ಬೆಂಗಳೂರು: ಅಕ್ರಮ ಹಣ ಲೇವಾದೇವಿ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ಮಂಗಳವಾರ ಬೆಂಗಳೂರಿನಲ್ಲಿ ಎಂಟು ಕಡೆ ದಾಳಿ (ED Raid) ನಡೆಸಿದರು. ಬೆಂಗಳೂರಿನ (Bangalore News) ನಾನಾ ಭಾಗಗಳಲ್ಲಿ ನಡೆದ ಈ ದಾಳಿಯಲ್ಲಿ 11.5 ಕೋಟಿ ರೂ. ವಶವಾಗಿದೆ ಎಂದು ಹೇಳಲಾಗಿದೆ.
ಹಣ ಲೇವಾದೇವಿ ಮತ್ತು ಅಕ್ರಮ ವಹಿವಾಟಿಗೆ ಸಂಬಂಧಿಸಿ ಕೆಲವೊಂದು ಮಾಹಿತಿಯನ್ನು ಪಡೆದುಕೊಂಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಳೆದ ಫೆ. 29ರಂದೇ ಕೆಲವು ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಅಂದು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಮಂಗಳವಾರ ಮತ್ತೆ ಎಂಟು ಕಡೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ವಿಜಯ್ ಟಾಟಾ ಮತ್ತು ಸಹಚರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪ್ರಮುಖವಾಗಿ ದಾಳಿ ನಡೆಸಿದೆ. ಆರೋಪಿಗಳ ಅಕೌಂಟ್ ನಲ್ಲಿದ್ದ ಸುಮಾರು 11.25 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಅದರ ಜತೆಗೆ 120 ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳು, ಡಿಜಿಟಲ್ ಎವಿಡೆನ್ಸ್ ಸೀಜ್ ಮಾಡಲಾಗಿದೆ.
ವಿಜಯ್ ಟಾಟಾ ಅಸೋಸಿಯೇಟ್ಸ್, ಆರ್ ಎಸ್ ಚಂದ್ರಶೇಖರ್, ಮುನಿರಾಜು ಕೆ, ಡಿ ನಾಗೇಂದ್ರಬಾಬು, ಮಂಜುನಾಥ್ ಬಿ.ಎಸ್ ಅವರಿಗೆ ಸಂಬಂಧಪಟ್ಟ ಕಂಪನಿಗಳ ಮೇಲೆ ದಾಳಿ ನಡೆಯಿತು.
ಸಂಚಯ ಲ್ಯಾಂಡ್ & ಎಸ್ಟೇಟ್ ಫ್ರೈ.ಲಿ. ಬಿಸಿಸಿ ಕನ್ಟ್ರಕ್ಷನ್ಸ್, ಆಕಾಶ್ ಎಜುಕೇಷನ್ & ಡೆವಲಪ್ ಮೆಂಟ್ ಟ್ರಸ್ಟ್, ಎಸ್ ವಿ ಕಾನ್ಕ್ರೇಟ್ ಪ್ರಾಜೆಕ್ಟ್ ಪ್ರೈ ಲಿ. ಲಿಮಿಟೆಡ್ ಸಂಸ್ಥೆಗಳಿಗೆ ಸಂಬಂಧಪಟ್ಟ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ಸೀಜ್ ಮಾಡಲಾಗಿದೆ. ಸ್ಥಿರಾಸ್ತಿ ಮತ್ತು ಚರಾಸ್ತಿ ಸಂಬಂಧಿಸಿದಂತೆ 120 ಕೋಟಿ ರೂ. ಮೌಲ್ಯದ ದಾಖಲೆಗಳು ಪತ್ತೆಯಾಗಿವೆ.
ಇದನ್ನೂ ಓದಿ : ED Case: ಅಕ್ರಮ ಹಣ ವರ್ಗಾವಣೆ ಕೇಸ್ ರದ್ದು ಮಾಡಿದ ಸುಪ್ರೀಂ ಕೋರ್ಟ್; ಡಿ.ಕೆ. ಶಿವಕುಮಾರ್ಗೆ ಬಿಗ್ ರಿಲೀಫ್
ಗ್ರಾಹಕರಿಗೆ ವಂಚನೆ ನಡೆಸಿದ ಆರೋಪ
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಈ ಕಂಪನಿಗಳು ಸೈಟ್ ಕೊಡಿಸುವುದಾಗಿ ವಂಚನೆ ಮಾಡಿವೆ ಎಂದು ಬೆಂಗಳೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಸೈಟ್ ಕೊಡಿಸುವುದಾಗಿ ವಂಚನೆ ಮಾಡಿದ್ದರಿಂದಾಗಿ ಪೊಲೀಸರು ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣಾ ಕಾಯಿದೆ 2024 (Karnataka Protection of Interest of Depositors in Financial Establishments Act, 2004-KPIDFE) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇವರು ಜನರಿಂದ ಪಡೆದ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿದ್ದರು ಎಂಬ ಆರೋಪಗಳಿದ್ದವು. ನೂರಾರು ಗ್ರಾಹಕರಿಂದ ಪಡೆದ ಸುಮಾರು 250 ಕೋಟಿ ರೂ. ಹಣ ಅವರ ಕೈಯಲ್ಲಿತ್ತು. ಅದನ್ನು ಮರಳಿ ಕೇಳಿದರೆ ಬೆದರಿಕೆ ಹಾಕಲಾಗುತ್ತಿತ್ತು ಎನ್ನಲಾಗಿದೆ.
ಈ ವಿಚಾರಗಳು ಜಾರಿ ನಿರ್ದೇಶನಾಲಯದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ದಾಖಲೆ ಪರಿಶೀಲಿಸಿ, ಈಗ ದಾಳಿಯನ್ನು ಸಂಘಟಿಸಿದ್ದಾರೆ.