ಬೆಂಗಳೂರು: ಬೆಂಗಳೂರಿನ ಆ ಏರಿಯಾ ನಿವಾಸಿಗಳು ಮನೆಯಿಂದ ಹೊರಬರಬೇಕಾದರೂ ಸಾವಿರ ಸಲ ಯೋಚನೆ ಮಾಡಬೇಕು. ಯಾಕೆಂದರೆ ರಸ್ತೆಯಲ್ಲಿ ಹೋಗುವಾಗ ಯಾವ ಬೀದಿ ನಾಯಿ (Dog Bite) ಎಲ್ಲಿಂದ ಬಂದು ಕಚ್ಚುತ್ತೋ ಅನ್ನೋ ಆತಂಕದಲ್ಲೇ ದಿನದೂಡುತ್ತಿದ್ದಾರೆ.
ಒಂದು ತಿಂಗಳಲ್ಲಿ 40ಕ್ಕೂ ಅಧಿಕ ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದೆ. ನಿತ್ಯ ನಾಯಿ ದಾಳಿಯಿಂದಾಗಿ ಜನರು ಆಸ್ಪತ್ರೆಪಾಲಾಗಿದ್ದಾರೆ. ಬೆಂಗಳೂರಿನ ಬಾಣಸವಾಡಿಯ ಓಎಂಬಿಆರ್ ಲೇಔಟ್ ಬರೋಬ್ಬರಿ 40 ಬೀದಿ ನಾಯಿಗಳು ಇವೆ. ಸ್ಥಳೀಯರು ಬೀದಿ ನಾಯಿಗಳಿಗೆ ಹೆದರಿ ಏರಿಯಾಗೆ ಹೋಗಲು ಭಯ ಪಡುವಂತಾಗಿದೆ.
ಬೀದಿ ನಾಯಿಗಳ ಹಾವಳಿಗೆ ಬೇಸತ್ತು ಮನೆ ಖಾಲಿ ಮಾಡಲು ಮುಂದಾಗಿದ್ದಾರೆ. ಸಂಜೆ 7 ಗಂಟೆ ಮೇಲೆ ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಮನೆಗೆ ಸಂಬಂಧಿಕರು ಬರುತ್ತಿಲ್ಲ, ಮಕ್ಕಳು ಸ್ಕೂಲ್‌ಗೆ ಹೋಗುತ್ತಿಲ್ಲ. ವೃದ್ಧ ಹೊರಗೆ ಕಾಲಿಡುವಂತಿಲ್ಲ ಎಂದು ಗೋಳಾಡುತ್ತಿದ್ದಾರೆ. ದಿನಕ್ಕೆ ಕನಿಷ್ಠ ಇಬ್ಬರ ಮೇಲೆ ನಾಯಿಗಳು ದಾಳಿ ನಡೆಸುತ್ತಿವೆ. ಬಿಬಿಎಂಪಿ ಅಧಿಕಾರಿಗಳಿಗೆ ದೂರು ಕೊಟ್ಟು ಕೊಟ್ಟು ಸುಸ್ತಾದ ಏರಿಯಾದ ಜನರು ಸ್ವಂತ ಮನೆಗಳನ್ನೇ ಮಾರಾಟಕ್ಕಿಟ್ಟಿದ್ದಾರೆ.
ಇದನ್ನೂ ಓದಿ: Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ
ಬೈಕ್ ಸವಾರ ಪ್ರಾಣ ಕಸಿದ ಕಾರು
ಕಾರವಾರ : ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಗಾಂವಗೇರಿ ಬಳಿ ಕಾರು -ಬೈಕ್ ನಡುವೆ (Road Accident) ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರವಾರದ ಕಾಜುಭಾಗದ ನಿವಾಸಿ ವಿನೋದ ನಾಯ್ಕ (30) ಮೃತ ದುರ್ದೈವಿ.
ಸ್ಥಳಕ್ಕೆ ಚಿತ್ತಾಕುಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಚಿತ್ತಾಕುಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆಜಿಎಫ್‌ನಲ್ಲಿ ಏರ್ ಬ್ಲಾಸ್ಟ್
ಕೋಲಾರ ಕೆಜಿಎಫ್ ನಗರದಲ್ಲಿ ಭಯಾನಕ ಜೋರು ಶಬ್ಧ ಕೇಳಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಏರ್ ಬ್ಲಾಸ್ಟ್ ಆಗಿದೆ. ಜೋರು ಶಬ್ದದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೆಜಿಎಫ್ ನಗರದ ಮಾರಿಕುಪ್ಪಂ ಹಾಗೂ ಅಂಡರ್ ಸನ್ ಪೇಟೆ ನಿವಾಸಿಗಳು ಮನೆಯಿಂದ ಹೊರ ಬಂದಿದ್ದರು. ಈ ಬಗ್ಗೆ ಬಿಜಿಎಂಎಲ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಮಾರಿಕುಪ್ಪಂನಲ್ಲಿರುವ ಮೈಸೂರ್ ಮಿಲ್ಸ್‌ನಲ್ಲಿ ಏರ್ ಬ್ಲಾಸ್ಟ್‌ನಿಂದಾಗಿ ಭಾರಿ ಭಯಾನಕ ಶಬ್ಧ ಬಂದಿದೆ ಎಂದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ