ಬೆಂಗಳೂರು: ಫೆಬ್ರವರಿ 16ರಂದು ನಡೆಯಲಿರುವ ವಿಧಾನ ಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗಾಗಿ (MLC Election) ಎರಡು ದಿನಗಳ ಕಾಲ ಪ್ರದೇಶ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ (Dry day order) ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ನಡುವೆ ಕೆಲವರು ಇದನ್ನು ಪ್ರಶ್ನಿಸಿ ಹೈಕೋರ್ಟ್ (Karnataka high Court) ಮೊರೆ ಹೊಕ್ಕಿದ್ದಾರೆ. ಈ ಪ್ರಕರಣವನ್ನು ಗಮನಿಸಿದ ಹೈಕೋರ್ಟ್ ಕೂಡಾ ಈ ಆದೇಶ ಮೇಲ್ನೋಟಕ್ಕೆ ಸೂಕ್ತವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಮಂಗಳವಾರ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದ ವಿಚಾರಣೆಯನ್ನು ಫೆ. 14ಕ್ಕೆ ಮುಂದೂಡಿದೆ.
ಚುನಾವಣೆ ನಡೆಯಲಿರುವುದು ಫೆಬ್ರವರಿ 16ರಂದು. ಆದರೆ, ಫೆ. 14ರ ಸಂಜೆಯಿಂದಲೇ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧಕ್ಕೆ ಆದೇಶ ಹೊರಡಿಸಲಾಗಿದೆ. ಪ್ರೇಮಿಗಳ ದಿನಾಚರಣೆಯ ದಿನವೂ ಮದ್ಯ ನಿಷೇಧ ಜಾರಿಯಲ್ಲಿರುತ್ತದೆ ಎಂಬ ಕಾರಣಕ್ಕಾಗಿ ಈ ಆದೇಶ ಚರ್ಚೆಗೆ ಕಾರಣವಾಗಿತ್ತು. ಅದೇ ಹೊತ್ತಿಗೆ ಒಂದು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ . ಎರಡು ದಿನಗಳ ಮದ್ಯ ಮಾರಾಟ ನಿಷೇಧ ಬೇಕಾ ಎಂಬ ಚರ್ಚೆಯೂ ಇತ್ತು.
ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಫೆಬ್ರವರಿ 1ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘಟನೆಯ ಕಾರ್ಯದರ್ಶಿ ವೀರೇಂದ್ರ ಎನ್.ಕಾಮತ್ ಸೇರಿದಂತೆ ಒಟ್ಟು ನಾಲ್ವರು ಹೈಕೋರ್ಟ್ ಮೊರೆ ಹೊಕ್ಕಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ: Valentines Day : ಪ್ರೇಮಿಗಳಿಗೆ ಭಾರಿ ನಿರಾಸೆ; ವ್ಯಾಲೆಂಟೈನ್ಸ್ ಡೇ ದಿನ ಮದ್ಯ ಸಿಗಲ್ಲ!
ಅರ್ಜಿದಾರರ ವಾದ ಏನಾಗಿತ್ತು?
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಹಿರಿಯ ವಕೀಲ ಅರುಣ್ ಶ್ಯಾಮ್ ಅವರು. ಅವರು ಹಲವಾರು ವಿಚಾರಗಳನ್ನು ತಮ್ಮ ದಾವೆಯಲ್ಲಿ ಉಲ್ಲೇಖ ಮಾಡಿದ್ದಾರೆ.
- ಉಪಚುನಾವಣೆಯು ಸಾರ್ವತ್ರಿಕ ಚುನಾವಣೆಯಲ್ಲ. ಇದರಲ್ಲಿ ಕೇವಲ 16 ಸಾವಿರ ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ.
- ಹೀಗಾಗಿ, 48 ಗಂಟೆಗಳ ಅವಧಿಯವರೆಗೆ ಮದ್ಯ ಮಾರಾಟ ನಿಷೇಧಿಸಿದರೆ ವರ್ತಕರು, ಉದ್ದಿಮೆದಾರರು ಸಾಕಷ್ಟು ತೊಂದರೆ ಅನುಭವಿಸಲಿದ್ದಾರೆ.
- ಪರಿಷತ್ ಚುನಾವಣೆಯಲ್ಲಿ ಬಾಂಬೆ ಹೈಕೋರ್ಟ್ ಇಂತಹ ನಿಷೇಧದ ಅವಧಿಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿರುವ ಪೂರ್ವನಿದರ್ಶನದ ತೀರ್ಪಿದೆ. ಹೀಗಾಗಿ, ಈ ಪ್ರಕರಣದಲ್ಲೂ ಕೇವಲ ಮತದಾನದ ದಿನದಂದು ಮಾತ್ರವೇ ನಿಷೇಧ ಅನ್ವಯಿಸಲು ನಿರ್ದೇಶಿಸಬೇಕು.
- ಅರ್ಜಿದಾರರು ಎಂದಿನಿಂತೆ ಉಳಿದ ಅವಧಿಯಲ್ಲಿ ಚಿಲ್ಲರೆ, ಸಗಟು ವ್ಯಾಪಾರ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು ತೆರೆಯಲು ಅನುಮತಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು.
ಅರ್ಜಿದಾರರ ಆಕ್ಷೇಪದಲ್ಲಿ ಹುರುಳಿದೆ ಎಂದು ಮೌಖಿಕವಾಗಿ ಹೇಳಿದ ಕೋರ್ಟ್
ಕೇವಲ 16 ಸಾವಿರ ಮತದಾರರು ಇರುವ ಚುನಾವಣೆಗೆ ಸಂಬಂಧಿಸಿ ಎರಡು ದಿನ ಮದ್ಯ ನಿಷೇಧ ಮಾಡಿರುವುದು ತಪ್ಪು ಎಂಬ ಅರ್ಜಿದಾರರ ವಾದವನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಕೂಡಾ ಮೌಖಿಕವಾಗಿ ಒಪ್ಪಿಕೊಂಡಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್, “ಈ ಕುರಿತಂತೆ ಕಾನೂನು ಏನು ಹೇಳುತ್ತದೆ ಎಂಬುದನ್ನು ವಿವರಿಸಿ” ಎಂದು ಸರ್ಕಾರದ ಪರ ವಕೀಲೆ ಸಾವಿತ್ರಮ್ಮ ಅವರಿಗೆ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿದೆ.