ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರ ಹಂಚಿಕೆ (Power Distribution) ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಖಡಕ್ ವಾರ್ನಿಂಗ್ (Warning to MLAs) ನೀಡಿದ್ದಾರೆ. ಯಾವ ಶಾಸಕರು ಕೂಡಾ ಪಕ್ಷದ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡಬಾರದು. ಇದರಿಂದ ತಪ್ಪು ಸಂದೇಶ ಹೋಗುತ್ತದೆ ಎಂದು ಅವರು ಮಾಧ್ಯಮಗಳ ಮುಂದೆ ಹೇಳಿದರು.
ಕಾಂಗ್ರೆಸ್‌ನ ಶಾಸಕ ಅಶೋಕ್ ಪಟ್ಟಣ್ ಅವರು ಶುಕ್ರವಾರವಷ್ಟೇ ʻʻಎರಡೂವರೆ ವರ್ಷದ ಬಳಿಕ ಎಲ್ಲ ಮಂತ್ರಿಗಳು ಬದಲಾಗಲಿದ್ದಾರೆ. ಈಗ ಇರುವವರ ಜಾಗದಲ್ಲಿ ಬೇರೆಯವರಿಗೆ ಅವಕಾಶ ಸಿಗಲಿದೆʼʼ ಎಂದು ಹೇಳಿದ್ದರು. ಆದರೆ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತನಗೆ ಗೊತ್ತಿಲ್ಲ ಎಂದಿದ್ದರು. ಡಿ.ಕೆ. ಶಿವಕುಮಾರ್ ಅವರು ಈ ಹೇಳಿಕೆಯನ್ನು ಉಲ್ಲೇಖಿಸದೆಯೇ ಎಲ್ಲ ಶಾಸಕರಿಗೆ ಒಂದು ವಾರ್ನಿಂಗ್ ನೀಡಿದರು.
ಯಾವ ಶಾಸಕರೂ ಪಾರ್ಟಿ ವಿಚಾರ ಬಹಿರಂಗವಾಗಿ ಮಾತನಾಡಬಾರದು ಎಂದು ಸೂಚನೆ ನೀಡಿದ್ದೇನೆ. ಈ ಎಲ್ಲ ವಿಚಾರಗಳನ್ನು ಚರ್ಚೆ ಮಾಡಲು ನಾನಿದ್ದೇನೆ, ಸಿಎಂ ಇದ್ದಾರೆ ಎಂದು ಅವರು ಹೇಳಿದ್ದಾರೆ.
ನಾನೊಬ್ಬನೇ ಅಧಿಕಾರ ತಂದೆ ಎಂದು ಹೇಳಿಲ್ಲ, ಹೇಳುವುದೂ ಇಲ್ಲ
ಈ ನಡುವೆ ಮುಂಜಾನೆ ಗಾಂಧಿ ಭವನದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಪಕ್ಷವನ್ನು ನಾನೊಬ್ಬನೇ ಅಧಿಕಾರಕ್ಕೆ ತಂದಿರುವುದಾಗಿ ಯಾವತ್ತೂ ಹೇಳಿಲ್ಲ, ಹೇಳುವುದೂ ಇಲ್ಲ. ಕಾರ್ಯಕರ್ತರು ಹಾಗೂ ಜನ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ (Congress Government) ತಂದಿದ್ದಾರೆ” ಎಂದು ಹೇಳಿದರು.
“ಶಿವಕುಮಾರ್ ಒಬ್ಬರೇ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ” ಎಂಬ ಸತೀಶ್ ಜಾರಕಿಹೊಳಿ (Satish Jarakiholi) ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
“ಪಕ್ಷದ ಕಾರ್ಯಕರ್ತರು, ನಾವು, ನೀವು ಸೇರಿ, ರಾಜ್ಯದ ಜನರು, ಪ್ರತಿ ಹಳ್ಳಿಯಲ್ಲಿರುವವರು ಬಡಿದಾಡಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಡಿ.ಕೆ. ಶಿವಕುಮಾರ್ ಒಬ್ಬನೇ ಅಧಿಕಾರಕ್ಕೆ ತಂದಿದ್ದಾನೆ ಎಂದು ಇಂದು, ನಾಳೆ, ಎಂದಿಗೂ, ಯಾವತ್ತಿಗೂ ಹೇಳುವುದಿಲ್ಲ” ಎಂದರು.
ಎರಡೂವರೆ ವರ್ಷಗಳ ನಂತರ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂದು ಮುಖ್ಯ ಸಚೇತಕ ಅಶೋಕ್ ಪಟ್ಟಣ ಹೇಳಿದ್ದಾರೆ ಎಂದು ಕೇಳಿದಾಗ, “ಪಕ್ಷದಲ್ಲಿ ಆಂತರಿಕವಾಗಿ ಒಂದಷ್ಟು ವಿಚಾರಗಳು ಚರ್ಚೆಯಾಗಿರುತ್ತವೆ. ಅದನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಅದನ್ನು ಚರ್ಚೆ ಮಾಡಲು ನಾನು ಹೋಗುವುದಿಲ್ಲ, ನನಗೆ ಇರುವ ಮಾಹಿತಿ ಪ್ರಕಾರ ಆ ರೀತಿ ಚರ್ಚೆ ನಡೆದಿಲ್ಲ” ಎಂದು ಹೇಳಿದರು.
ಎಚ್.ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ
ವಿದ್ಯುತ್ ಖರೀದಿ ಮತ್ತು ಆ ಮೂಲಕ ಕಮಿಷನ್ ಪಡೆಯಲು ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ನಾಟಕ ಮಾಡಲಾಗುತ್ತಿದೆ ಎಂಬ ಎಚ್.ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಡಿ.ಕೆ.ಶಿವಕುಮಾರ್ ಕೆಂಡಾಮಂಡಲರಾಗಿದ್ದಾರೆ.
ಅದರ ಜತೆಗೆ ಬರಗಾಲ ಇರುವಾಗ ಸಿಎಂ, ಡಿಸಿಎಂ ಕ್ರಿಕೆಟ್ ನೋಡಿಕೊಂಡು ಮಜಾ ಮಾಡುತ್ತಿದ್ದಾರೆ ಎಂಬ ಆರೋಪಕ್ಕೂ ಆಕ್ರೋಶ ವ್ಯಕ್ತಪಡಿಸಿದರು.
ಎಚ್ಡಿಕೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ʻಕುಮಾರಸ್ವಾಮಿಗೆ ಈ ದೇಶದ ಆಸ್ತಿ ಏನು ಅನ್ನೋದು ಗೊತ್ತಿಲ್ಲ. ಜನರ ಬದುಕು, ನಮ್ಮ ಸಂಸ್ಕೃತಿಯಲ್ಲಿ ಏನೆಲ್ಲಾ ಇದೆ ಅನ್ನೋದು ಗೊತ್ತಿಲ್ಲ. ದೇವಾಲಯ, ಚರ್ಚು, ಚಿತ್ರಕಲೆ , ಬೇರೆ ಬೇರೆ ಕ್ಷೇತ್ರ ಇದೆ. ಅವರು ತಯಾರು ಮಾಡುವ ಸಿನಿಮಾ ಇದೆ, ಮಗ ಆಕ್ಟ್ ಮಾಡುವ ಸಿನಿಮಾ ಇದೆ. ಎಲ್ಲದಕ್ಕೂ ಪ್ರೋತ್ಸಾಹ ನೀಡಬೇಕಲ್ಲʼʼ ಎಂದು ಕೇಳಿದರು.
ʻʻ ಇಡಿ ಪ್ರಪಂಚ ಕ್ರೀಡೆಗೆ ಎಷ್ಟು ಹೋರಾಟ ಮಾಡುತ್ತಿದೆ ಎನ್ನುವುದು ಅವರಿಗೆ ಗೊತ್ತಿಲ್ಲ. ನಮಗೆ ಆ ರುಚಿ ಗೊತ್ತಿದೆ. ಅವರಿಗೆ ಆ ರುಚಿ ಗೊತ್ತಲ್ಲದೆ ಇರಬಹುದು. ಎಷ್ಟು ರಾಜಕಾರಣಿಗಳು ಸಿಎಂಗಳು ಎಷ್ಟು ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರಾಗಿಲ್ಲಾ…?ʼʼ ಎಂದು ಕೇಳಿದರು. ʻʻರೈತರ ಕಷ್ಟ ಏನು ಅಂತ ಇವರಿಗೆ ಗೊತ್ತಾ…? ಮತ್ತೆ ಯಾಕೆ ಕಾವೇರಿ ಹತ್ತಿರ ಹೋಗಿ ಡ್ರಾಮಾ ಮಾಡ್ತಿದಾರೆʼʼ ಎಂದು ಪ್ರಶ್ನಿಸಿದರು.