ಬೆಂಗಳೂರು: ರಾಜಧಾನಿಯ (Bangalore news) ಜನನಿಬಿಡ ಪ್ರದೇಶದಲ್ಲಿ ಎಲೆಕ್ಟ್ರಿಕ್ ಬಸ್ಸೊಂದು (Electric bus fire) ಮಳೆಯ ನಡುವೆಯೇ ಹೊತ್ತಿ ಉರಿದು ಬೂದಿಯಾಗಿದೆ. ನಾಗವಾರ- ಹೆಬ್ಬಾಳ ರಸ್ತೆಯಲ್ಲಿ ನಿನ್ನೆ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ (Bangalore rain) ರಸ್ತೆಯಲ್ಲಿ ನೀರು ನಿಂತಿತ್ತು. ಈ ವೇಳೆ ಅದೇ ಮಾರ್ಗವಾಗಿ ಬಂದ ಎಲೆಕ್ಟ್ರಿಕ್ ಬಸ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ನಡು ರಸ್ತೆಯಲ್ಲೇ ಹೊತ್ತಿ ಉರಿದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಮೊದಲು ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಪ್ರಯಾಣಿಕರು ಬಸ್ಸಿಂದ ಕೆಳಗಿಳಿದು ಬಚಾವಾಗಿದ್ದಾರೆ. ಅನಂತರ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಬೆಂಕಿ ಶಮನವಾಗಿಲ್ಲ. ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ತಲುಪುವ ಮೊದಲೇ ಸಂಪೂರ್ಣ ಬೆಂಕಿ ತಗುಲಿಕೊಂಡು ಬಸ್ಸಿನ ಅಸ್ಥಿಪಂಜರ ಮಾತ್ರ ಉಳಿದಿದೆ.
ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ ಸೆರೆ
ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಹಗ್ ಮಾಡಿ, ಕಿಸ್ ಕೊಟ್ಟು ಪರಾರಿಯಾಗಿದ್ದ ಕಾಮುಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೋಣನಕುಂಟೆ ಬಳಿಯ ಕೃಷ್ಣಾನಗರದಲ್ಲಿ ನಡೆದಿದ್ದ ಘಟನೆಯ (Woman Harassed) ವಿಡಿಯೊ ಭಾರಿ ವೈರಲ್ ಆಗಿತ್ತು. ಇದರಿಂದ ರಾಜಧಾನಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್‌ಐ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಕ್ಯಾಬ್ ಚಾಲಕ ಸುರೇಶ್(25) ಬಂಧಿತ ಆರೋಪಿ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಾಪ್ ಮಾಡೋದಕ್ಕೆ ಬಂದಿದ್ದ ಆರೋಪಿ, ರಸ್ತೆ ಮೇಲೆ ಹೋಗುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ್ದ. ಮಹಿಳೆಯು ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್ ಕೊಟ್ಟಿದ್ದ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದರು. ಅವರ ಹಿಂದೆಯೇ ಓಡಿ ಹೋದ ದುರುಳ, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದ.
ಶುಕ್ರವಾರ ಬೆಳಗ್ಗೆ ನಡೆದಿದ್ದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್‌ಐ ಹಾಗೂ ಇಬ್ಬರು ಸಿಬ್ಬಂದಿಯನ್ನು ಡಿಸಿಪಿ ಲೊಕೇಶ್ ಅಮಾನತು ಮಾಡಿದ್ದಾರೆ.
ಶಾಲಾ ವ್ಯಾನ್‌ಗೆ ಶಿಕ್ಷಕ ಬಲಿ
ವಿಜಯನಗರ: ಬೈಕ್ ಹಾಗೂ ಶಾಲಾ ವಾಹನದ ಮಧ್ಯೆ ಅಪಘಾತ (Road Accident) ಸಂಭವಿಸಿದ್ದು, ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಸರ್ಕಾರಿ ಶಾಲೆಯ ಹಿಂದಿ ಶಿಕ್ಷಕ ಮುನಿಯಪ್ಪ (55) ಮೃತ ದುರ್ದೈವಿ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕುಪ್ಪಿನಕೇರಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಮುನಿಯಪ್ಪನವರು ಅಮ್ಮನಕೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು. ಮೂಲತಃ ಹರಪನಹಳ್ಳಿ ತಾಲೂಕಿನ ಉಂಚಳ್ಳಿ ಗ್ರಾಮದವದ ಮುನಿಯಪ್ಪ ಅವರು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಕೊಠಡಿ ನಿರೀಕ್ಷಕರಾಗಿ ಕರ್ಥವ್ಯಕ್ಕೆ ನಿಯೋಜನೆ ಆಗಿದ್ದರು.
ಕೂಡ್ಲಿಗಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಖಾಸಗಿ ಶಾಲಾ ವಾಹನ ಡಿಕ್ಕಿ ರಭಸಕ್ಕೆ ಹಾರಿ ಬಿದ್ದ ಮುನಿಯಪ್ಪ ಸ್ಥಳದಲ್ಲೇ ರಕ್ತಕಾರಿ ಮೃತಪಟ್ಟಿದ್ದಾರೆ. ಕೊಟ್ಟೂರು ತಾಲೂಕಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದ ಶಿಕ್ಷಕ ಮುನಿಯಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Murder Case : ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ; ಕೈ-ಕಾಲು ಬಿಗಿದು, ಕಲ್ಲು ಕಟ್ಟಿ ಕೆರೆಗೆ ಎಸೆದ ಹಂತಕರು