ಬೆಂಗಳೂರು: ದೇವಸ್ಥಾನದ (Hindu Temple) ಪಾವಿತ್ರ್ಯವನ್ನು ಕಾಪಾಡಲು ದೇವಸ್ಥಾನದ ಪರಿಸರದಲ್ಲಿ ಯಾವುದೇ ಕಾರಣಕ್ಕೂ ಹಿಂದುಯೇತರರಿಗೆ, ನಾಸ್ತಿಕರಿಗೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನಿರಾಕರಿಸಿ ಧರ್ಮದಾಯ ಅಧಿನಿಯಮ ಕಾಯಿದೆಯ ಕಲಂ 29 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಲಾಯಿತು.
ಮಹಾಸಂಘದ ರಾಜ್ಯ ಸಂಯೋಜಕ ಮೋಹನ್ ಗೌಡ ಅವರು ಮಾತನಾಡಿ, ಹಿಂದೂ ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಶ್ರದ್ಧಾ ಕೇಂದ್ರ. ದೇವಸ್ಥಾನಗಳಿಗೆ ಅದರದ್ದೇ ಆದ ವಿಶೇಷವಾದ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆ ಮತ್ತು ಮಹತ್ವವಿದೆ. ದೇವಸ್ಥಾನಗಳಲ್ಲಿ ಪ್ರತಿನಿತ್ಯ ನಡೆಯುವ ಪೂಜೆ, ಅರ್ಚನೆ, ಹೋಮ-ಹವನ ಮುಂತಾದ ಧಾರ್ಮಿಕ ವಿಧಿಗಳಿಂದ ದೇವಸ್ಥಾನದಲ್ಲಿ, ದೇವತೆಗಳ ಸ್ಥಾನದಲ್ಲಿ ಸಾತ್ವಿಕತೆ ನಿರ್ಮಾಣವಾಗಿರುತ್ತದೆ. ಅದರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಭಕ್ತ, ವಿಶ್ವಸ್ಥರ ಕರ್ತವ್ಯ. ಇದರ ಸಂರಕ್ಷಣೆಗಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಅಧಿನಿಯಮ 1997ರ ಕಾಯಿದೆಗೆ 2002ರಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದರು.
ಈಗ ಮಾರ್ಚ್, ಏಪ್ರಿಲ್‌ನಲ್ಲಿ ಬಹುತೇಕ ಎಲ್ಲ ದೇವಸ್ಥಾನಗಳ ವಾರ್ಷಿಕ ಜಾತ್ರೆಯು ಪ್ರಾರಂಭವಾಗುತ್ತಿದೆ. ಉದಾ: ಬೆಂಗಳೂರು ಕರಗ, ಬನ್ನೇರುಘಟ್ಟ ರಸ್ತೆಯಲ್ಲಿನ ಚಂಪಕ ರಾಮ ದೇವಸ್ಥಾನ ಜಾತ್ರೆ. ಈ ವಾರ್ಷಿಕ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೊಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತದೆ. ಇದರ ದುರುಪಯೋಗವನ್ನು ಪಡೆಯಲು ಅನ್ಯ ಸಮುದಾಯದವರು, ದೇವರ ಮೇಲೆ ನಂಬಿಕೆ ಇಲ್ಲದ ನಾಸ್ತಿಕರು ದೇವಸ್ಥಾನದ ಪ್ರಾಂಗಣ, ಪರಿಸರದಲ್ಲಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ವ್ಯಾಪಾರ ಮಾಡುವುದು ಗಮನಕ್ಕೆ ಬರುತ್ತದೆ. ಇದರಿಂದ ದೇವಸ್ಥಾನದ ಸಾತ್ತ್ವಿಕ ವಾತಾವರಣವು ಹಾಳಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಅಧಿನಿಯಮ 1997ರ ಕಾಯಿದೆಯ ಕಲಂ 29 (8)ರಲ್ಲಿ ಹಿಂದೂ ದೇವಸ್ಥಾನದ ಸಮೀಪದ ಜಮೀನು, ಕಟ್ಟಡ, ನಿವೇಶನಗಳು ಸೇರಿ ಯಾವುದೇ ಸ್ವತ್ತನ್ನು ಹಿಂದೂಯೇತರರಿಗೆ ನೀಡಬಾರದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಹಿಂದೂ ದೇವಸ್ಥಾನಗಳ ಜಾಗವನ್ನು ಅಕ್ರಮವಾಗಿ ಕಬಳಿಸಿ, ಅಲ್ಲಿ ಹಿಂದೂಯೇತರರು ಪಾವಿತ್ರ್ಯತೆಗೆ ಧಕ್ಕೆ ತರುವ ರೀತಿಯಲ್ಲಿ ಅಂಗಡಿಯನ್ನು ಹಾಕಿರುವುದು ಗಮನಕ್ಕೆ ಬಂದಿದೆ. ಇಲಾಖೆಯ ಅಧಿಕಾರಿಗಳು ದೇವಸ್ಥಾನಗಳ ಜಾಗದ ಸಂರಕ್ಷಣೆ ಬಗ್ಗೆ ಯಾವುದೇ ಕ್ರಮ ಜರುಗಿಸದಿರುವುದು ಬೇಜವ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದು ಮೋಹನ್ ಗೌಡ ಅವರು ತಿಳಿಸಿದರು.
ಈಗಲಾದರೂ ಇಲಾಖೆಯು ಎಚ್ಚೆತ್ತುಕೊಂಡು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಬರುವ ದೇವಸ್ಥಾನಗಳ ಜಾಗದಲ್ಲಿ ಧಾರ್ಮಿಕ ದತ್ತಿ ಕಾಯಿದೆಗೆ ವಿರುದ್ಧವಾಗಿ ಹಿಂದೂಯೇತರರು ಅಂಗಡಿಯನ್ನು ಹಾಕಿದ್ದರೆ ಕೂಡಲೇ ತೆರವುಗೊಳಿಸಬೇಕು. ತುಂಡು ಗುತ್ತಿಗೆಯನ್ನು ಹಿಂದೂಯೇತರರಿಗೆ ನೀಡಬಾರದು. ಅಷ್ಟೇ ಅಲ್ಲದೇ ಹಿಂದೂ ದೇವಸ್ಥಾನಗಳ ವಾರ್ಷಿಕ ಜಾತ್ರೆಯಲ್ಲಿ ಹಿಂದೂಯೇತರರು, ಹಿಂದೂ ಧಾರ್ಮಿಕ ನಂಬಿಕೆಯನ್ನು ಗೌರವಿಸದವರಿಗೆ ಅಂಗಡಿಯನ್ನು ಹಾಕಲು ಅವಕಾಶ ನೀಡದಂತೆ ವಿಶೇಷ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಧರ್ಮ ದಂಗಲ್ | ಮುಸ್ಲಿಂ ವ್ಯಕ್ತಿಯಿಂದ ಹಿಂದು ಹೆಸರಲ್ಲಿ ಅಂಗಡಿ ಆರೋಪ; ಹಿಂದು ಸಂಘಟನೆಗಳ ಆಕ್ರೋಶ, ಪೊಲೀಸ್ ದೂರು
ಈ ವೇಳೆ ನ್ಯಾಯವಾದಿ ಪ್ರಸನ್ನ ಡಿ.ಪಿ., ರಾಘವೇಂದ್ರಾಚಾರ್, ಶ್ಯಾಮಸುಂದರ್, ಆರ್ಚಕ ಎಂ. ಭಾಗ್ವತ್, ಹಿಂದೂ ಜನಜಾಗೃತಿ ಸಮಿತಿಯ ನೀಲೇಶ್ವರ ಬಿ.ಎಂ ಮತ್ತಿತರರು ಉಪಸ್ಥಿತರಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ