ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜಧಾನಿ ಬೆಂಗಳೂರು, ಗುಂಡಿಗಳ ರಾಜಧಾನಿ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ತೊಲಗಿಸಿ-ಬೆಂಗಳೂರು ಉಳಿಸಿ ಎಂಬ ಘೋಷಣೆ ಮೂಲಕ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನ 300ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಯೋಜಿಸಿದ್ದ ಮೌನ ಪ್ರತಿಭಟನೆ ಹಿನ್ನೆಲೆಯಲ್ಲಿ ಮಹಾತ್ಮಾ ಗಾಂಧಿ ರಸ್ತೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿದ್ದು, ಬೆಂಗಳೂರು ರಸ್ತೆ ಗುಂಡಿಗಳ ರಾಜಧಾನಿಯಾಗಿದೆ. ಕಸದ ಸಮಸ್ಯೆ ಹೆಚ್ಚಾಗಿದೆ. 40% ಕಮಿಷನ್ ಭ್ರಷ್ಟಾಚಾರದಿಂದ ನಗರದ ಕಾಮಗಾರಿಗಳು ಕಳಪೆಯಾಗಿವೆ. ದೇಶದಲ್ಲಿ ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಅನೇಕ ಸಾವುಗಳು ಸಂಭವಿಸಿದ್ದು, ಬಿಜೆಪಿ ಸರ್ಕಾರ ಈ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ.
ಇದಕ್ಕೆಲ್ಲ ಉತ್ತರ ನೀಡುವವರು ಯಾರು? ಸರ್ಕಾರದ ದುರಾಡಳಿತದ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಕೇಳಲಾದ ಪ್ರಶ್ನೆಗಳಿಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಬಿಜೆಪಿ ಸರ್ಕಾರಕ್ಕೆ ಬೆಂಗಳೂರು ನಗರ ಹಾಗೂ ರಾಜ್ಯದ ಜನರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಜನರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ನಾವು ಜನರ ಧ್ವನಿಯಾಗಿ ಕೆಲಸ ಮಾಡಲು ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ.
ಕೆಲದಿನಗಳ ಹಿಂದೆ ನಾನು ಬೀದಿ ಬದಿ ವ್ಯಾಪಾರಿಗಳ ಸಮಾವೇಶದಲ್ಲಿ ಭಾಗವಹಿಸಿದ್ದೆ. ಅವರು ದಿನನಿತ್ಯ ವ್ಯಾಪಾರ ಮಾಡಲು ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರಿಂದ ಹೆಚ್ಚಿನ ಕಿರುಕುಳ ಎದುರಿಸುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಬೀದಿ ವ್ಯಾಪಾರಿಗಳಿಂದಲೇ ತಿಂಗಳಿಗೆ ಒಂದು ಕೋಟಿಯಷ್ಟು ಹಣ ಸಂಗ್ರಹಿಸಲಾಗುತ್ತಿದೆ. ನಿತ್ಯ ಪ್ರತಿ ವ್ಯಾಪಾರಿಯಿಂದ ಇನ್ನೂರು, ಮುನ್ನೂರು ರೂಪಾಯಿಗಳನ್ನು ವಸೂಲಿ ಮಾಡಲಾಗುತ್ತಿದೆ. ಈ ಮಟ್ಟದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ. ಬಿಜೆಪಿ ಸರ್ಕಾರ ಬೀದಿ ವ್ಯಾಪಾರಿಗಳು, ಕಸ ವಿಲೇವಾರಿ ಮಾಡುವರನ್ನು ಬಿಡದೆ ಸುಲಿಗೆ ಮಾಡುತ್ತಿದೆ. ಈ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಇದನ್ನೂ ಓದಿ | Shootout In Bangalore | ಬೆಂಗಳೂರು ಹೊರವಲಯದಲ್ಲಿ ಗುಂಡಿನ ಸದ್ದು; ಬೈಕ್‌ನಲ್ಲಿ ಬಂದು ಶೂಟ್ ಮಾಡಿದರು!
ಕಾಂಗ್ರೆಸ್ ಪಕ್ಷಕ್ಕೆ ಕೆಲ ಪ್ರಶ್ನೆ ಕೇಳಿ, ಇವುಗಳಿಗೆ ಉತ್ತರ ನೀಡಿದ ನಂತರ ಪ್ರತಿಭಟನೆ ಮಾಡುವಂತೆ ಬಿಜೆಪಿ ಆಗ್ರಹಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು, ʼಮುಖ್ಯಮಂತ್ರಿಗಳು ಯಾವುದೇ ಮಾಧ್ಯಮಗಳ ವೇದಿಕೆಯಲ್ಲಿ ಚರ್ಚೆಗೆ ಬರಲಿ, ನಾನು ಅವರೆಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲು ಸಿದ್ಧನಿದ್ದೇನೆ. ಎಲ್ಲ ವಿಚಾರವಾಗಿ ಚರ್ಚೆ ಮಾಡುತ್ತೇವೆ. ನಾವು ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುವ ಬದಲು ನೇರಾನೇರ ಚರ್ಚೆಗೆ ಬರಲಿ. ನಾವು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನೂರಕ್ಕೂ ಹೆಚ್ಚು ಪ್ರಶ್ನೆಗಳನ್ನು ದಿನನಿತ್ಯ ಕೇಳುತ್ತಿದ್ದೇವೆ. ಅದರಲ್ಲಿ ಒಂದು ಪ್ರಶ್ನೆಗೂ ಈ ಸರ್ಕಾರ ಉತ್ತರಿಸಿಲ್ಲ. ಅವರು ಸಮಯ ಹಾಗೂ ವೇದಿಕೆ ನಿಗದಿಪಡಿಸಲಿ, ನಾನು ಚರ್ಚೆಗೆ ಬಂದು ಉತ್ತರ ನೀಡುತ್ತೇನೆʼ ಎಂದು ತಿಳಿಸಿದರು.