ಬೆಂಗಳೂರು: ಅಕ್ರಮ ಹಣ ಸಂಪಾದನೆ ಆರೋಪದಲ್ಲಿ ಪ್ರತಿಷ್ಠಿತ ಮಂತ್ರಿ ಸಮೂಹ ಸಂಸ್ಥೆಯ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ವಶಕ್ಕೆ ಪಡೆದಿದೆ.
ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಶೀಲ್ ಪಾಂಡುರಂಗ ಮಂತ್ರಿ ಅವರಿಗೆ ಜೂನ್ 25ರಂದು ಇ.ಡಿ. ಸಮನ್ಸ್ ನೀಡಿತ್ತು. ದಕ್ಷಿಣ ಭಾರತದ ಅತಿ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯಾದ ಮಂತ್ರಿ ಗ್ರೂಪ್ ಮೇಲೆ ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.
ಲೆಕ್ಕಪತ್ರದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ ಅನೇಕ ದಾಖಲೆಗಳ ಸಮೇತ ಇಡಿಗೆ ಮಾಹಿತಿ ನೀಡಲಾಗಿತ್ತು. ಸದ್ಯ ಆ ಮಾಹಿತಿ ಆಧಾರದಲ್ಲಿ ನೊಟೀಸ್ ಜಾರಿ ಮಾಡಲಾಗಿತ್ತು.
ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್‌ನ ಉಪ ಸೆಕ್ಷನ್ 50(2)(3) ಅಡಿಯಲ್ಲಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಇಡಿ ಅಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ವೈಯಕ್ತಿಕ ಹಾಗೂ ಮಂತ್ರಿ ಗ್ರೂಪ್ ಸಂಸ್ಥೆಯ ಅನೇಕ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ಕಂಡುಬಂದಿವೆ. ಜೂನ್ 26ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು.
ಶುಕ್ರವಾರ ದಿನಪೂರ್ತಿ ಸುಶೀಲ್ ಅವರನ್ನು ಇ.ಡಿ. ವಿಚಾರಣೆ ನಡೆಸಿತು. ಸಾಕಷ್ಟು ಸಮಯ ವಿಚಾರಣೆ ನಡೆಸಿದ ಇ.ಡಿ. ಅಧಿಕಾರಿಗಳು ಸುಶೀಲ್ ಪಾಂಡುರಂಗ ಮಂತ್ರಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | ಮಂತ್ರಿ ಗ್ರೂಪ್ ಸಿಎಂಡಿಗೆ ಇಡಿಯಿಂದ ಸಮನ್ಸ್ ಜಾರಿ