ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಿಜೆಪಿ ನಾಯಕರೇ ಕೈಜೋಡಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಮತ್ತೊಂದು ಅಸ್ತ್ರ ಸೇರ್ಪಡೆಯಾಗಿದ್ದು, ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಟ್ವೀಟ್ ಮಾಡಿದೆ.
ಈ ಹಿಂದೆ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆಗಿನ ಆರ್‌ಡಿಪಿಆರ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದರಿಂದಾಗಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನಂತರ ತನಿಖೆ ನಡೆಸಿದ ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿ ಈಶ್ವರಪ್ಪ ವಿರುದ್ಧ ಆರೋಪಗಳನ್ನು ಕೈಬಿಟ್ಟಿದ್ದರು. ಆದರೆ ಇಲ್ಲಿವರೆಗೆ ಮತ್ತೆ ಸಚಿವ ಸ್ಥಾನ ಪಡೆಯಲು ಈಶ್ವರಪ್ಪ ಅವರಿಂದ ಸಾಧ್ಯವಾಗಿಲ್ಲ.
ಇದೀಗ ಬೆಂಗಳೂರಿನಲ್ಲಿ ಪ್ರದೀಪ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ಶಾಸಕ ಅರವಿಂದ ಲಿಂಬಾವಳಿ ಹೆಸರನ್ನು ಬರೆದಿಟ್ಟಿದ್ದಾರೆ. ಡೆತ್ ನೋಟ್ ಆಧಾರದಲ್ಲಿ ಲಿಂಬಾವಳಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ಇದನ್ನೇ ಅತ್ರವಾಗಿಸಿಕೊಂಡಿರುವ ಕಾಂಗ್ರೆಸ್, “ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರ ರಕ್ಷಣೆ. ಮತ್ತೊಬ್ಬ ಗುತ್ತಿಗೆದಾರ ಪ್ರಸಾದ್ ಆತ್ಮಹತ್ಯೆ ಪ್ರಕರಣದಲ್ಲೂ ಅಧಿಕಾರಿಗಳ ರಕ್ಷಣೆ. ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಅರವಿಂದ್ ಲಿಂಬಾವಳಿ.”
“ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿಸಿಎಂ ಆಗಿದ್ದಾರೆ. ಕ್ರಿಮಿನಲ್ಸ್ ಕೇರ್‌ಟೇಕರ್ ಮಿನಿಸ್ಟರ್” ಎಂದು ಟೀಕಿಸಿದೆ.
ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾನೂನಾತ್ಮಕವಾಗಿ ಏನೆಲ್ಲ ನಡೆಯಬೇಕೊ ಅದೆಲ್ಲವೂ ನಡೆಯುತ್ತದೆ ಎಂದಿದ್ದಾರೆ.
ಇದನ್ನೂ ಓದಿ | Suicide Case | ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಪ್ರಕರಣ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧವೂ ಎಫ್‌ಐಆರ್