ಬೆಂಗಳೂರು: ಗಾಂಜಾ ದಂಧೆ ನಡೆಸುತ್ತಿದ್ದ ಪತಿ ಜೈಲು ಪಾಲಾದ ಬಳಿಕ ಪತ್ನಿಯೂ ಅದನ್ನೇ ಮುಂದುವರಿಸಿದ್ದು, ಇದೀಗ ಬಂಧನಕ್ಕೊಳಗಾಗಿದ್ದಾಳೆ. ಗಾಂಜಾ ತರಲು ಆಕೆಯ ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಳಸಿಕೊಂಡಿರುವುದು ಪತ್ತೆಯಾಗಿದೆ.
ಗಾಂಜಾ ದಂಧೆಗೆ ಈಕೆ ತನ್ನ 1, 3, 7 ವರ್ಷದ ಮೂವರು ಮಕ್ಕಳನ್ನೇ ಬಳಸಿಕೊಳ್ಳುತ್ತಿದ್ದುದು ಪತ್ತೆಯಾಗಿದೆ. ಮಕ್ಕಳ ಜೊತೆ ಹೋದ ಈಕೆ ಮೂರು ಬ್ಯಾಗ್‌ಗಳಲ್ಲಿ ಗಾಂಜಾ ತರುತ್ತಿದ್ದಳು. ಈಕೆಯ ಪತಿ ಮುಜ್ಜು ಎಂಬಾತ ಗಾಂಜಾ ದಂಧೆಯಲ್ಲಿ ಒಂದು ತಿಂಗಳ ಹಿಂದೆ ಜೈಲುಪಾಲಾಗಿದ್ದ. ಜೆಜೆ ನಗರ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದರು. ಪತಿ ಜೈಲು ಪಾಲಾದ ಬಳಿಕ ಪತ್ನಿ ನಗ್ಮಾ (27) ಗಾಂಜಾ ಬ್ಯುಸಿನೆಸ್ ಮುಂದುವರಿಸಿದ್ದಳು.
ವಿಶಾಖಪಟ್ಟಣದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಮುಜ್ಜುವನ್ನು ಜೆಜೆ ನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ನಂತರ ಪತ್ನಿ ನಗ್ಮಾ ತನ್ನ ಜೊತೆಗೆ ಮಕ್ಕಳನ್ನು ವಿಶಾಖಪಟ್ಟಣಂಗೆ ಕರೆದುಕೊಂಡು ಹೋಗಿ ಮರುದಿನ ಚೀಲದಲ್ಲಿ ಗಾಂಜಾ ಸಮೇತ ಬೆಂಗಳೂರಿಗೆ ಬಸ್ಸಿನಲ್ಲಿ ಬರುತ್ತಿದ್ದಳು. ಮಕ್ಕಳು, ಬ್ಯಾಗ್ ಇದ್ದರೆ ಫ್ಯಾಮಿಲಿ ಎಂದು ಪೊಲೀಸರು ಚೆಕ್ ಮಾಡುವುದಿಲ್ಲ ಎಂಬುದು ಆಕೆಯ ತಂತ್ರವಾಗಿತ್ತು.
ಇದೇ ರೀತಿ ವಿಶಾಖಪಟ್ಟಣದಿಂದ ಮಾರ್ಚ್ 20ರಂದು ಗಾಂಜಾ ಸಮೇತ ಬಂದು ಕಲಾಸಿಪಾಳ್ಯ ಕಾರ್ನೇಷಲ್ ಸರ್ಕಲ್‌ನಲ್ಲಿ ಇಳಿಯುತ್ತಿದ್ದಾಗ ಕಲಾಸಿಪಾಳ್ಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಬಂಧಿತಳಿಂದ 13 ಲಕ್ಷ ರೂ. ಮೌಲ್ಯದ 26 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈಗ ಪತಿಯ ಜತೆಗೆ ಪತ್ನಿಯೂ ಪರಪ್ಪನ ಅಗ್ರಹಾರ ಸೇರಿದ್ದಾಳೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: Drugs in Manipal : ಗಾಂಜಾ ಸೇವನೆ ಆರೋಪ; ಮಣಿಪಾಲದಲ್ಲಿ ಐವರು ವಿದ್ಯಾರ್ಥಿಗಳು ಅರೆಸ್ಟ್