ಬೆಂಗಳೂರು: ಕಾಂಗ್ರೆಸ್ ಕಟ್ಟಾಳಾಗಿ ಪಕ್ಷದ ಆಮೂಲಾಗ್ರ ಸಂಘಟನೆಗೆ ಅವಿರತ ಶ್ರಮಿಸಿರುವ ಡಾ. ಶುಶ್ರುತ್ ಗೌಡ (Dr Sushruth Gowda) ಅವರಿಗೆ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿಯಾಗಿ ಮಹತ್ವದ ಜವಾಬ್ದಾರಿ ಒಲಿದು ಬಂದಿದೆ.
ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ವ್ಯಾಸಂಗ ಮಾಡಿದ ಡಾ.ಶುಶ್ರುತ್‌ಗೌಡ ನರರೋಗ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಮೈಸೂರಿನ ಡಾ.ಎಚ್.ಸಿ.ವಿಷ್ಣುಮೂರ್ತಿ ಹಾಗೂ ಕೆ.ಜಿ. ರೇಖಾಮೂರ್ತಿ ದಂಪತಿಯ ಪುತ್ರನಾಗಿರುವ ಡಾ.ಶುಶ್ರುತ್‌ಗೌಡ ತಂದೆಗೆ ತಕ್ಕ ಮಗನಾಗಿ ಹೆಸರು ಮಾಡಿ ಚಿಕ್ಕವಯಸ್ಸಿನಲ್ಲೇ ಅಪಾರ ಕೀರ್ತಿಯನ್ನು ಗಳಿಸಿದ್ದಾರೆ.
ಎಂ.ಬಿ. ಪಾಟೀಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮುಗಿಸಿ ಚೆನ್ನೈನಲ್ಲಿರುವ ಸ್ಟ್ಯಾನ್ಲಿ ಮೆಡಿಕಲ್ ಕಾಲೇಜು ಮತ್ತು ಅಮೆರಿಕದ ಯೂನಿವರ್ಸಿಟಿ ಆಫ್ ಫ್ಲೋರಿಡಾದಲ್ಲಿ ನರರೋಗದ ಬಗ್ಗೆ ಅತ್ಯುನ್ನತ ವಿದ್ಯಾಭ್ಯಾಸವನ್ನು ಪಡೆದು ಪ್ರತಿಭಾವಂತರಾಗಿದ್ದಾರೆ. ಅಮೆರಿಕದ ವಿವಿಧ ಯೂನಿವರ್ಸಿಟಿಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಈ ಹಿನ್ನೆಲೆಯಲ್ಲಿ ಇವರ ಸಾಧನೆಯನ್ನು ಗುರುತಿಸಿ ಯೂನಿವರ್ಸಿಟಿ ಆಫ್ ಪ್ಲೋರಿಡಾದಿಂದ ಡಾ.ಕೆನತ್ ಹೆಲ್ ಮ್ಯಾನ್ ರಿಸರ್ಚ್ ಅವಾರ್ಡ್ ಸೇರಿದಂತೆ ಪ್ರತಿಷ್ಠಿತ ಯೂನಿವರ್ಸಿಟಿಗಳಿಂದ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದ ಇವರು ಹೆಸರಾಂತ ನರರೋಗ ತಜ್ಞರಲ್ಲಿ ಒಬ್ಬರಾಗಿದ್ದಾರೆ.
ಇದನ್ನೂ ಓದಿ | Congress Manifesto: ಕಾಂಗ್ರೆಸ್ ಪ್ರಣಾಳಿಕೆ; ಅಲ್ಪಸಂಖ್ಯಾತರಿಗೆ ವಿಶೇಷ ಕೊಡುಗೆ ಘೋಷಣೆ, ಇಲ್ಲಿದೆ ಪಟ್ಟಿ
ತವರಲ್ಲಿ ಸಮಾಜಸೇವೆ ಮಾಡುವ ಹಂಬಲಕ್ಕೆ ಸ್ವದೇಶಕ್ಕೆ
ವಿದೇಶದಲ್ಲಿ ಹೆಸರಾಂತ ನರರೋಗ ತಜ್ಞರಾಗಿ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಬಹುದಾಗಿತ್ತಾದರೂ ತವರಲ್ಲಿ ಸಮಾಜ ಸೇವೆ ಮಾಡುವ ಹಂಬಲದಿಂದ ಸ್ವದೇಶಕ್ಕೆ ಮರಳಿ ತವರಲ್ಲಿ ಕೆಲಸ ಮಾಡುತ್ತಿದ್ದಾರೆ. ತವರು ಕ್ಷೇತ್ರದಲ್ಲಿ ಕೆಲಸ ಮಾಡುವ ಸಲುವಾಗಿ ಪ್ರಸ್ತುತ ಪ್ರತಿಷ್ಠಿತ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ನರರೋಗ ಕೇಂದ್ರವನ್ನು ತೆರೆದು ಸಾವಿರಾರು ರೋಗಿಗಳಿಗೆ ಶುಶ್ರೂಷೆ ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಡವರು, ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ನರರೋಗ ಸಮಸ್ಯೆಯನ್ನು ಹೊತ್ತು ಬಂದವರಿಗೆ ಚಿಕಿತ್ಸೆ ನೀಡುವ ಮೂಲಕ ಅವರ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದ್ದಾರೆ. ಇದರಿಂದಾಗಿಯೇ ನಗರದಲ್ಲಿ ಇವರ ಕೈಗುಣದ ಸೇವೆ ಪಡೆಯಲು ಅನೇಕರು ಮುಂಚಿತವಾಗಿ ನೋಂದಣಿ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವುದು ವಿಶೇಷವಾಗಿದೆ.
ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ
ಕೊರೊನಾ ಕಾಲದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಆರಂಭಿಸಿದ ಟೆಲಿ ಮೆಡಿಸನ್ ಚಿಕಿತ್ಸೆ ಸೇವೆ ಇಂದಿಗೂ ಮುಂದುವರಿಯುವ ಜತೆಗೆ ಇದುವರೆಗೂ 13,500 ಮಂದಿಗೆ ಅತ್ಯಾಧುನಿಕ ಶೈಲಿಯ ಚಿಕಿತ್ಸೆಯನ್ನು ನೀಡಿರುವುದು ವಿಶೇಷವಾಗಿದೆ. ಕೋವಿಡ್ ಕಾಣಿಸಿಕೊಂಡ ಮೇಲೆ ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ಆಸ್ಪತ್ರೆಗೆ ಬರುವುದು ತುಂಬಾ ತೊಂದರೆಯಾಗಿದ್ದ ಕಾರಣ ಅಮೆರಿಕ ದೇಶದಲ್ಲಿರುವ ವ್ಯವಸ್ಥೆಯ ಮಾದರಿಯನ್ನೇ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಟೆಲಿಹೆಲ್ತ್ ಅಡ್ವೈಸರಿ ಫಾರ್ ರೂರಲ್ ರೆನ್ ಪ್ರಾರಂಭಿಸಿ ಸೇವೆ ನೀಡಲಾಗುತ್ತಿತ್ತು. ಕಡಕೊಳ, ಸಿಂಧುವಳ್ಳಿ, ಸಿದ್ದಲಿಂಗಪುರ, ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಗಿರಿಜನರು ಹೆಚ್ಚಾಗಿ ವಾಸಿಸುವ ಹಾಡಿಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಮಧುಮೇಹ, ಅಸ್ತಮಾ ಸಣ್ಣ ಸಣ್ಣ ಸಮಸ್ಯೆಗಳಿಗೆ ಸೀಮಿತವಾಗದೆ ನುರಿತ ತಜ್ಞ ವೈದ್ಯರ ಮೂಲಕಟೆಲಿಮೆಡಿಸನ್ ಮೂಲಕ ಸೇವೆ ನೀಡಲಾಗುತ್ತಿದೆ.
ಅದೇ ರೀತಿ ಹೃದ್ರೋಗ, ನರರೋಗ, ಗ್ಯಾಸ್ಟ್ರೋಎಂಟರಾಲಜಿ, ಪ್ರಸೂತಿ ಮೊದಲಾದ ಕಾಯಿಲೆಗಳ ರೋಗಿಗಳಿಗೆ ಆಸ್ಪತ್ರೆಯಿಂದಲೇ ಸಮಾಲೋಚನೆ ನಡೆಸುವ ಮೂಲಕ ಗಮನ ಸೆಳೆಯಲಾಗಿತ್ತು. ಇದುವರೆಗೂ 60ಕ್ಕೂ ಹೆಚ್ಚು ಕ್ಯಾಂಪ್‌ಗಳನ್ನು ನಡೆಸಿ 13500 ಮಂದಿಗೆ ಅನುಕೂಲ ಕಲ್ಪಿಸಲಾಗಿದೆ. ಆಶಾ ಕಾರ್ಯಕರ್ತರು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದರಿಂದ ಆರೋಗ್ಯ ತಪಾಸಣೆ ಮಾಡುವ ಜತೆಗೆ, ನಗರದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿರ ಆರೋಗ್ಯದ ಹಿತದೃಷ್ಟಿಯಿಂದ 2 ಸಾವಿರ ಪೌರ ಕಾರ್ಮಿಕರಿಗೆ ಆರೋಗ್ಯ ಶಿಬಿರ ನಡೆಸಿ ಅನುಕೂಲ ಮಾಡಲಾಗಿದೆ. ಇದಲ್ಲದೆ, ಕೆ.ಆರ್.ಆಸ್ಪತ್ರೆ, ಎಸ್‌ಎಂಟಿ ಆಸ್ಪತ್ರೆ, ರಾಜೀವ್‌ನಗರ ಆಸ್ಪತ್ರೆಗೆ ಜಂಬೋ ಸಿಲಿಂಡರ್, ಆಕ್ಸಿಜನ್ ಸಿಲಿಂಡರ್ ಮೊದಲಾದ ವೈದ್ಯಕೀಯ ಸಲಕರಣೆಗಳನ್ನು ವಿತರಿಸುವ ಮೂಲಕ ಅನುಕೂಲ ಮಾಡಿದ್ದನ್ನು ಇಂದಿಗೂ ವೈದ್ಯರು ಮತ್ತು ಸಾರ್ವಜನಿಕರು ನೆನಪಿಸಿಕೊಳ್ಳುತ್ತಾರೆ.
ಇದನ್ನೂ ಓದಿ | Lok Sabha Election 2024: ಚುನಾವಣೆ ಅಕ್ರಮ ತಡೆಯಲು ವೆಬ್ ಕಾಸ್ಟಿಂಗ್, ಡಿಸಿಯಿಂದಲೇ ನೇರ ವೀಕ್ಷಣೆ
ಎಐಸಿಸಿ ಮಾಜಿ ಅಧ್ಯಕ್ಷ,ಯುವ ನಾಯಕ ರಾಹುಲ್‌ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರ ತನಕ ನಡೆಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಂಡು ಹಿರಿಯ ನಾಯಕರನ್ನು ಆಕರ್ಷಿಸುವ ಜತೆಗೆ ತಮ್ಮದೇ ಆದ ಹಳ್ಳಿಗಳನ್ನು ಅಭಿವೃದ್ಧಿಪಡಿಸಲು ಕಂಡಿರುವ ಕನಸುಗಳ ಬಗ್ಗೆ ಮನವರಿಕೆ ಮಾಡಿದ ಫಲವಾಗಿ ಇಂದು ಎಲ್ಲರ ಗಮನ ಸೆಳೆದಿದ್ದಾರೆ. ಮೈಸೂರು, ಕೊಡಗು ಲೋಕಸಭಾ ಅಭ್ಯರ್ಥಿಗಳ ಆಯ್ಕೆಪಟ್ಟಿಯ ಸಾಲಿನಲ್ಲಿ ಕೂಡ ಇವರ ಹೆಸರು ಕೇಳಿ ಬರುತ್ತಿತ್ತು. ಈಗ ಇವರಿಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಸ್ಥಾನ ದೊರೆತ್ತಿರುವುದು ಇವರ ಬೆಂಬಲಿಗರಲ್ಲಿ ಸಂತಸವನ್ನು ಉಂಟು ಮಾಡಿದೆ.
ನಾನು ವೈದ್ಯನಾಗಿ ಮತ್ತು ಸಾಮಾಜಿಕ ಸೇವೆಗಾಗಿ ಕಳೆದ ನಾಲ್ಕೈದು ವರ್ಷಗಳಿಂದ ಪಕ್ಷದ ಸಂಘಟನೆ ಮತ್ತು ಸೇವೆಯನ್ನು ಗುರುತಿಸಿ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಜೀ ಅವರು, ಕೆ.ಸಿ ವೇಣಗೋಪಾಲ್ ಅವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು, ಪಕ್ಷಕ್ಕೆ ಇನ್ನು ಹೆಚ್ಚಿನ ರಾಷ್ಟ್ರದಾದ್ಯಂತ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿದ್ದಕ್ಕಾಗಿ ಚಿರ ಋಣಿಯಾಗಿರುತ್ತೇನೆ ಹಾಗೂ ಸಮಾಜದ ಒಳಿತಿಗಾಗಿ ಮತ್ತು ಪಕ್ಷದ ಸೇವೆ ಸಲ್ಲಿಸಲು ಸದಾ ಸಿದ್ಧನಿರುತ್ತೇನೆ.
| ಡಾ.ಶುಶ್ರುತ್ ಗೌಡ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ