ಬೆಂಗಳೂರು: ರಾಜಧಾನಿ ಬೆಂಗಳೂರು ಅಂದರೆ ಟ್ರಾಫಿಕ್‌ಗೆ (Bangalore Traffic) ಹೆಸರುವಾಸಿ. ಇಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವುದು ಎಂದರೆ ಜೀವ ಕೈಯಲ್ಲಿ ಹಿಡಿದು ಹೋಗಬೇಕು. ಸ್ವಲ್ಪ ಎಡವಟ್ಟಾದರೂ ಅಪಘಾತ – ಅವಘಡಗಳು ಕಟ್ಟಿಟ್ಟ ಬುತ್ತಿ. ಅಲ್ಲದೆ, ಈಚೆಗೆ ಟೆಕ್ಕಿಗಳ ಅಪಘಾತ ಸಾವು ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ, ಹಲವು ಟೆಕ್ಕಿಗಳು ಟ್ರಾಫಿಕ್ ರೂಲ್ಸ್ (Traffic Rules) ಅನ್ನು ಲೆಕ್ಕಿಸದೇ ಬ್ರೇಕ್ ಮಾಡಿ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ದಂಡ ಹಾಕಲಾಗುತ್ತದೆಯಾದರೂ ನಿಯಮ ಉಲ್ಲಂಘನೆ ಮಾತ್ರ ನಿಂತಿಲ್ಲ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು (Bangalore Traffic Police) ನೂತನ ದಾರಿಯೊಂದನ್ನು ಕಂಡುಕೊಂಡಿದ್ದಾರೆ. ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ (Traffic rules break) ಮಾಡುವ ಟೆಕ್ಕಿಗಳ ಆಫೀಸ್‌ಗೆ ಇ-ಮೆಲ್ ರವಾನೆ ಮಾಡಲು ಮುಂದಾಗಿದ್ದಾರೆ.
ಈ ಮೂಲಕ ಸಿಲಿಕಾನ್ ಸಿಟಿ ಟೆಕ್ಕಿಗಳ ಮೇಲೆ ಇಮೇಲ್ ಅಸ್ತ್ರವನ್ನು ಟ್ರಾಫಿಕ್ ಪೊಲೀಸರು ಪ್ರಯೋಗ ಮಾಡಿದ್ದಾರೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದರಲ್ಲಿ ಟೆಕ್ಕಿಗಳದ್ದೇ ಮೈಲುಗೈ ಎಂಬ ಅಂಶ ಪ್ರಕರಣಗಳಿಂದ ತಿಳಿದುಬಂದಿದೆ. ಹೀಗಾಗಿ ಅಂತಹ ಟೆಕ್ಕಿಗಳಿಗೆ ಶಾಕ್ ನೀಡಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಕೇಸು, ದಂಡದ ಜತೆಗೆ ಅವರ ಕಚೇರಿಗೆ ಇ-ಮೇಲ್ ಕಳಿಸಲು ಮುಂದಾಗಿದ್ದಾರೆ.
ಏನಿದು ಇ-ಮೇಲ್ ಅಸ್ತ್ರ?
ಇಷ್ಟು ದಿನ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಮೊಬೈಲ್ ಹಾಗೂ ಮನೆಗೆ ಮಾತ್ರ ನೋಟಿಸ್ ಬರುತ್ತಿತ್ತು. ಇಷ್ಟಕ್ಕೆ ಜನರಲ್ಲಿ ಜಾಗೃತಿ ಮೂಡುತ್ತಿಲ್ಲ. ಹೀಗಾಗಿ ಅವರಿಗೆ ಇದರ ಬಗ್ಗೆ ಪ್ರಜ್ಞೆ ಹೆಚ್ಚಾಗಬೇಕಾದರೆ ಅವರು ಕೆಲಸ ಮಾಡುವ ಕಚೇರಿಗೆ ಈ ಸಂಬಂಧ ಇ-ಮೇಲ್ ಕಳುಹಿಸಬೇಕು. ಇದರಿಂದ ಆಗುವ ಮುಜುಗರವನ್ನು ತಪ್ಪಿಸಿಕೊಳ್ಳಲಿಕ್ಕಾದರೂ ಟೆಕ್ಕಿಗಳು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದನ್ನು ಬಿಡುತ್ತಾರೇನೋ ಎಂಬ ಆಶಯವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಂದಿದ್ದಾರೆ.
ಇನ್ನು ಮುಂದೆ ಕೆಲಸಕ್ಕೆ ಟೈಮ್ ಆಯಿತು ಎಂದು ಒನ್ ವೇ ರೈಡ್, ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಚಾಲನೆ, ಸೀಟ್ ಬೆಲ್ಟ್ ಹಾಕದೇ ಚಾಲನೆ ಮಾಡಿದರೆ ಟೆಕ್ಕಿಗಳ ಕಚೇರಿಗೆ ಇ-ಮೇಲ್ ರವಾನೆ ಆಗುತ್ತದೆ. ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಹದೇವಪುರ, ಎಚ್ಎಎಲ್ ಸುತ್ತಮುತ್ತ ಈ ಪ್ರಯೋಗವನ್ನು ಆರಂಭ ಮಾಡಲಾಗಿದೆ.
ಇ-ಮೇಲ್‌ನಲ್ಲಿ ಏನಿರುತ್ತದೆ?
ನಿಮ್ಮ ಸಂಸ್ಥೆಯ ಸಿಬ್ಬಂದಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ವಾಹನ ಚಲಾಯಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪೋಟೊ ಇಲ್ಲಿದೆ. ಈ ಬಗ್ಗೆ ನಿಮ್ಮ ಸಂಸ್ಥೆಯ ಗಮನಕ್ಕೆ ತರಲಾಗುತ್ತಿದೆ. ನಿಮ್ಮ ಸಿಬ್ಬಂದಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡದ ರೀತಿಯಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಲಗುತ್ತದೆ.
ಯಾರಿಗೆ ಇ-ಮೇಲ್ ರವಾನೆ?
ಕಳೆದ ಒಂದು ತಿಂಗಳಲ್ಲಿ ಸುಮಾರು 200 ಮಂದಿ ಟೆಕ್ಕಿಗಳ ಬಗ್ಗೆ ಟ್ರಾಫಿಕ್ ಪೊಲೀಸರು ಇ-ಮೇಲ್ ಕಳುಹಿಸಿದ್ದಾರೆ. ವೈಟ್‌ಫೀಲ್ಡ್ ಸುತ್ತಮುತ್ತ ಕೆಲಸ ಮಾಡುವ ಟೆಕ್ಕಿಗಳ ಕಂಪನಿಯ ಮ್ಯಾನೇಜರ್ ಹಾಗೂ ಸೆಕ್ಯುರಿಟಿ ಮ್ಯಾನೇಜರ್‌ಗೆ ಇ-ಮೇಲ್ ಮೂಲಕ ಮಾಹಿತಿಯನ್ನು ರವಾನೆ ಮಾಡಲಾಗಿದೆ.
ವಾರಕ್ಕೆ 100ಕ್ಕೂ ಹೆಚ್ಚು ಕೇಸ್
ಈ ವಾರದಲ್ಲಿಯೇ 100ಕ್ಕೂ ಹೆಚ್ಚು ಮಂದಿ ಮೇಲೆ ಇ-ಮೇಲ್ ಅಸ್ತ್ರ ಪ್ರಯೋಗ ಮಾಡಲಾಗಿದೆ. ಪ್ರತಿ ದಿನ ಮೂರ್ನಾಲ್ಕು ಮಂದಿಯಿಂದ ಸಂಚಾರ ನಿಯಮವನ್ನು ಉಲ್ಲಂಘನೆಯಾಗುತ್ತಿದೆ. ಹೀಗಾಗಿ ಇಮೇಲ್ ಜತೆಗೆ ಕೇಸ್ ದಾಖಲಿಸಿ ದಂಡವನ್ನು ಸಹ ವಿಧಿಸಲಾಗುತ್ತಿದೆ.
ಇದನ್ನೂ ಓದಿ: Hijab Row : ಮತ್ತೆ ಹಿಜಾಬ್‌ಗೆ ಅವಕಾಶ ಕೊಟ್ರೆ ಹುಷಾರ್; ಬಿವೈ ವಿಜಯೇಂದ್ರ ಕೆಂಡಾಮಂಡಲ
ರೂಲ್ಸ್ ಬ್ರೇಕ್ ಮಾಡೋದಲ್ದೇ ಪೊಲೀಸರ ಮೇಲೇ ಆರೋಪ!
ಟೆಕ್ಕಿಗಳು ಇಷ್ಟರ ಮಟ್ಟಿಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದಲ್ಲದೆ, ಸಣ್ಣ ಪುಟ್ಟ ಆರೋಪಗಳೊಂದಿಗೆ ಪೊಲೀಸರ ಮೇಲೆಯೇ ಕಿಡಿಕಾರುವುದಲ್ಲದೆ, ಅವರ ವಿರುದ್ಧ ಫೊಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಟ್ಯಾಗ್ ಮಾಡುತ್ತಿದ್ದರು. ಹೀಗಾಗಿ ಈಗ ಅವರ ಎಲ್ಲ ತಪ್ಪುಗಳನ್ನು ಎತ್ತಿ ಹಿಡಿದು ತೋರಿಸಲು ಪೊಲೀಸರು ಮುಂದಾಗಿದ್ದಾರೆ. ಇದರ ಜತೆಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಕಡಿಮೆಯಾಗಲಿ ಎಂಬ ಉದ್ದೇಶವನ್ನು ಹೊಂದಿದ್ದಾರೆ.