Site icon Vistara News

Election Commission : ರಾಜ್ಯದ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಚುನಾವಣಾ ಆಯೋಗದ ರಾಷ್ಟ್ರ ಪ್ರಶಸ್ತಿ

Divya prabhu Shikha C Election Commission Awards

ಬೆಂಗಳೂರು: ಭಾರತ ಚುನಾವಣಾ ಆಯೋಗ (Election Commission) ಅತ್ಯುತ್ತಮ ಚುನಾವಣಾ ಅಭ್ಯಾಸಗಳನ್ನು (Best Electoral Practices) ಪ್ರೋತ್ಸಾಹಿಸಲು ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆ (National Voters day) ಅಂಗವಾಗಿ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗೆ (National Awards) ರಾಜ್ಯದ ಇಬ್ಬರು ಅಧಿಕಾರಿಗಳು (Two women officers) ಭಾಜನರಾಗಿದ್ದಾರೆ.

2023ನೇ ಸಾಲಿನ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಸಾಮಾನ್ಯ ಪ್ರಶಸ್ತಿ ವರ್ಗದಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಾ ಪ್ರಭು ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗೆ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ಶಿಖಾ ಸಿ ಅವರು ಭಾಜನರಾಗಿದ್ದಾರೆ.

ದಿವ್ಯಾ ಪ್ರಭು ಅವರು ಮತದಾರರ ಪಟ್ಟಿ ನಿರ್ವಹಣೆಯಲ್ಲಿ ಯುವ ಮತದಾರರ ನೋಂದಣಿ, ವಿಶೇಷ ಮತದಾರರ ನೋಂದಣಿ ಹೆಚ್ಚಳ ಸೇರಿದಂತೆ ಅವರು ಚುನಾವಣೆಯಲ್ಲಿ ನಿರ್ವಹಿಸಿದ ಕಾರ್ಯಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮರಾಗಿ ಗುರುತಿಸಿಕೊಂಡಿದ್ದನ್ನು ಆಯೋಗ ಪ್ರಶಸ್ತಿಗೆ ಪರಿಗಣಿಸಿದೆ.

ಇದನ್ನು ಓದಿ : Academy Awards : ಇದು ನಿಮ್ಮ ಮೊದಲ ಕೃತಿಯೇ?; ಹಾಗಿದ್ರೆ ಸಾಹಿತ್ಯ ಅಕಾಡೆಮಿ ಬಹುಮಾನಕ್ಕಾಗಿ ಅರ್ಜಿ ಸಲ್ಲಿಸಿ

ಶಿಖಾ ಸಿ ಅವರು ಕಳೆದ 2023 ರ ಸಾಲಿನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಆಯುಕ್ತರಾಗಿ ಇಲಾಖೆಯ ಮೂಲಕ ಮತದಾರರಲ್ಲಿ ಉಚಿತ ಉಡುಗೊರೆಗಳ ಕುರಿತು ಹಮ್ಮಿಕೊಂಡಿದ್ದ ಜನಜಾಗೃತಿ, ವಾಣಿಜ್ಯ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತಿ ಪಾಲನೆ ಸೇರಿದಂತೆ ಕಟ್ಟುನಿಟ್ಟಿನ ಚುನಾವಣೆ ನಡೆಸಲು ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಆಯೋಗ ಅವರನ್ನು ಹಾಗೂ ಇಲಾಖೆಯನ್ನು ಈ ಪ್ರಶಸ್ತಿಗೆ ಪರಿಗಣಿಸಿದೆ.

ಆಯೋಗವು ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರನ್ನು ಅಭಿನಂದಿಸಲು ಪ್ರತಿ ವರ್ಷ ಸಾಮಾನ್ಯ ವರ್ಗ, ವಿಶೇಷ ವರ್ಗ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳು ಹಾಗೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ರಾಜ್ಯ ಎಂದು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ.

ಆಯೋಗ ಪ್ರತಿ ವರ್ಷ ನವದೆಹಲಿಯಲ್ಲಿ ಜನವರಿ 25 ರಂದು ಹಮ್ಮಿಕೊಳ್ಳುವ ರಾಷ್ಟ್ರೀಯ ಮತದಾರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Exit mobile version