Site icon Vistara News

Eidgah | ಜುಲೈ 12ರಂದು ಚಾಮರಾಜಪೇಟೆ ಬಂದ್‌ ನಿಶ್ಚಿತ

ಈದ್ಗಾ

ಬೆಂಗಳೂರು: ಚಾಮರಾಜಪೇಟೆ ವಿವಾದಿತ ಈದ್ಗಾ ಮೈದಾನ (Eidgah) ವಿಚಾರ ತಾರರಕ್ಕೇರಿದೆ. ಚಾಮರಾಜಪೇಟೆಯ ನಾಗರಿಕರ ಒಕ್ಕೂಟ ವೇದಿಕೆ ಶನಿವಾರ ಸುದ್ದಿಗೋಷ್ಠಿ ನಡೆಸಿ ಜುಲೈ 12 ರಂದು ಬಂದ್ ಮಾಡುವುದು ನಿಶ್ಚಿತ ಎಂದರು. ಅಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯ ತನಕ ಚಾಮರಾಜಪೇಟೆ ಪೂರ್ಣ ಬಂದ್ ಮಾಡುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ.

ಈ ಕುರಿತು ನಾಗರಿಕ ವೇದಿಕೆ ಸಂಚಾಲಕರ ರುಕ್ಮಾಂಗದ ಮಾತನಾಡಿ, ಶನಿವಾರ (ಜುಲೈ ೯) ಜಮೀರ್ ಅಹಮದ್ ನೇತೃತ್ವದಲ್ಲಿ ಸಭೆ ಕರೆದಿದ್ದರು. ಆದರೆ ನಮಗೆ ಯಾರೂ ಈ ಸಭೆಗೆ ಕರೆದಿಲ್ಲ. ಹಾಗಾಗಿ ನಾವೂ ಯಾರೂ ಸಭೆಗೆ ಹೋಗಿಲ್ಲ. ಜಮೀರ್ ಮಾತನ್ನು ಯಾರೂ ಕೇಳಬೇಡಿ, ಅವರು ಭರವಸೆ ನೀಡಿ ಸುಮ್ಮನಾಗುತ್ತಾರೆಂದು ಕಿಡಿಕಾರಿದರು.

ಯಡಿಯೂರಪ್ಪ ಸಿಎಂ ಆದರೆ ಅವರ ಮನೆಗೆ ವಾಚ್‌ಮನ್ ಆಗುವುದಾಗಿ ಹೇಳಿದ್ದರು, ಆಗಿದ್ದಾರಾ? ಆಗಲಿಲ್ಲವಲ್ಲ? ಈ ಹಿಂದೆ ಕೂಡ ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮಾಡುವುದಾಗಿ ಹೇಳಿದ್ದ ಅವರು, ಯಾವುದೇ ಕಾರ್ಯಕ್ರಮ ಮಾಡಲಿಲ್ಲ. ಈ ಹಿಂದೆ ಚಾಮರಾಜಪೇಟೆಯಲ್ಲಿ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು ಇದ್ದರು, ಜಮೀರ್ ಶಾಸಕರಾದ ಮೇಲೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಳ್ಳಕಾಕರು, ಸರಗಳ್ಳರು, ಪಿಕ್ ಪಾಕೆಟ್, ಭೂಗಳ್ಳರು ಹೆಚ್ಚಾಗಿದ್ದಾರೆ ಎಂದರು.  

ಇದನ್ನೂ ಓದಿ | ನಿಲ್ಲದ ಈದ್ಗಾ ಮೈದಾನ ವಿವಾದ: ಪಾಲಿಕೆಯ ನಡೆಗೆ ಎನ್‌.ಆರ್‌.ರಮೇಶ್‌ ಆಕ್ರೋಶ

ಚಾಮರಾಜಪೇಟೆ ಕ್ಷೇತ್ರದಲ್ಲಿ ಆಟದ ಮೈದಾನಗಳಿಲ್ಲ, ಹೀಗಾಗಿ ಇದು ಸರ್ಕಾರದ ಸ್ವತ್ತಾಗೇ ಉಳಿಯಬೇಕು. ಇದಕ್ಕಾಗಿ ಚಾಮರಾಜಪೇಟೆ ಕ್ಷೇತ್ರ ಬಂದ್ ಆಗಲಿದೆ. ಸರ್ಕಾರಿ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು ಎಲ್ಲವೂ ಬಂದ್ ಆಗಲಿದೆ ಎಂದು ರುಕ್ಮಾಂಗದ ಹೇಳಿದರು.

ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಐಎಎಸ್‌ ಅಧಿಕಾರಿಗಳು

ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಸದಸ್ಯ ರಾಮೇಗೌಡ, ಐಎಎಸ್ ಅಧಿಕಾರಿಗಳು ಚಾಮರಾಜಪೇಟೆಗೆ ಬೆಂಕಿ ಹಚ್ಚುವ ಕೆಲಸ ಮಾಡಿರುವುದಾಗಿ ಹೇಳಿದರು. ಚಾಮರಾಜಪೇಟೆ ಮೈದಾನ ವಕ್ಫ್ ಬೋರ್ಡ್‌ದೆಂದು ಹೇಳಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಬಂದ್ ಆದ ಬಳಿಕ ಆಯುಕ್ತರನ್ನು ಭೇಟಿ ಮಾಡಿ, ಬೈಕ್ ರ‍್ಯಾಲಿ ಮೂಲಕ ತೆರಳಿ ನಮ್ಮ ದಾಖಲೆಗಳನ್ನು ಅವರಿಗೆ ಒದಗಿಸುವುದಾಗಿ ಹೇಳಿದರು.

ಸ್ವಾತಂತ್ರ್ಯ ದಿನದ ಬಾವುಟ ನಾವೇ ಹಾರಿಸುವುದಾಗಿ ಜಮೀರ್ ಹೇಳಿಕೆಗೆ ತಿರುಗೇಟು ನೀಡಿದ ರಾಮೇಗೌಡ, ಬಾವುಟ ಹಾರಿಸಲು ಅನುಮತಿ ಕೊಟ್ಟರೆ ನಾವು ಇನ್ನೂ ಉತ್ತಮವಾಗಿ ಮಾಡುತ್ತೇವೆ. ಬಾವುಟ ಹಾರಿಸುವುದು ಬೇಡ ಅಂತ ನಾವು ಹೇಳುತ್ತಿಲ್ಲ. ಆದರೆ ಯಾರೇ ಆದರೂ ಅನುಮತಿ ತೆಗೆದುಕೊಳ್ಳಬೇಕು. ಈ ಹಿಂದೆ ನಾವು ಆಚರಣೆಗೆ ಹೋದಾಗ ನಮ್ಮ ಮೇಲೆ ಮೂರು ಕೇಸ್ ಹಾಕಿದ್ದಾರೆ. ಪೊಲೀಸರು ಜಮೀರ್‌ ಕೈಗೊಂಬೆಯಾಗಿದ್ದಾರೆ. ಅವರು ಹೇಳಿದ ಹಾಗೇ ಪೊಲೀಸರು ನಡೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ವರ್ಕ್ಫ್ ಬೋರ್ಡ್‌ನಿಂದ ಸ್ವಾತಂತ್ರ್ಯ ದಿನ ಆಚರಣೆಗೆ ಅವಕಾಶ ನೀಡಬಾರದು. ಅದಕ್ಕೆ ನಮ್ಮ ವಿರೋಧವಿದೆ ಎಂದರು.

ಶಾಸಕರಿಗೆ ಸವಾಲು

ಶಾಸಕ ಜಮೀರ್ ಅಹಮದ್‌ಗೆ ಸವಾಲು ಹಾಕಿದ ರಾಮೇಗೌಡ, ಜಮೀರ್ ಅವರು ಈ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಲಿ, ಜಯಚಾಮರಾಜೇಂದ್ರ ಆಟದ ಮೈದಾನ ಎಂದು ಬೋರ್ಡ್ ಹಾಕಲಿ, ಈ ಕೂಡಲೇ ಬಂದ್ ಕೈ ಬಿಡುವುದಾಗಿ ಸವಾಲು ಹಾಕಿದರು. ಶಾಸಕರು ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದರು. ಆದರೆ ಗಣೇಶ ಹಬ್ಬಕ್ಕೆ ಹಿಂದೂ ಕಾರ್ಯಕ್ರಮಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಹೇಳುತ್ತಾರೆ. ಜಮೀರ್, ರಿಜ್ವಾನ್ ಹರ್ಷದ್ ಸೇರಿದಂತೆ ಹಲವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಒತ್ತಡ ಹೇಳಿದ್ದಾರೆ. ಹೀಗಾಗಿ ದಾಖಲೆ ಸಲ್ಲಿಕೆಯಾಗಿದರೂ, ಯಾವುದೇ ಕ್ರಮ‌ ಕೈಗೊಳ್ಳುತ್ತಿಲ್ಲ ಎಂದರು.

ಜಮೀರ್ ಅಹಮದ್ ನಮ್ಮ ಏರಿಯಾದವರಲ್ಲ

ಪ್ರತಿಭಟನೆಗೆ ಕರೆ ಕೊಟ್ಟವರು ನಮ್ಮ ಕ್ಷೇತ್ರದವರಲ್ಲ ಎಂಬ ಜಮೀರ್ ಹೇಳಿಕೆ ತಿರುಗೇಟು ಕೊಟ್ಟ ವೇದಿಕೆ ಸದಸ್ಯರು, ನಾವೆಲ್ಲ ಇದೇ ಪ್ರದೇಶದವರು, ಸ್ಥಳೀಯ ನಿವಾಸಿಗಳು. ಜಮೀರ್ ಅಹಮದ್ ನಮ್ಮ ಏರಿಯಾದವರಲ್ಲ. ಬೇರೆ ಕಡೆಯಿಂದ ಬಂದು ಇಲ್ಲಿ ಸೇರಿಕೊಂಡಿರುವವರು. ಅವರು ಸೇರಿಕೊಂಡ ಮೇಲೆ ಈ ಸಮಸ್ಯೆಗಳು ಶುರುವಾಗಿರುವುದು. ನಮ್ಮ ಹತ್ತಿರ ನಾವು ಇದೇ ಕ್ಷೇತ್ರವರು ಎಂಬುದಕ್ಕೆ ಸಾಕ್ಷಿ ಇದೆ. ಹಲವು ವರ್ಷಗಳಿಂದ ಎಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ. ಜಮೀರ್ ಶಾಸಕರಾದ ಮೇಲೆ ಇವೆಲ್ಲ ಬಂದ್ ಆಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ | ಚಾಮರಾಜಪೇಟೆ ಈದ್ಗಾ ಮೈದಾನದ ಖಾತೆ ಯಾರಿಗೂ ಮಾಡಿಕೊಟ್ಟಿಲ್ಲ: ಬಿಬಿಎಂಪಿ ಸ್ಪಷ್ಟನೆ

Exit mobile version