಾರರ ಸ್ವರ್ಗ. ಎಲ್ಲಾ ರೀತಿಯಲ್ಲೂ ಅಲ್ಲಿ ಅವಕಾಶವಿದ್ದು, ಸರ್ಕಾರ ನಿಮ್ಮ ಬೆನ್ನಿಗೆ ನಿಲ್ಲುತ್ತದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಮಾಡಿ, ಕೋಮು ಗಲಭೆಯ ಪ್ರಯೋಗಶಾಲೆ ಎನ್ನುವ ಹೆಸರು ಅಳಿಸಿ ಹಾಕಿ. ಮಲೇಷ್ಯಾ ಮಾದರಿಯಲ್ಲಿ ಟ್ವಿನ್ ಸಿಟಿಯನ್ನು ಮೊದಲು ಕಟ್ಟಿದವರೇ ಬ್ಯಾರಿ ಸಮುದಾಯದವರು, ನಿಮ್ಮ ಕೈಲಿ ಎಲ್ಲವೂ ಸಾಧ್ಯʼʼ ಎಂದರು.
ಸಮುದಾಯದ ಬೆಳವಣಿಗೆಗೆ ನಿವೇಶನಗಳ ಅಗತ್ಯವಿದೆ ಎಂದು ಮನವಿ ಮಾಡಿದ್ದೀರಿ, ಕಾನೂನಿ ಚೌಕಟ್ಟಿನಲ್ಲಿ ಏನು ಸಾಧ್ಯತೆ ಇದ್ದರೂ ಸಹಾಯ ಮಾಡಲಾಗುವುದು. ಮುಖ್ಯಮಂತ್ರಿಗಳು ಕೈಗೆ ಪೆನ್ ಕೊಟ್ಟಿದ್ದಾರೆ, ಇದರಿಂದ ಏನು ಬೇಕಾದರೂ ಮಾಡಬಹುದು. “You Can Make More Friends, You can Make More Enemies” ನಾವು ಸ್ನೇಹ ಸಂಪಾದನೆ ಮಾಡೋಣ. ನನ್ನ ಮನೆ ಹಾಗೂ ಮುಖ್ಯಮಂತ್ರಿಗಳ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: CM Siddaramaiah : ಅಧಿಕಾರ ಇರಲಿ, ಇಲ್ಲದಿರಲಿ ಎಂದೂ ಬಿಜೆಪಿ ಜತೆ ಹೋಗಲ್ಲ; ಸಿದ್ದರಾಮಯ್ಯ ಪ್ರತಿಜ್ಞೆ
ದೇವಸ್ಥಾನ ಕಟ್ಟಿದವರು ನೀವು ಎಂದು ಕೊಂಡಾಡಿದ ಡಿ.ಕೆ. ಶಿವಕುಮಾರ್
ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಬ್ಯಾರಿ ಭಾಷಿಕ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಯಾವುದಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು ಎನ್ನುವ ಮಾತಿನಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ದೇವಾಲಯಗಳಿಗೆ ದಾನ- ಧರ್ಮ ಮಾಡಿದವರು ಬ್ಯಾರಿ ಭಾಷಿಕರು. ಮುಲ್ಕಿಯ ದುರ್ಗಾಪರಮೇಶ್ವರಿ ದೇವಸ್ಥಾನ ಕಟ್ಟಿಸಿದ್ದು ಬಪ್ಪ ಬ್ಯಾರಿ ಎಂದು ಇದೇ ವೇಳೆ ಸ್ಮರಿಸಿಕೊಂಡರು.
ಯಾವುದೇ ಅಪಾಯ ಆಗದಂತೆ ಕಾಂಗ್ರೆಸ್ ನಿಮ್ಮನ್ನು ಕಾಪಾಡುತ್ತದೆ.
ಬ್ಯಾರಿ ಸಮುದಾಯದ ಭವನಕ್ಕೆ ಸಹಾಯ ಮಾಡಲು ಅಥವಾ ನಿಮಗೆ ಆಶ್ವಾಸನೆಗಳನ್ನು ನೀಡಲು ಇಲ್ಲಿಗೆ ಬಂದಿಲ್ಲ, ಬದಲಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ ಕಾರಣ ನಿಮ್ಮ ಋಣ ತೀರಿಸಲು ಬಂದಿದ್ದೇನೆ. ದೇಶದಲ್ಲಿ ಬದಲಾವಣೆಯ ಗಾಳಿ ಎಬ್ಬಿಸಿ, ಸಮರ್ಥವಾದ ಉತ್ತರ ನೀಡಲು ಕಾರಣರಾಗಿದ್ದೀರಿ ಎಂದು ತಿಳಿಸಿದರು. ಎಲ್ಲಾ ಧರ್ಮ, ಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸರ್ಕಾರ ನಮ್ಮದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಧರ್ಮದವರನ್ನು ಕಾಂಗ್ರೆಸ್ ಸರ್ಕಾರ ಕಾಪಾಡುತ್ತದೆ ಎಂದು ಭರವಸೆ ನೀಡಿದರು.