ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆಯಾದ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ (Kidwai Memorial Institute of Oncology) ನಿರ್ದೇಶಕ ಸ್ಥಾನದಿಂದ ಡಾ. ವಿ. ಲೋಕೇಶ್ (Director Dr. V Lokesh) ಅವರನ್ನು ವಜಾಗೊಳಿಸಿ ಸರ್ಕಾರ ಆದೇಶ (Suspended from director post) ಹೊರಡಿಸಿದೆ. ಅವರ ಸ್ಥಾನಕ್ಕೆ ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ಸೈಯದ್ ಅಲ್ತಾಫ್ (Dr Syed Altaf) ಅವನ್ನು ತಾತ್ಕಾಲಿಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಕಿದ್ವಾಯಿ ಆಸ್ಪತ್ರೆಯಲ್ಲಿ (Kidwai Hospital) ನಡೆದ ಅವ್ಯವಹಾರ ಹಾಗೂ ಆಡಳಿತ ವ್ಯವಸ್ಥೆ ಕುಸಿತದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಹಲವಾರು ಅವ್ಯವಹಾರಗಳು ನಡೆಯುತ್ತಿವೆ ಎಂಬ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ನೀಡಲಾಯಿತು. ಸರಕಾರ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಖಜಾನೆ ಇಲಾಖೆ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಇದೀಗ ತನಿಖೆಯ ವರದಿಯನ್ನು ಆಧರಿಸಿ ಕ್ರಮವನ್ನು ಕೈಗೊಳ್ಳಲಾಗಿದೆ.
ಕಿದ್ವಾಯಿ ಆಸ್ಪತ್ರೆ ಬಗ್ಗೆ ಕೇಳಿಬಂದ ಆರೋಪಗಳೇನು?
- ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಒದಗಿಸುತ್ತಿರುವ ಸೇವೆಗಳಿಗೆ ರೋಗಿಗಳಿಂದ ಹೆಚ್ಚಿನ ಶುಲ್ಕ ಪಡೆಯುವ ಆರೋಪ.
- ಅನುದಾನದ ದುರ್ಬಳಕೆ, ಭ್ರಷ್ಟಾಚಾರ, ಸಂಸ್ಥೆಯ ಸಿಬ್ಬಂದಿಗಳು ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದು.
- ರೋಗಿಗಳಿಗೆ ಕಳಪೆ ಮಟ್ಟದ ಚಿಕಿತ್ಸೆ ನೀಡುತ್ತಿರುವುದು.
- ಔಷಧಗಳ ಕೊರತೆ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡದಿರುವುದು.
- ಕೆ.ಟಿ.ಪಿ.ಪಿ. ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಸಂಸ್ಥೆಗೆ ಹೆಚ್ಚಿನ ಲಾಭ ಬರುವಂತೆ ಟೆಂಡರ್ ನೀಡಿರುವುದರ ಕುರಿತು ಪತ್ರಿಕೆಯಲ್ಲಿ ವರದಿ ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಿತ್ತು.
ಇದನ್ನೂ ಓದಿ : Murder Case : ತಾಯಿಗಿತ್ತು ಅನೈತಿಕ ಸಂಬಂಧ; ಅಪ್ಪನಿಗಾಗಿ ಕೊಲೆಗಾರನಾದ ಮಗ!
ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ವರದಿಯಲ್ಲಿ ಏನಿದೆ?
ಖಜಾನೆ ಇಲಾಖೆ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಅವರು ಸುಮಾರು ಒಂದು ತಿಂಗಳ ಕಾಲ ಸಮಗ್ರ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಪ್ರಮುಖವಾಗಿ ಟೆಂಡರ್ ಪ್ರಕ್ರಿಯೆಗಳಲ್ಲಿ ಕೆಟಿಪಿಪಿ ಕಾಯಿದೆ ಉಲ್ಲಂಘನೆ, ನಿರ್ಣಯ ಕೈಗೊಳ್ಳಲು ಅಸಾಧಾರಣ ವಿಳಂಬ, ಅಗತ್ಯ ಪೂರ್ವಭಾವಿ ಸಿದ್ಧತೆಯ ಕೊರತೆ, ಪರಿಣತರ ಸಮಿತಿಗಳ ಮರುರಚನೆ, ಅನುಮೋದಿತ ದರಕ್ಕಿಂತಲೂ ಹೆಚ್ಚಿನ ದರ ಪಾವತಿಸಿಕೊಳ್ಳಲು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿರುವುದು, ಒಂದೇ ಪರೀಕ್ಷೆಗೆ ಪ್ರತ್ಯೇಕ ದರ ನಿಗದಿಪಡಿಸಿರುವುದು, ಒಂದೇ ಆವರಣದಲ್ಲಿರುವ ವಿವಿಧ ಔಷಧಾಲಯಗಳಲ್ಲಿ ಪ್ರತ್ಯೇಕ ದರಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದು ನಿಜ ಎಂದು ತಿಳಿದುಬಂದಿದೆ.
ಇನ್ನೂ ಹಲವು ಆಪಾದನೆಗಳು ಸಾಬೀತು
- ಹೊರಗುತ್ತಿಗೆ ಆಧಾರದ ಸೇವೆಗಳನ್ನು ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳ ನಿಯಮಿತ ಮೇಲ್ವಿಚಾರಣೆಯ ಕೊರತೆ
- ಪಾವತಿ ಪೂರ್ವದಲ್ಲಿ ಅಗತ್ಯ ಪರಿಶೀಲನಾ ಕ್ರಮಗಳನ್ನು ಅನುಸರಿಸದೇ ಇರುವುದು
- ದಾಖಲೆಗಳ ಅಸಮರ್ಪಕ ನಿರ್ವಹಣೆ
- ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿಯಲ್ಲಿನ ವ್ಯತ್ಯಯ
- ಸಂಸ್ಥೆಗೆ ಆಗಮಿಸುವ ರೋಗಿಗಳು ಹಾಗೂ ಸಹಾಯಕರಿಗೆ ಅಗತ್ಯ ಮಾರ್ಗದರ್ಶನದ ಕೊರತೆ
- ಸಮರ್ಪಕ ಲೆಕ್ಕಪತ್ರ ನಿರ್ವಹಣೆ ಇತ್ಯಾದಿ ದೂರುಗಳು ನೈಜತೆಯಿಂದ ಕೂಡಿರುವುದು ವರದಿಯಲ್ಲಿ ಪತ್ತೆಯಾಗಿದೆ.
- ತನಿಖಾ ಸಮಿತಿಯು ನೀಡಿದ ವರದಿಯನ್ನು ಪರಿಶೀಲಿಸಲಾಗಿ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆಡಳಿತವು ಹದಗೆಟ್ಟಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇರುವುದರಿಂದ ಸಂಸ್ಥೆಯ ನಿರ್ದೇಶಕರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡಾ. ವಿ. ಲೋಕೇಶ್ ಅವರನ್ನು ಬದಲಾಯಿಸುತ್ತಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.