Site icon Vistara News

Double Decker Bus : ಮತ್ತೆ ಬರಲಿದೆ ಡಬಲ್‌ ಡೆಕರ್‌ ಬಸ್‌; ಓಡಾಟ ಈ ಮೂರು ರೂಟಲ್ಲಿ ಮಾತ್ರ

Double Decker Bus in Bangalore

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ (Bangalore Metropolitan Corporation-BMTC)ವು ಶೀಘ್ರದಲ್ಲೇ ನಗರದಲ್ಲಿ ಮತ್ತೆ ಡಬಲ್‌ ಡೆಕರ್‌ ಬಸ್‌ಗಳ (double decker bus) ಓಡಾಟಕ್ಕೆ ಮುಂದಾಗಿದೆ. ಈ ಸಂಬಂಧ ಸುಮಾರು 10 ಬಸ್‌ಗಳನ್ನು ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್ (Gross Cost Contract-GCC) ಅಡಿ ಪಡೆಯಲು ಶೀಘ್ರವೇ ಟೆಂಡರ್‌ ಕರೆಯಲಿದೆ. ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಡಬಲ್‌ ಡೆಕರ್ ಬಸ್‌ ಸೇವೆ ಒದಗಿಸುವ ಯೋಜನೆಗೆ ಸಚಿವ ಸಂಪುಟದಲ್ಲಿ (Cabinet Green Signal) ಅನುಮತಿ ನೀಡಿದ ಬೆನ್ನಿಗೇ ಪ್ರಕ್ರಿಯೆ ಶುರುವಾಗಿದೆ. ಈ ನಡುವೆ, ಈ ಬಸ್‌ಗಳು ನಗರದ ಯಾವ ರೂಟ್‌ಗಳಲ್ಲಿ ಓಡಾಡಲಿವೆ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.

ಕಾಲು ಶತಮಾನದ ಬಳಿಕ ಡಬಲ್‌ ಡೆಕರ್‌ ಬಸ್‌ ಮತ್ತೆ ಆಗಮನ

ಒಂದು ಕಾಲದಲ್ಲಿ ಡಬಲ್‌ ಡೆಕರ್‌ ಬಸ್‌ ಎನ್ನುವುದು ರಾಜಧಾನಿ ಬೆಂಗಳೂರಿನ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿತ್ತು. ಮುಂಬಯಿ, ಹೈದರಾಬಾದ್‌, ದಿಲ್ಲಿ, ಕೋಲ್ಕೊತಾ ಮತ್ತು ಬೆಂಗಳೂರು ಹೀಗೆ ಆಯ್ದ ನಗರಗಳಲ್ಲಿ ಮಾತ್ರ ಡಬಲ್‌ ಡೆಕರ್‌ ಬಸ್‌ ಓಡಾಟವಿತ್ತು. ಬೆಂಗಳೂರಿನಲ್ಲಿ ಕಡೆಯ ಬಾರಿಗೆ ಡಬಲ್‌ ಡೆಕರ್‌ ಬಸ್‌ ಓಡಿದ್ದು 1997ರಲ್ಲಿ. ಆಗ ಸುಮಾರು 84 ಡಬಲ್‌ ಡೆಕರ್‌ ಬಸ್‌ಗಳ ವೈಭವವಿತ್ತು. ಡಬಲ್‌ ಡೆಕರ್‌ ಬಸ್‌ಗಳ ಕಾರ್ಯ ನಿರ್ವಹಣೆ ಸಮಸ್ಯೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ಅವುಗಳನ್ನು ನೇಪಥ್ಯಕ್ಕೆ ಸರಿಸಲಾಗಿತ್ತು. ಇದೀಗ ಸುಮಾರು 27 ವರ್ಷಗಳ ಬಳಿಕ ಬಸ್‌ಗಳನ್ನು ಮತ್ತೆ ರಸ್ತೆಗೆ ಇಳಿಸಲು ನಿರ್ಧರಿಸಲಾಗಿದೆ.

BMTC Bus

ಬಸ್‌ ಖರೀದಿ ಇಲ್ಲ, ಜಿಸಿಸಿ ಮಾದರಿಯಲ್ಲಿ ನಿರ್ವಹಣೆ

2023ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಬಲ್‌ ಡೆಕರ್‌ ಬಸ್‌ಗಳ ಪ್ರಸ್ತಾಪ ಜೋರಾಗಿ ಕೇಳಿಬಂದಿತ್ತು. ಸರ್ಕಾರವೂ 5 ಡಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಕರೆದಿತ್ತು. ಅಶೋಕ್ ಲೇಲ್ಯಾಂಡ್‌ನ ಎಲೆಕ್ಟ್ರಿಕ್ ವಾಹನ ವಿಭಾಗವಾದ ಸ್ವಿಚ್ ಮೊಬಿಲಿಟಿ ಎಂಬ ಏಕೈಕ ಬಿಡ್ಡರ್ ಐದು ಬಸ್‌ಗಳಿಗೆ 10 ಕೋಟಿ ರೂ. ಟೆಂಡರ್‌ ಸಲ್ಲಿಸಿತ್ತು. ಆದರೆ, ಒಂದು ಬಸ್‌ಗೆ 2 ಕೋಟಿ ರೂ. ಕೊಟ್ಟು ಬಸ್ ಖರೀದಿಸುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಮುಂದೆ ಹೊಸ ಸರ್ಕಾರ ಬಂದ ಬಳಿಕ ಬಸ್‌ ಖರೀದಿ ಪ್ರಸ್ತಾಪವನ್ನು ರದ್ದುಪಡಿಸಲಾಯಿತು. ಆದರೆ, ಡಬಲ್‌ ಡೆಕರ್‌ ಬಸ್‌ ಓಡಿಸುವ ಪ್ರಸ್ತಾವವನ್ನು ಜೀವಂತವಾಗಿಯೇ ಇಡಲಾಗಿತ್ತು.

ಹೊಸ ಅನುಮೋದನೆಯ ಪ್ರಕಾರ ಹೊಸ ಬಸ್‌ ಖರೀದಿಸುವ ಬದಲಾಗಿ ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್ (ಜಿಸಿಸಿ) ಮಾದರಿಯಲ್ಲೇ ಬಸ್ ಪಡೆದು ಕಾರ್ಯಚರಣೆ ನಡೆಸಲು ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. ಶೀಘ್ರವೇ ಸಾರಿಗೆ ಇಲಾಖೆ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಿದೆ. ಜಿಸಿಸಿ ಅಡಿ ಪಡೆಯುವ ಎಲ್ಲ ಬಸ್‌ಗಳು ವಿದ್ಯುತ್‌ ಚಾಲಿತವಾಗಿರಲಿವೆ.

ಇದನ್ನೂ ಓದಿ : Ashwamedha Bus: ಏನಿದು ಸ್ಪೆಷಲ್ ಅಶ್ವಮೇಧ ಬಸ್‌; ಇದರಲ್ಲೂ ಮಹಿಳೆಯರಿಗೆ ಫ್ರೀ

ಹಾಗಿದ್ದರೆ ಯಾವ ರೂಟಿನಲ್ಲಿ ಬಸ್‌ಗಳ ಪ್ರಯಾಣ

ಡಬಲ್‌ ಡೆಕರ್‌ ಬಸ್‌ಗಳನ್ನು ಕಾರ್ಯಾಚರಣೆಗೆ ಬಿಡುವುದೇನೋ ಸರಿ ಇದೆ. ಆದರೆ, ಅದರ ಸಂಚಾರಕ್ಕೆ ಅನುಕೂಲಕರವಾದ ಮಾರ್ಗವನ್ನು ಆಯ್ಕೆ ಮಾಡುವುದು ಕೂಡಾ ಅಷ್ಟೆ ಮುಖ್ಯ. ಯಾಕೆಂದರೆ, ಡಬಲ್‌ ಡೆಕರ್‌ ಬಸ್‌ಗಳು ಸಾಗುವ ಮಾರ್ಗದಲ್ಲಿ ವಿದ್ಯುತ್‌ ತಂತಿಗಳು ಕೆಳಭಾಗದಲ್ಲಿ ಇರಬಾರದು, ಅಂಡರ್‌ ಪಾಸ್‌ಗಳ ಒಳಗೆ ಹೋಗುವಂತಿಲ್ಲ. ಬೆಂಗಳೂರಿನ ಹೆಚ್ಚಿನ ರಸ್ತೆಗಳು ಡಬಲ್‌ ಡೆಕರ್‌ ಬಸ್‌ ಫ್ರೆಂಡ್ಲಿ ಆಗಿಲ್ಲ. ಹೀಗಾಗಿ ಸಾಕಷ್ಟು ಅಧ್ಯಯನದ ಬಳಿಕ ಈಗ ಮೂರು ಮಾರ್ಗಗಳನ್ನು ಆಯ್ಕೆ ಮಾಡಲಾಗಿದೆ.

  1. ಮೆಜೆಸ್ಟಿಕ್‌ ಬಸ್‌ ನಿಲ್ದಾಣದಿಂದ ಶಿವಾಜಿ ನಗರ
  2. ಮೆಜೆಸ್ಟಿಕ್‌ ಬಸ್‌ ನಿಲ್ದಾಣದಿಂದ ಅತ್ತಿಬೆಲೆ
  3. ವಿಜಯನಗರದಿಂದ ಕಲಾಸಿ ಪಾಳ್ಯ
Exit mobile version