ಬೆಂಗಳೂರು: ಗಂಡನ ಮನೆಯವರು ನೀಡುತ್ತಿದ್ದ ವರದಕ್ಷಿಣೆ ಕಿರುಕುಳದಿಂದ (dowry harassment) ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ (dowry death) ಮಾಡಿಕೊಂಡಿದ್ದಾರೆ. ಐಶ್ವರ್ಯ (24) ಆತ್ಮಹತ್ಯೆಗೆ ಶರಣಾದ ವಿವಾಹಿತೆ. ಬೆಂಗಳೂರಿನ ಕಬ್ಬನ್ ಪೇಟೆಯ 2ನೇ ಮುಖ್ಯ ರಸ್ತೆಯ ಮನೆಯಲ್ಲಿ ಘಟನೆ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಐಶ್ವರ್ಯ ಆತ್ಮಹತ್ಯೆ (suicide case) ಮಾಡಿಕೊಂಡಿದ್ದಾರೆ. 2020ರಲ್ಲಿ ಇವರಿಗೆ ಮಂಜುನಾಥ್ ಎಂಬಾತನ ಜತೆಗೆ ವಿವಾಹವಾಗಿತ್ತು. ಹಲಸೂರು ಗೇಟ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಐಶ್ವರ್ಯ ಮೃತದೇಹವನ್ನು ವಿಕ್ಟೋರಿಯಾಗೆ ರವಾನಿಸಲಾಗಿದೆ.
9ನೇ ಫ್ಲೋರ್‌ನಿಂದ ಬಿದ್ದು ಕಾರ್ಮಿಕ ಸಾವು
ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಂಬತ್ತನೇ ಫ್ಲೋರ್‌ನಿಂದ ಕಟ್ಟಡ ಕಾರ್ಮಿಕರೊಬ್ಬರು ಬಿದ್ದು ಸಾವಿಗೀಡಾಗಿದ್ದಾರೆ. ನಿನ್ನೆ ಸಂಜೆ ರಾಚೇನಹಳ್ಳಿಯ ಬ್ರಿಗೇಡ್ ಲಗೂನ ಅಪಾರ್ಟ್ಮೆಂಟ್ ಬಳಿ ಘಟನೆ ನಡೆದಿದೆ.
9ನೇ ಫ್ಲೋರ್‌ನಲ್ಲಿ ಕೆಲಸದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕ (building labor) ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕೆಲಸದ ವೇಳೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಕಾರಣ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಮೃತಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತ ಕಾರ್ಮಿಕರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.
ಅಪಘಾತ, ದ್ವಿಚಕ್ರ ವಾಹನ ಸವಾರ ಸಾವು
ಬೆಂಗಳೂರು: ನಗರದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ, ದ್ವಿಚಕ್ರವಾಹನ ಸವಾರರೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಏಸ್ ವಾಹನ ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ.
ಏಸ್ ವಾಹನ ಚಾಲಕ ವಾಹನವನ್ನು ನಿರ್ಲಕ್ಷ್ಯದಿಂದ ಟರ್ನ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ಏಸ್ ವಾಹನ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ದ್ವಿಚಕ್ರ ವಾಹನ ಚಾಲಕನಿಗೆ ಮುಂದಿನಿಂದ ಬರುತ್ತಿದ್ದ ಮತ್ತೊಂದು ದ್ವಿಚಕ್ರವಾಹನ ಡಿಕ್ಕಿಯಾಗಿದೆ. ಕೆಳಗೆ ಬಿದ್ದ ಸವಾರನ ತಲೆಯ ಮೇಲೆ ಮುಂದಿದ್ದ ದ್ವಿಚಕ್ರವಾಹನ ಹರಿದಿದ್ದು, ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೊಮ್ಮಸಂದ್ರ ಬಳಿ ಇರುವ ಡಿ ಮಾರ್ಟ್ ಬಳಿ ಘಟನೆ ನಡೆದಿದ್ದು, ಮೃತರ ವಿವರ ಕಲೆಹಾಕಲಾಗುತ್ತಿದೆ.
ಇದನ್ನೂ ಓದಿ: Bangalore Metro : ಮೆಟ್ರೋ ಟ್ರೈನ್‌ನಲ್ಲಿ ಕುಸಿದು ಪ್ರಯಾಣಿಕ ಸಾವು; ನಿರ್ಲಕ್ಷ್ಯಕ್ಕೆ ಕೇಸ್ ದಾಖಲು