Site icon Vistara News

Electricution | ವಿದ್ಯುತ್ ಸ್ಪರ್ಶದಿಂದ 75 ಆನೆಗಳ ಸಾವು: ದುರಂತ ತಪ್ಪಿಸಲು ಮಾರ್ಗಸೂಚಿ, ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

KSRTC

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಸ್ಪರ್ಶದಿಂದ ವನ್ಯಜೀವಿಗಳು ಹಾಗೂ ಜನ ಸಾಮಾನ್ಯರ ಮರಣವನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಲು ಉನ್ನತ ಮಟ್ಟದ ಸಮಿತಿ ರಚಿಸುವ ಕುರಿತು ರಾಜ್ಯ ಹೈಕೋರ್ಟ್‌ ಸರ್ಕಾರಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿದೆ. ರಾಜ್ಯದಲ್ಲಿ ೭೫ರಷ್ಟು ಆನೆಗಳು ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿವೆ ಎಂದು ಉಲ್ಲೇಖಿಸಲಾದ ದಾವೆಯೊಂದರ ವಿಚಾರಣೆ ವೇಳೆ ಈ ಸೂಚನೆ ನೀಡಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್  ಜಾರಿಗೊಳಿಸಿದ ಪೀಠವು ಈ ಬಗ್ಗೆ ನಿಲುವನ್ನು ತಿಳಿಸುವಂತೆ ಸೂಚಿಸಿದೆ.

ಎರಡು ಆನೆಗಳ ಸಾವಿನ ಪ್ರಕರಣ
ಶಿವಮೊಗ್ಗದ ಆಯನೂರು ತಾಲೂಕಿನ ಚೆನ್ನಹಳ್ಳಿಯಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಮೆಕ್ಕಜೋಳ ಬೆಳೆದಿದ್ದರು. ಜಮೀನಿನ ಸುತ್ತ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು. ಭದ್ರಾ ಸಂರಕ್ಷಿತ ಅರಣ್ಯ ಪ್ರದೇಶದಿಂದ ಏಳು ಆನೆಗಳು ಆಹಾರ ಅರಸಿ ಬಂದಿದ್ದವು. ಅದರಲ್ಲಿ ಎರಡು ಗಂಡು ಆನೆಗಳು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದವು. ಇದನ್ನು ಆಧರಿಸಿ ಅರ್ಜಿದಾರರು ಕೋರ್ಟ್‌ ಮೊರೆ ಹೊಕ್ಕಿದ್ದರು.

ಇಂಥಹುದೇ ಘಟನೆಗಳು ರಾಜ್ಯದಲ್ಲಿ ಪದೇಪದೆ ಸಂಭವಿಸುತ್ತಿವೆ. ಅದರಲ್ಲೂ ಚಾಮರಾಜನಗರದಲ್ಲಿ 36 ಆನೆಗಳು ಈ ರೀತಿ ಸಾವನ್ನಪ್ಪಿವೆ ಎಂದು ಉಲ್ಲೇಖಿಸಿದ್ದರು. ಮೈಸೂರಿನಲ್ಲಿ 12, ಕೊಡಗಿನಲ್ಲಿ 10, ಬೆಂಗಳೂರಿನಲ್ಲಿ 7, ಹಾಸನದಲ್ಲಿ 4 ಮತ್ತು ಚಿಕ್ಕಮಗಳೂರಿನಲ್ಲಿ 1 ಆನೆ ಈ ರೀತಿಯ ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿವೆ. ರಾಜ್ಯದಲ್ಲಿ ಈ ರೀತಿ ೭೫ ಆನೆಗಳು ಮೃತಪಟ್ಟಿದ್ದನ್ನು ಉಲ್ಲೇಖಿಸಲಾಗಿದೆ.

ಕರ್ನಾಟಕದ ಹಲವು ಭಾಗಗಳು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಜಮೀನಿಗೆ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಆದರೆ, ಈ ವಿಷಯದ ಬಗ್ಗೆ ಅರಣ್ಯ ಮತ್ತು ಇಂಧನ ಇಲಾಖೆ ವಿಚಕ್ಷಣಾ ವಿಭಾಗದ ಅಧಿಕಾರಿಗಳು ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ರಾಜ್ಯದಲ್ಲಿ ಅನಧಿಕೃತವಾಗಿ ಅಳವಡಿಸಿದ ವಿದ್ಯುತ್ ತಂತಿಗಳಿಂದ ವಿದ್ಯುತ್ ಪ್ರವಹಿಸಿ ಮೃತಪಡುವುದರಿಂದ ವನ್ಯಜೀವಿ ಮತ್ತು ಮನಷ್ಯರನ್ನು ರಕ್ಷಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಬೇಕಿದೆ. ಮಾರ್ಗಸೂಚಿಗಳನ್ನು ಜಾರಿಗೊಳಿಸಲು ವಿಶೇಷ ದಳ ರೂಪಿಸಬೇಕಿದೆ. ಆದ್ದರಿಂದ ಮಾರ್ಗಸೂಚಿ ರೂಪಿಸುವುದಕ್ಕೆ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಅಲ್ಲದೆ, ವಿದ್ಯುತ್ ಪ್ರವಹಿಸಿ ಕಳೆದ ವರ್ಷಗಳಿಂದ ಹುಲಿ, ಆನೆ ಸೇರಿದಂತೆ ಎಷ್ಟು ವನ್ಯಜೀವಿಗಳು ಮತ್ತು ಮಾನವರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿತ್ತು.

Exit mobile version