ಬೆಂಗಳೂರು: ಚಿಕಿತ್ಸೆ ಹೆಸರಲ್ಲಿ ವಿಕೃತಿ ಮೆರೆಯುತ್ತಿದ್ದ ಸೈಕೋ ವೈದ್ಯನೊಬ್ಬನನ್ನು ಬಂಧಿಸಲಾಗಿದೆ. ಮಹಿಳೆಯರ ಜತೆಗೆ ಅಶ್ಲೀಲವಾಗಿ ವರ್ತಿಸಿ, ಆಂಧ್ರಕ್ಕೆ ಪರಾರಿಯಾಗಿದ್ದ ಈತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಆಸ್ಪತ್ರೆಗೆ ಬರುವ ಮಹಿಳೆಯರ ವಿಡಿಯೋ ಕದ್ದು ಚಿತ್ರೀಕರಿಸುತ್ತಿದ್ದ ಈತನ ದುರ್ವರ್ತನೆ ಯುವತಿಯೊಬ್ಬರ ಸಮಯಪ್ರಜ್ಞೆಯಿಂದ ಬೆಳಕಿಗೆ ಬಂದಿದೆ. ಯಶವಂತಪುರದ ಮತ್ತಿಕೆರೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ವೆಂಕಟರಮಣ ಎಂಬ ವೈದ್ಯನೇ ಈತ. ಇವನು ನ್ಯಾಚುರೋಪಥಿ ಮತ್ತು ಅಕ್ಯೂಪಂಕ್ಚರ್ ಚಿಕಿತ್ಸೆ ನೀಡುತ್ತಿದ್ದ. ಕಾಲು ನೋವು ಎಂದು ಚಿಕಿತ್ಸೆಗೆ ಬಂದಿದ್ದ ಮಹಿಳೆ ಜತೆ ಚಿಕಿತ್ಸೆ ನೆಪದಲ್ಲಿ ಅನುಚಿತವಾಗಿ ನಡೆದುಕೊಂಡಿದ್ದು, ಖಾಸಗಿ ಅಂಗಗಳಿಗೂ ಇಂಜೆಕ್ಷನ್ ನೀಡಲು ಮುಂದಾಗಿದ್ದ. ಟ್ರಿಟ್ಮೆಂಟ್ ಹೆಸರಲ್ಲಿ ಕಳ್ಳತನದಿಂದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಇದು ಗೊತ್ತಾಗುತ್ತಿದ್ದಂತೆ ಯುವತಿ ಕುಟುಂಬಸ್ಥರ ಬಳಿ ದೂರಿದ್ದು, ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ | Delhi crime | ಶ್ರದ್ಧಾ ತಲೆಯನ್ನು ಫ್ರಿಜ್ಜಿನಲ್ಲಿಟ್ಟು ಪ್ರತಿದಿನ ನೋಡುತ್ತಿದ್ದ ಸೈಕೋ ಅಫ್ತಾಬ್
ವೈದ್ಯನ ವಿರುದ್ಧ ಐಪಿಸಿ 354c ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ವೈದ್ಯ ಆಂಧ್ರಪ್ರದೇಶಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದ. ಪ್ರಕರಣ ಯಶವಂತಪುರ ಪೊಲೀಸರಿಂದ ಸಿಸಿಬಿಗೆ ವರ್ಗಾವಣೆಯಾಗಿದ್ದು, ಸಿಸಿಬಿ ಪೊಲೀಸರು ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಸಿಸಿಬಿ ಪೊಲೀಸರು ವೈದ್ಯ ವೆಂಕಟರಮಣನ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ, ಈತ ಮೊಬೈಲ್‌ನಲ್ಲಿ ಹಲವು ಮಹಿಳೆಯರ ವಿಡಿಯೋ ಮಾಡಿದ್ದು ಪತ್ತೆಯಾಗಿದೆ. ಚಿಕಿತ್ಸೆ ವೇಳೆ ಕದ್ದು ರೆಕಾರ್ಡ್ ಮಾಡಿರುವ ಇಂಥ ಹಲವಾರು ವಿಡಿಯೋಗಳು ಪತ್ತೆಯಾಗಿವೆ. ಪ್ರಶ್ನೆ ಮಾಡಿದರೆ ಚಿಕಿತ್ಸೆ ಕೊಡುವಾಗ ಕಾಯಿಲೆಯ ಮೂಲವನ್ನ ಹುಡುಕಬೇಕು ಎನ್ನುತ್ತಿದ್ದ. ಚಿಕಿತ್ಸೆ ಬೇಕಾದರೆ ಪಡೆಯಿರಿ, ಇಲ್ಲವಾದರೆ ಹೊರಡಿ ಎನ್ನುತ್ತಿದ್ದ. ಹಲವು ತಿಂಗಳಿಂದ ಈ ಕೃತ್ಯವನ್ನು ಈತ ಎಸಗುತ್ತಿದ್ದು, ಯಶವಂತಪುರ, ಬಸವನಗುಡಿ ಹಾಗೂ ಸಿಸಿಬಿ ಸೈಬರ್ ಸೆಲ್‌ನಲ್ಲಿಯೂ ಈಗ ದೂರುಗಳು ದಾಖಲಾಗಿವೆ.