ಬೆಂಗಳೂರು: ದೇಶದಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ವರ್ಷದ ಎಲ್ಲ ದಿನಗಳಲ್ಲೂ ಟ್ರಾಫಿಕ್ ಸಮಸ್ಯೆ ಸಾಮಾನ್ಯ. ಆದರೆ ಜನತೆಗೆ ಮಳೆ ಕೂಡ ಸೇರಿಕೊಂಡಾಗ (Rain news) ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಈ ಸಲ ಮಳೆಗಾಲದಲ್ಲಿ ಕಚೇರಿಗೆ ತೆರಳಲು ತಗಲುವ ಸಮಯದಲ್ಲಿ ದಿಢೀರ್ 11% ರಿಂದ 62% ಏರಿಕೆಯಾಗಿದೆ ಎಂದು ಇತ್ತೀಚಿನ ಸಮೀಕ್ಷಾ ವರದಿ ತಿಳಿಸಿದೆ.
ಮಳೆಗಾಲದಲ್ಲಿ ಪ್ರಯಾಣಿಕರಿಗೆ ಸಂಚಾರ ದುಸ್ತರವಾಗುತ್ತಿದ್ದು, ಕಚೇರಿಗೆ ತೆರಳಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಮೂವ್‌ಇನ್ ಸಿಂಕ್ ಸಂಸ್ಥೆಯ (MoveInSync) ವರದಿ ತಿಳಿಸಿದೆ.
ಕಳೆದ ಒಂದು ವಾರದಿಂದ ಬೆಂಗಳೂರಿಗರು ಕಚೇರಿಗೆ ತೆರಳಲು ತಗಲುವ ಸಮಯದಲ್ಲಿ ಸರಾಸರಿ ೩೦% ಏರಿಕೆಯಾಗಿದೆ. ಕೆಲವು ಪ್ರದೇಶಗಳಲ್ಲಿ 62% ಹೆಚ್ಚಳವಾಗಿದೆ. ಈ ವಿಳಂಬಕ್ಕೆ ಕಾರಣ ಮಳೆಯ ಅವಾಂತರವಾಗಿದೆ.
ಕಳೆದ ಫೆಬ್ರವರಿಯಲ್ಲಿ ಕಚೇರಿಗಳಿಗೆ ತಲುಪಲು 42 ನಿಮಿಷ ತಗಲುತ್ತಿದ್ದರೆ, ಕ್ರಮೇಣ 60 ನಿಮಿಷಕ್ಕೆ ಏರಿಕೆಯಾಗಿದೆ. ಕಚೇರಿಗೆ ಮರಳುತ್ತಿರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಿದ್ದರೂ, ಆಗಸ್ಟ್‌ನಲ್ಲಿ ದಿಢೀರ್ 75 ನಿಮಿಷಕ್ಕೂ ಹೆಚ್ಚು ಸಮಯ ತಗಲುವಂತಾಗಿದೆ. ಅಂದರೆ ಮಳೆ ಮತ್ತು ಕಚೇರಿಗೆ ಮರಳುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಇದು ಬಿಂಬಿಸಿದೆ ಎಂದು ಮೂವ್‌ಇನ್‌ಸಿಂಕ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಒ ದೀಪೇಶ್ ಅಗ್ರವಾಲ್ ತಿಳಿಸಿದ್ದಾರೆ.
ಕೋವಿಡ್ ಪೂರ್ವ ಸ್ಥಿತಿಗೆ ಮರಳುತ್ತಿದೆ ಬೆಂಗಳೂರು: ಬೆಂಗಳೂರಿನಲ್ಲಿ ಎರಡು ವರ್ಷಗಳ ಹಿಂದೆ ಕೋವಿಡ್-19 ಬಿಕ್ಕಟ್ಟು ಮತ್ತು ಲಾಕ್ ಡೌನ್ ಸಂದರ್ಭ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಮ್ ವ್ಯಾಪಕವಾಗಿತ್ತು, ಸಂಚಾರ ದಟ್ಟಣೆ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಕಚೇರಿಗೆ ಮರಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ ಪೂರ್ವ ಮಟ್ಟಕ್ಕೆ ಪರಿಸ್ಥಿತಿ ಬದಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಬೆಳ್ಳಂದೂರು ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಕಚೇರಿಗೆ ಹೋಗಲು ಮತ್ತು ಕಚೇರಿಯಿಂದ ಮನೆಗೆ ಹಿಂತಿರುಗಲು ತಗಲುವ ಸಮಯದಲ್ಲಿ ನಗರದಲ್ಲೇ ಅತಿ ಹೆಚ್ಚು, ಎಂದರೆ 62% ಹೆಚ್ಚಳವಾಗಿದೆ. ಇತರ ಕಾಲದಲ್ಲಿ ಇಲ್ಲಿ 53 ನಿಮಿಷ ಸಾಕು, ಆದರೆ ಮಳೆ ಬಂದಾಗ 86 ನಿಮಿಷ ತಗಲುತ್ತದೆ. ವೈಟ್‌ಫೀಲ್ಡ್‌ನಲ್ಲಿ ಇತರ ಕಾಲದಲ್ಲಿ 69 ನಿಮಿಷ ಬೇಕಾಗಿದ್ದರೆ, ಮಳೆಗಾಲದಲ್ಲಿ 102 ನಿಮಿಷ ತಗಲುತ್ತದೆ. ಅಂದರೆ 48% ಏರಿಕೆಯಾಗಿದೆ.
ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಮಳೆಗಾಲದಲ್ಲಿ ಕಚೇರಿಗೆ ಪ್ರಯಾಣದ ಅವಧಿಯಲ್ಲಿ ಉಂಟಾಗಿರುವ ಹೆಚ್ಚಳ ಇಂತಿದೆ:
ಕಚೇರಿ ಸ್ಥಳ | ಇತರ ಕಾಲಗಳಲ್ಲಿ | ಮಳೆಗಾಲ | % ಬದಲಾವಣೆ |
ಬೆಳ್ಳಂದೂರು | 53 ನಿಮಿಷ | 86 | 62% |
ವೈಟ್‌ಫೀಲ್ಡ್ | 69 | 102 | 48% |
ಕಾಡುಬೀಸನಹಳ್ಳಿ | 52 | 75 | 45% |
ಮಹದೇವಪುರ | 52 | 69 | 33% |
ಯಶವಂತಪುರ | 60 | 79 | 32% |
ಸರ್ಜಾಪುರ ರಸ್ತೆ | 60 | 75 | 27% |
ಮಾನ್ಯತಾ ಟೆಕ್ ಪಾರ್ಕ್ | 44 | 56 | 26% |
ಬನ್ನೇರುಘಟ್ಟ/ಬಿಟಿಎಂ | 53 | 63 | 26% |
ಇಂದಿರಾನಗರ | 52 | 60 | 17% |
ಎಲೆಕ್ಟ್ರಾನಿಕ್‌ಸಿಟಿ | 50 | 56 | 12% |
ಎಂಜಿ ರಸ್ತೆ | 50 | 56 | 12% |
ಬಾಗ್‌ಮನೆ/ದೊಡ್ಡನೆಕ್ಕುಂದಿ | 52 | 57 | 11% |