ಬೆಂಗಳೂರು: ಈ ಹಿಂದೆ ನಮ್ಮ ಸುದ್ದಿಗೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲ್‌ಮೆಂಟ್ ಮಾಡಿದ್ದೇವೆ. ಅದನ್ನು ನೆನಪು ಮಾಡಿಕೊಳ್ಳಲಿ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ (KS Eshwarappa) ಅವರನ್ನು ಉದ್ದೇಶಿಸಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ದೇಶ ವಿಭಜನೆಯ ಮಾತು ಆಡಿರುವ ಡಿ.ಕೆ. ಸುರೇಶ್ (DK Suresh) ಅವರನ್ನು ಗುಂಡಿಕ್ಕಿ ಕೊಲ್ಲಿ ಎಂಬ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಈಶ್ವರಪ್ಪನವರ ಗುಂಡಿನ ಬೆದರಿಕೆಗೆ ಹೆದರುವ ರಕ್ತ ಡಿ.ಕೆ. ಸುರೇಶ್ ಅವರ ಮೈಯಲ್ಲಿ ಹರಿಯುತ್ತಿಲ್ಲ. ನಮ್ಮ ಸುದ್ದಿಗೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್ ಆಗಿವೆ ಎಂದರು.
ಶನಿವಾರ ನಗರದ ಖಾಸಗಿ ಹೋಟೇಲ್ ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಸಭೆ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಸಂಸದ ಡಿ.ಕೆ ಸುರೇಶ್ ಅವರಿಗೆ ಗುಂಡಿಕ್ಕುವ ಸಂಬಂಧ ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.
ಅವರಿಗೆ ಕ್ಷಮೆ ಕೇಳಿ ಎಂದು ಯಾರೂ ಹೇಳಿಲ್ಲ. ಸದನದಲ್ಲಿ ನಮ್ಮ ತಂದೆ ಬಗ್ಗೆ ಮಾತನಾಡಿದ್ದರು. ಅದಕ್ಕೆ ಒಂದು ಸುತ್ತಿನ ಸೆಟ್ಲಮೆಂಟ್ ಮಾಡಿದ್ದೇವೆ. ಈಶ್ವರಪ್ಪ ಈಗ ಎಲ್ಲಿದ್ದಾರೆ? ನಮ್ಮ ವಿಚಾರಕ್ಕೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್ ಆಗಿದೆ. ಈಶ್ವರಪ್ಪ ಗುಂಡಿಟ್ಟು ಕೊಲ್ಲುವುದಾದರೆ ಕೊಲ್ಲಲಿ. ಅವರ ಹೇಳಿಕೆಗೆ ನಡುಗುವ ರಕ್ತ ಡಿ ಕೆ ಸುರೇಶ್ ಮೈಯಲ್ಲಿ ಹರಿಯುತ್ತಿಲ್ಲ. ನಮ್ಮ ಪೂರ್ವಜರಾದ ಕೆಂಪೇಗೌಡರ ಇತಿಹಾಸ ಗೊತ್ತಿದೆಯೇ? ನಮಗೆ ನಮ್ಮದೇ ಆದ ಇತಿಹಾಸವಿದೆ. ನಾವು ಕಿವಿ ಮೇಲೆ ಹೂವು ಇಟ್ಟುಕೊಂಡು ರಾಜಕಾರಣ ಮಾಡಲು ಬಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈಶ್ವರಪ್ಪನವರೇ ನಿಮ್ಮ ಮುಂದೆ ಬರ್ತೇನೆ, ಗುಂಡು ಹೊಡೆಯಿರಿ ಎಂದ ಡಿ.ಕೆ. ಸುರೇಶ್
ಬೆಂಗಳೂರು: ಈಶ್ವರಪ್ಪನವರೇ ನಾನೇ ನಿಮ್ಮ ಮುಂದೆ ಬರ್ತೇನೆ, ಗುಂಡಿಟ್ಟು ಕೊಲ್ಲಿ ಎಂದು ಸವಾಲು ಹಾಕಿದ್ದಾರೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ (MP DK Suresh). ದೇಶ ವಿಭಜನೆ ಹೇಳಿಕೆ (Dividing the Nation) ನೀಡಿದವರನ್ನು ಗುಂಡಿಟ್ಟು ಕೊಲ್ಲಬೇಕು, ಅಂಥ ಕಾನೂನು ಬರಬೇಕು ಎಂಬ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ (KS Eshwarappa) ಅವರ ಹೇಳಿಕೆಗೆ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ʻʻಇತಿಹಾಸ ನಿಮಗೆಲ್ಲಾ ಗೊತ್ತಿದೆ. ಮಹಾತ್ಮ ಗಾಂಧಿಯವರನ್ನೇ ಕೊಂದ ಪಕ್ಷ ಅವರದು.. ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ ಹೀಗೆ ಹೇಳಿರಬಹುದು. ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ ಕೊಲ್ಲುವುದಾದರೆ ಸಾಯಲು ನಾನು ಸಿದ್ಧʼʼ ಎಂದು ಹೇಳಿದರು. ಪಕ್ಷದಲ್ಲಿ ಅವರನ್ನು ಮೂಲೆ ಗುಂಪು ಮಾಡಿದ್ದಾರೆ. ಅದಕ್ಕೆ ಈಗ ಗಮನ ಸೆಳೆಯಲು ಮಾತನಾಡುತ್ತಿದ್ದಾರೆ ಎಂದೂ ಹೇಳಿದರು.
ʻʻಕೆ.ಎಸ್.ಈಶ್ವರಪ್ಪ ಅವರು ಇಂಥ ಹೇಳಿಕೆಗಳ ಮೂಲಕ ಬಡವರ ಮಕ್ಕಳನ್ನು ಯಾಕೆ ರೊಚ್ಚಿಗೆಬ್ಬಿಸಬೇಕು, ಬಡವರ ಮಕ್ಕಳನ್ನು ಯಾಕೆ ಬಾವಿಗೆ ತಳ್ಳಬೇಕು? ನಾನೇ ಅವರಿಗೆ ಸಮಯ ಕೊಡುತ್ತೇನೆ. ಒಂದು ವಾರದಲ್ಲಿ ಯಾವಾಗ ಅಂತ ಹೇಳ್ತೀನಿ. ನಾನೇ ಅವರ ಮನೆಗೆ ಹೋಗ್ತೀನಿ ಅವರೇ ಗುಂಡು ಹೊಡೆಯಲಿʼʼ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದರು.
ʻʻನಾನೇನು ಭಾರತರ ವಿರೋಧಿ ಅಲ್ಲ. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇನೆ. ನಾನು ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ದೇಶದ್ರೋಹಿ ಎಂದು ಬಿಂಬಿಸಿ ಕೊಲ್ಲಬೇಕು ಎಂದು ಇಚ್ಛಾಶಕ್ತಿ ನಿಮಗಿದ್ದರೆ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ಈಶ್ವರಪ್ಪನವರೇ, ನೀವು ರೆಡಿಯಾಗಿರಿʼʼ ಎಂದು ಡಿ.ಕೆ. ಸುರೇಶ್ ಕಟುವಾಗಿ ಹೇಳಿದರು.