ಬೆಂಗಳೂರು: ಈದ್ಗಾ ವಿವಾದ ಮುಗಿಯಿತು ಎನ್ನುವಾಗಲೇ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಬಿಬಿಎಂಪಿ ಆಸ್ತಿಯನ್ನು ಉಳಿಸುವಂತೆ ಪಾಲಿಕೆ ಮಾಜಿ ಸದಸ್ಯ ಎನ್.ಆರ್. ರಮೇಶ್ ಅವರು ಬಿಬಿಎಂಪಿಯ ಆಸ್ತಿಗಳ ವಿಭಾಗ ವಿಶೇಷ ಆಯುಕ್ತ ರಾಮ್ ಪ್ರಶಾಂತ್ ಮನೋಹರ್‌ಗೆ ದಾಖಲೆ ಸಮೇತ ಮನವಿ ಪತ್ರವನ್ನು ಮಂಗಳವಾರ ಸಲ್ಲಿಸಿದ್ದಾರೆ.
ಇದನ್ನೂ ಓದಿ | ಈದ್ಗಾ ಮೈದಾನ ಬಿಬಿಎಂಪಿಯ ಸ್ವತ್ತು: ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್
ಕಳೆದೆರಡು ತಿಂಗಳಿನಿಂದ ವಿವಾದದ ಕೇಂದ್ರವಾಗಿರುವ ಚಾಮರಾಜಪೇಟೆಯ ಬಿಬಿಎಂಪಿಯ ಆಟದ ಮೈದಾನ (ಈದ್ಗಾ ಮೈದಾನ)ವು 1932ರಿಂದ 2022ರವರೆಗಿನ ಎಲ್ಲ ದಾಖಲೆಗಳಲ್ಲಿ, ಪುರಾವೆಗಳಲ್ಲಿ, ಐತಿಹಾಸಿಕ ಘಟನೆಗಳ ವಿವರಗಳಲ್ಲಿ ಪಾಲಿಕೆಯ ಸ್ವತ್ತು ಎಂದು ಅತ್ಯಂತ ಸ್ಪಷ್ಟವಾಗಿ ತಿಳಿದು ಬಂದಿದೆ. ಸುಮಾರು 150 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಪಾಲಿಕೆಯ ಈ ಅತ್ಯಮೂಲ್ಯ ಸ್ವತ್ತಿನ ಬಗ್ಗೆ ಪಾಲಿಕೆಯ ಮುಖ್ಯ ಆಯುಕ್ತರು ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನವಾದ ಹೇಳಿಕೆಗಳನ್ನು ನೀಡಿ ಅನಗತ್ಯ ಗೊಂದಲಗಳಿಗೆ ಕಾರಣರಾಗಿದ್ದಾರೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಶಾಸಕ ಜಮೀರ್ ಅಹ್ಮದ್‌ರ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪಾಲಿಕೆಯ ದಾಖಲೆಗಳನ್ನು ಮರೆಮಾಚಿ ವಕ್ಫ್ ಬೋರ್ಡ್ ಆಸ್ತಿ ಎಂದು ಖಾತೆ ಮಾಡಿಕೊಡಲು ಇವರು ಹೊರಟಿದ್ದಾರೆ. ಇದು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ರ ಪಾಲಿಕೆಯ ವಿರೋಧಿ ಕೃತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ರಮೇಶ್ ಕಿಡಿಕಾರಿದ್ದಾರೆ.
ಖಾತಾ ಮಾಡಲು ಮುಂದಾದರೆ ಕ್ರಿಮಿನಲ್ ಪ್ರಕರಣ ದಾಖಲು
ಈಗಾಗಲೇ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ವಿಶೇಷ ಆಯುಕ್ತರಿಗೆ ಸಲ್ಲಿಸಲಾಗಿದೆ. ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಪಾಲಿಕೆಯ ಆಸ್ತಿಯನ್ನು ವಕ್ಫ್ ಬೋರ್ಡ್ ಹೆಸರಿಗೆ ಖಾತೆ ಮಾಡಿಕೊಡಲು ಮುಂದಾದರೆ, ಪಾಲಿಕೆಯ ಮುಖ್ಯ ಆಯುಕ್ತರೂ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ವಿವಿಧ ತನಿಖಾ ಸಂಸ್ಥೆಗಳಲ್ಲಿ ಮತ್ತು ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಇವರು ನೀಡಿದ್ದಾರೆ.
ಇದನ್ನೂ ಓದಿ | ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ವಕ್ಫ್‌ಬೋರ್ಡ್‌ನಿಂದ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ