ಬೆಂಗಳೂರು: ಸ್ತ್ರಿಶಕ್ತಿ ಸಂಘದವರು ಇಂದು ಪುರುಷರಿಗೆ ಸಾಲ ಕೊಡುವಷ್ಟು ದೊಡ್ಡಮಟಟ್ಟಕ್ಕೆ ಬೆಳೆದಿವೆ. ಈ ಶ್ರೆಯಸ್ಸು ಮೊಟಮ್ಮ ಅವರಿಗೆ ಸಲ್ಲಬೇಕು ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ಹೇಳಿದರು.
ಮಾಜಿ ಸಚಿವೆ ಮೋಟಮ್ಮನವರ ಆತ್ಮಚರಿತ್ರೆ ʼಬಿದಿರು ನೀನಾರಿಗಲ್ಲದವಳುʼ ಪುಸ್ತಕ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಆಯಿತು. ಈ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಮಾತನಾಡಿದರು.
ಇದನ್ನೂ ಓದಿ | ಬಿದಿರು ನೀನ್ಯಾರಿಗಲ್ಲದವಳು! ಬರಲಿದೆ ಮಾಜಿ ಸಚಿವೆ ಮೋಟಮ್ಮ ಆತ್ಮಕಥನ
ರಾಜ್ಯದಲ್ಲಿ ಸ್ತ್ರೀಶಕ್ತಿ ಸಂಘಗಳ ಸ್ಥಾಪನೆಗೆ ನಾಂದಿ ಹಾಡುವ ಮೂಲಕ ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬಿದ್ದಾರೆ. ಸ್ತ್ರೀಶಕ್ತಿ ಸಂಘಗಳ ಸ್ಥಾಪನೆಗೆ ಸಂಬಂಧಿಸಿದ ಯೋಜನೆ ಪರಿಚಯಿಸಿದಾಗ ಅದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತುಮಕೂರಿನಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಲಕ್ಷಾಂತರ ಮಹಿಳೆಯರು ಆಗಮಿಸಿದ್ದರು. ನಂತರದಲ್ಲಿ ಸ್ತ್ರೀಶಕ್ತಿ ಸಂಘಗಳು ಸಾಕಷ್ಟು ಏಳಿಗೆ ಸಾಧಿಸಿದ್ದು, ಪುರುಷರಿಗೆ ಸಾಲ ಕೊಡುವಷ್ಟರ ಮಟ್ಟಿಗೆ ಬೆಳೆದಿವೆ ಎಂದು ಹೇಳಿದರು.
ಕೆಪಿಸಿಸಿ ಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ನಮ್ಮ ಮನೆಯ, ಕುಟುಂಬದ ಹೆಣ್ಣು ಮಗಳ ಕಾರ್ಯಕ್ರಮ ಎಂದು ಭಾವಿಸಿ ಬಂದಿದ್ದೇನೆ. ನಿಮ್ಮ ಜತೆ ನಾನು ಎಂದೆಂದಿಗೂ ಇರುತ್ತೇನೆ ಎಂದು ಹೇಳಲು ಬಂದಿದ್ದೇನೆ. ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಯೋಜನೆ ಮಾಡಿದ್ದರು. ಈ ಜವಾಬ್ದಾರಿಯನ್ನು ಮೋಟಮ್ಮನವರಿಗೆ ವಹಿಸಲಾಯಿತು. ಆಗ ಅನುಷ್ಠಾನಕ್ಕೆ ಬಂದ ಸ್ತ್ರೀ ಶಕ್ತಿ ಯೋಜನೆ ಇಂದು ಸಮಾಜದಲ್ಲಿ ಬಹಳ ಆಳವಾಗಿ ಬೇರೂರಿದೆ.
ಸಹಕಾರ ಕ್ಷೇತ್ರವಲ್ಲದೆ ಖಾಸಗಿಯವರೂ ಈ ಯೋಜನೆ ಜಾರಿಗೆ ತಂದಿದ್ದಾರೆ. ಧರ್ಮಸ್ಥಳ ಗ್ರಾಮೀಣ ಯೋಜನೆಯಲ್ಲೂ ಸ್ತ್ರೀಶಕ್ತಿ ಗುಂಪುಗಳಿವೆ. ಅಂತಹ ಮಹಾನ್ ಯೋಜನೆ ಎಸ್.ಎಂ. ಕೃಷ್ಣ, ನಾವು, ಮೋಟಮ್ಮ ಎಲ್ಲ ಸೇರಿ ಯಶಸ್ವಿಗೊಳಿಸಿದೆವು.
ಮೋಟಮ್ಮ ಅವರ ಆತ್ಮಚರಿತ್ರೆಯ ಹೆಸರು ʼಬಿದಿರು ನೀನ್ಯಾರಿಗಲ್ಲದವಳುʼ ಎಂದು. ಬಿದಿರು ಕೂಡ ಪ್ರಕೃತಿಯ ಉತ್ತಮ ಕೊಡುಗೆ. ಹಿಂದೆ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಹೊರಟಾಗ ಅವರ ಗುರು ಹೇಳಿದ್ದರಂತೆ. ನೀನು ಭಾರತದಿಂದ ವಾಪಾಸ್ಸು ಬರುತ್ತಿಯೋ ಇಲ್ಲವೋ ಗೊತ್ತಿಲ್ಲ. ಆದರೆ ನೀನು ವಾಪಸ್ಸು ಬರುವಾಗ 5 ವಸ್ತುಗಳನ್ನು ಮರೆಯದೆ ತೆಗೆದುಕೊಂಡು ಬಾ. ರಾಮಾಯಣ, ಮಹಾಭಾರತ ಗ್ರಂಥ, ಗಂಗಾ ಜಲ, ಕೃಷ್ಣನ ಕೊಳಲು ಹಾಗೂ ಒಬ್ಬ ತತ್ವಜ್ಞಾನಿಯನ್ನು ಕರೆದು ತಾ. ಆಗ ನೀನು ಇಡೀ ಭಾರತವನ್ನೇ ಗೆದ್ದು ತಂದಂತೆ ಎಂದು ಹೇಳಿದ್ದರು.
ಕೊಳಲು ಬಿದಿರಿನಿಂದ ಮಾಡಿದ್ದು. ತಾನು ಕೊಳಲಾಗುತ್ತೇನೆ ಎಂದು ಬಿದಿರಿಗೆ ಗೊತ್ತಿರುವುದಿಲ್ಲ,. ಕೊಳಲಿಗೂ ಗೊತ್ತಿರುವುದಿಲ್ಲ, ತನ್ನಿಂದ ಇಂಪಾದ ನಾದ ಹೊರಹೊಮ್ಮತ್ತದೆ ಎಂದು. ಆ ನಾದಕ್ಕೂ ಗೊತ್ತಿರುವುದಿಲ್ಲಾ, ತನ್ನಿಂದ ಜನಕ್ಕೆ ಆನಂದವಾಗುತ್ತದೆ ಎಂದು. ಹಾಗೆಯೇ, ತಾವು ಹೋರಾಟ ಮಾಡಿ, ಸಮಾಜ ಸೇವೆ ಮಾಡಿ, ಶಾಸಕರಾಗಿ, ಮಂತ್ರಿಯಾಗಿ ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಮೋಟಮ್ಮನವರಿಗೂ ಗೊತ್ತಿರಲಿಲ್ಲ,. ಮೋಟಮ್ಮನವರ ಜೀವನ ಚರಿತ್ರೆಯ ಹೆಸರು ಸೂಕ್ತವಾಗಿದೆ ಎಂದರು.
ಮೋಟಮ್ಮ ಅವರ ಮಗಳು ನಯನ ಹೇಳಿದಂತೆ ನಾನು ಅವರ ರಾಜಕೀಯ ಗುರು ಎಂಬ ಮಾತುಗಳು ಒಪ್ಪಲು ಸಿದ್ದನಿಲ್ಲ. ಅಮ್ಮನ ನೆನಪು ಪ್ರೀತಿಯ ಮೂಲ. ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಸ್ನೇಹದ ನೆನಪು ಸಂಬಂಧದ ಮೂಲ, ಈ ನಾಲ್ಕರ ನೆನಪು ಮನುಷ್ಯತ್ವದ ಮೂಲ. ಹಾಗೆ ನಾವೆಲ್ಲಾ ನಮ್ಮದೇ ಆದ ಪ್ರೀತಿ, ಸ್ನೇಹ, ಸಂಬಂಧದ ಆಧಾರದ ಮೇಲೆ ಬದುಕು ನಡೆಸುತ್ತಿದ್ದೇವೆ ಎಂದರು.
ಮಾಜಿ ಸಚಿವ ಡಾ. ಜಿ. ಪರಮೇಶ್ವರ್, ಹಿರಿಯ ಸಾಹಿತಿ ಕಮಲಾ ಹಂಪನಾ, ಮಾಜಿ ಸಚಿವೆಯರಾದ ಬಿ.ಟಿ. ಲಲಿತಾ ನಾಯಕ್, ರಾಣಿ ಸತೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಪಠ್ಯಪುಸ್ತಕ ನೆಪದಲ್ಲಿ ಅಶಾಂತಿ: ಸಿಎಂ ರಾಜೀನಾಮೆಗೆ ಡಿ. ಕೆ. ಶಿವಕುಮಾರ್ ಆಗ್ರಹ