Site icon Vistara News

Election 2023 | ಸಿದ್ದರಾಮಯ್ಯ ಓಟಕ್ಕೆ ಬ್ರೇಕ್‌ ಹಾಕಲು ಡಿಕೆಶಿ ಸಜ್ಜು; ಒಂದೇ ಕ್ಷೇತ್ರ ನೀತಿಗೆ ಒತ್ತು

‌ ಡಿ.ಕೆ.ಶಿವಕುಮಾರ್ siddaramaiah

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ (Election 2023) ಮಾಜಿ ಸಿದ್ದರಾಮಯ್ಯ ಒಂದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮುಂದಾಗಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಒಂದೆಡೆ ಕೋಲಾರ ಜಿಲ್ಲೆ ಶಾಸಕರ ಒತ್ತಾಸೆಗೆ ಕಟ್ಟುಬಿದ್ದು ಕೋಲಾರದಿಂದ ಹಾಗೂ ಸೇಫ್‌ ಸೀಟ್‌ ಎಂದು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಚಿಂತನೆ ನಡೆಸಿದ್ದಾರೆ. ಕಳೆದ ಬಾರಿ ಸಿಎಂ ಆಗಿದ್ದಾಗಲೂ ಎರಡು ಕಡೆ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವುದು ಪಕ್ಕಾ ಆದ ಕೂಡಲೆ ಕುರುಬ ಸಮುದಾಯ ಪ್ರಾಬಲ್ಯ ಹೊಂದಿರುವ ಬಾದಾಮಿಯಿಂದ ಸ್ಪರ್ಧಿಸಿದ್ದರು. ಅಂತಿಮ ಹಂತದವರೆಗೆ ನಡೆದ ಹಣಾಹಣಿಯಲ್ಲಿ ಕೂದಲೆಳೆ ಅಂತರದಲ್ಲಿ ಜಯಗಳಿಸಿದ್ದರು.

ಈ ಬಾರಿಯೂ ಎರಡು ಕಡೆ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಚಿಂತನೆ ನಡೆಸಿರುವಂತೆಯೇ, ಒಬ್ಬರಿಗೆ ಒಂದು ಕ್ಷೇತ್ರ ಮಾತ್ರ ಎಂಬ ನೀತಿಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಈ ನಿಯಮವನ್ನು ಜಾರಿ ಮಾಡಬೇಕೆಂದು ಹೈಕಮಾಂಡ್‌ ಮೇಳೆ ಒತ್ತಾಯ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದೆಡೆ ಕೋಲಾರದಲ್ಲಿ ಸ್ಪರ್ಧಿಸಲು ಮುಂದಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ರಹಸ್ಯವಾಗಿಯೇ ಅರ್ಜಿ ಪಡೆದಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ನವೆಂಬರ್‌ 13ರಂದೇ ಅರ್ಜಿ ಪಡೆದಿದ್ದಾರೆ. ಎರಡು ಅರ್ಜಿಗಳನ್ನು ಪಡೆದಿದ್ದು, ಒಂದು ಸಿದ್ದರಾಮಯ್ಯ ಅವರಿಗೆ, ಮತ್ತೊಂದು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಎಂದು ಹೇಳಲಾಗುತ್ತಿದೆ.

ಸಿದ್ದು ವರ್ಸಸ್‌ ಡಿಕೆಶಿ

ವಿವಿಧೆಡೆ ಅರ್ಜಿ ಸಲ್ಲಿಸುವಾಗ ಸಿದ್ದರಾಮಯ್ಯ ವರ್ಸಸ್‌ ಡಿ.ಕೆ. ಶಿವಕುಮಾರ್‌ ಬಣ ಎಂಬ ವಾತಾವರಣ ನಿರ್ಮಾಣ ಆಗುತ್ತಿದೆ. ನಂಜನಗೂಡು ಕ್ಷೇತ್ರಕ್ಕೆ ಸಿದ್ದರಾಮಯ್ಯ ಆಪ್ತ ಡಾ. ಎಚ್‌.ಸಿ. ಮಹಾದೇವಪ್ಪ ಅರ್ಜಿ ಸಲ್ಲಿಕೆ ಮಾಡಿದ್ದರೆ ಅದೇ ಕ್ಷೇತ್ರಕ್ಕೆ ಡಿ.ಕೆ. ಶಿವಕುಮಾರ್ ಆಪ್ತ ಧೃವನಾರಾಯಣ್ ಅರ್ಜಿ ಸಲ್ಲಿಸಿದ್ದಾರೆ. ಶಿವಾಜಿ ನಗರ ಕ್ಷೇತ್ರಕ್ಕೆ ಹಾಲಿ ಶಾಸಕ ರಿಜ್ವಾನ್ ಆರ್ಷದ್ ಅರ್ಜಿ ಸಲ್ಲಿಸಿದ್ದರೆ ಡಿ.ಕೆ. ಶಿವಕುಮಾರ್ ಆಪ್ತ ನಲಪಾಡ್ ಅವರಿಂದಲೂ ಅರ್ಜಿ ಸಲ್ಲಿಸಲಾಗಿದೆ.

ಮಧುಗಿರಿಯಲ್ಲಿ ಸಿದ್ದರಾಮಯ್ಯ ಆಪ್ತ ಮಾಜಿ ಶಾಸಕ ಕೆ.ಎನ್. ರಾಜಣ್ಣ ಹಾಗೂ ಡಿಕೆಶಿ ಆಪ್ತ ಕೊಂಡವಾಡಿ ಚಂದ್ರಶೇಖರ್ ಸಲ್ಲಿಸಿದ್ದಾರೆ. ಪಾವಗಡದಲ್ಲಿ ಹಾಲಿ ಶಾಸಕ ವೆಂಕಟರಾಮಣಪ್ಪ ಅವರ ಮಗ ವೆಂಕಟೇಶ್, ಸಿದ್ದರಾಮಯ್ಯ ಜನತಾ ಪರಿವಾರದ ಆಪ್ತ ಮಾಜಿ ಶಾಸಕ ಸೋಮ್ಲಾ ನಾಯಕ್ ಸಲ್ಲಿಕೆ ಮಾಡಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ ಮಾಜಿ ಶಾಸಕ ಟಿ.ಬಿ. ಜಯಚಂದ್ರ ಹಾಗೂ ಡಿಕೆಶಿ ಆಪ್ತ ಸಾಸಲು ಸತೀಶ್ ಅರ್ಜಿ ಸಲ್ಲಿಸಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ ನಾಗೇಂದ್ರ ಹಾಗೂ ಡಿಕೆಶಿ ಆಪ್ತ ಅಸುಂಡಿ ಹೊನ್ನೂರಪ್ಪ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಂಪ್ಲಿ ಕ್ಷೇತ್ರದಿಂರ ಟಿಕೆಟ್‌ಗೆ ಶಾಸಕ‌ ಸೇರಿದಂತೆ ಐದು ಜನರು ಅರ್ಜಿ‌ ಸಲ್ಲಿಸಿದ್ದಾರೆ. ಡಿಕೆಶಿ ಆಪ್ತ ನಾರಾಯಣಪ್ಪ, ರಾಜು ನಾಯಕ್ ರಿಂದ ಅರ್ಜಿ ಸಲ್ಲಿಸಲಾಗಿದ್ದರೆ ಸಿದ್ದರಾಂಯ್ಯ ಆಪ್ತ ಶಾಸಕ ಗಣೇಶ ಅವರೂ ಸಲ್ಲಿಸಿದ್ದಾರೆ.

ಬಬಲೇಶ್ವರ ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ.ಬಿ. ಪಾಟೀಲ್‌ ಅರ್ಜಿ ಸಲ್ಲಿಸಿದ್ದರೆ ಅತ್ತ ಮಾಜಿ ಶಾಸಕ ಶಿವಾನಂದ ಪಾಟೀಲ್‌, ತಮ್ಮ ಪುತ್ರಿ ಸಂಯುಕ್ತ ಪಾಟೀಲ್‌ ಅವರಿಂದ ಅರ್ಜಿ ಸಲ್ಲಿಕೆ ಮಾಡಿಸಿದ್ದಾರೆ.

ರಾಜಾಜಿನಗರದಿಂದ ಎಸ್‌. ನಾರಾಯಣ್‌
ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಲು ಚಲನಚಿತ್ರ ನಿರ್ದೇಶಕ ಎಸ್‌. ನಾರಾಯಣ್‌ ಮುಂದಾಗಿದ್ದಾರೆ. ಪ್ರಯತ್ನ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದೇನೆ. ಪಕ್ಷದ ಅಧ್ಯಕ್ಷರು ಮುಂದಿನ ನಿರ್ಧಾರ ಮಾಡುತ್ತಾರೆ ಎಂದು ನಾರಾಯಣ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | Election 2023 | ಕನಕಪುರದಿಂದ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ ಡಿ.ಕೆ ಶಿವಕುಮಾರ್‌, ನಿಯಮ ಪಾಲಿಸಿದ ಕೆಪಿಸಿಸಿ ಅಧ್ಯಕ್ಷ

Exit mobile version