Site icon Vistara News

ಅ.28ರಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ ಮನೆಮನೆ ಮೇಲೂ 10 ದಿನ ಕನ್ನಡ ಧ್ವಜಾರೋಹಣ: ಡಾ.ಸಿ.ಎನ್.ಅಶ್ವತ್ಥನಾರಾಯಣ

universities meetings to be live telecasted

ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆಮನೆಯ ಮೇಲೂ ಅಕ್ಟೋಬರ್ 28ರಿಂದ ಹತ್ತು ದಿನಗಳ ಕಾಲ ಕನ್ನಡ ಧ್ವಜಾರೋಹಣ ಮಾಡಲಾಗುವುದು ಎಂದು ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ರಾಜ್ಯೋತ್ಸವ ಆಚರಣೆ ಕುರಿತು ಕ್ಷೇತ್ರ ವ್ಯಾಪ್ತಿಯ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಅವರು, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮನೆಮನೆಯ ಮೇಲೆ ರಾಷ್ಟ್ರಧ್ಜಜ ಹಾರಿಸಿದಂತೆಯೇ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವಜ ಹಾರಿಸಲಾಗುವುದು. ಈ ಮೂಲಕ ರಾಜ್ಯೋತ್ಸವಕ್ಕೆ ಸಾಮೂಹಿಕ ಸಂಭ್ರಮದ ಸ್ವರೂಪವನ್ನು ಕೊಡಲಾಗುವುದು ಎಂದ ಹೇಳಿದರು.‌

ಇದನ್ನೂ ಓದಿ | ಆನೇಕಲ್​ ಚಂದಾಪುರ ಕೆರೆ ನಿರ್ವಹಣೆ ವಿಫಲ; ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ದಂಡ ವಿಧಿಸಿದ ಎನ್​ಜಿಟಿ

ಇದರ ಜತೆಗೆ, ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಕಾಲೇಜು ಮೈದಾನದಲ್ಲಿ ‘ಮಲ್ಲೇಶ್ವರ ಶಾಲಾ ಮಾದರಿ’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಶಿಕ್ಷಣದ ಡಿಜಿಟಲೀಕರಣ, ಕಲಿಕಾ ನಿರ್ವಹಣಾ ವ್ಯವಸ್ಥೆ ಮತ್ತು ತಂದಿರುವ ಸುಧಾರಣೆಗಳನ್ನು ಕುರಿತು ಜನರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ, ಸರ್ಕಾರವು ಈಗಾಗಲೇ ಘೋಷಿಸಿರುವಂತೆ ಅ.28ರಂದು ಬೆಳಗ್ಗೆ 11 ಗಂಟೆಗೆ ಮಲ್ಲೇಶ್ವರ ವ್ಯಾಪ್ತಿಯಲ್ಲಿರುವ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳು ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ‘ಕೋಟಿ ಕಂಠ ಗಾಯನ’ ವ್ಯವಸ್ಥಿತವಾಗಿ ನಡೆಯಲಿದೆ. ಇದಕ್ಕೆ ಬೇಕಾದ ಸಿದ್ಧತೆ ನಡೆಯುತ್ತಿದೆ. ಇದರಲ್ಲಿ ಭಾಗವಹಿಸಲು ಅ.20ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಜತೆಗೆ ಪ್ರತಿಯೊಂದು ಬಡಾವಣೆಯಲ್ಲೂ ಕ್ಯೂಆರ್ ಕೋಡ್‌ ಮೂಲಕ ಈ ಪ್ರಕ್ರಿಯೆ ವ್ಯಾಪಕವಾಗಿ ನಡೆಯಲಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಮಕ್ಕಳು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಾಗೆಯೇ 1.10 ಕೋಟಿ ಮಕ್ಕಳು ಪ್ರಾಥಮಿಕ ತರಗತಿಗಳಲ್ಲಿದ್ದಾರೆ. ಇವರೆಲ್ಲರೂ ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯೋತ್ಸವವನ್ನು ಎಲ್ಲರೂ ಸ್ವ-ಇಚ್ಛೆ ಮತ್ತು ಸಾಮೂಹಿಕ ಸಂಭ್ರಮಗಳಿಂದ ಆಚರಿಸಬೇಕು ಎಂದು ಆಶಿಸಿದರು.

ಖಾಸಗಿ ಶಾಲಾ ಕಾಲೇಜುಗಳು ಕ್ಷೇತ್ರದ ವ್ಯಾಪ್ತಿಯಲ್ಲಿರುವ ಉಳಿದ ಮೈದಾನಗಳಲ್ಲಿ ಕೋಟಿ ಕಂಠ ಗಾಯನ ಮತ್ತು ರಾಜ್ಯೋತ್ಸವವನ್ನು ಆಚರಿಸಲಿವೆ. ಈ ಸಂಬಂಧ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಎಲ್ಲ ಶಾಲಾ, ಕಾಲೇಜುಗಳೂ ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಬಿಇಒ ಉಮಾದೇವಿ, ರಮಾ, ಹರಿಣಿ, ಬಿಜೆಪಿ ಮಂಡಲ ಅಧ್ಯಕ್ಷೆ ಕಾವೇರಿ ಕೇದಾರನಾಥ್‌, ಹಿರಿಯ ಮುಖಂಡ ಗಣೇಶ್‌ರಾವ್‌, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಯೋಗೇಶ್‌ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | ರಾಹುಲ್‌ ಎನ್ನುವ ಮಿಸೈಲ್‌ ಬಿಟ್ಟಿದ್ದರು, ಅದು ಫೇಲ್‌ ಆಗಿದೆ: ಸಿಎಂ ಬೊಮ್ಮಾಯಿ ವ್ಯಾಖ್ಯಾನ

Exit mobile version