Site icon Vistara News

ESCOM Karnataka : ನಾಳೆಯಿಂದ 3 ದಿನ ಈ 98 ನಗರ, ಪಟ್ಟಣಗಳಲ್ಲಿ ಎಸ್ಕಾಂ ಆನ್‌ಲೈನ್‌ ಸೇವೆ ಇರಲ್ಲ!

ESCOM Karnataka payment

ಬೆಂಗಳೂರು: ನಾಳೆಯಿಂದ 3 ದಿನಗಳ ಕಾಲ ಎಸ್ಕಾಂ (ESCOM Karnataka) ಆನ್‌ಲೈನ್ ಸೇವೆಯನ್ನು (Online Service) ಬಂದ್ ಮಾಡಲಾಗುತ್ತಿದೆ. ಬೆಂಗಳೂರು ಸೇರಿ ಹಲವೆಡೆ ಸೇವೆ ಸ್ಥಗಿತವಾಗುತ್ತಿದ್ದು, ಬಿಲ್‌ ಪಾವತಿ (Payment of electricity bill) ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಅಡಚಣೆ ಉಂಟಾಗಲಿದೆ. 98 ನಗರ ಹಾಗೂ ಪಟ್ಟಣಗಳಲ್ಲಿ ಸೇವೆಗಳು ಅಲಭ್ಯವಾಗಲಿವೆ. ಈ ಪ್ರದೇಶಗಳಲ್ಲಿ ಮಾಹಿತಿ ತಂತ್ರಜ್ಞಾನ ಸೇವೆಗಳಿಗೆ ಸಂಬಂಧಿಸಿದ ತಂತ್ರಾಂಶಗಳು ಹಾಗೂ ಹಾರ್ಡ್‌ವೇರ್‌ಗಳನ್ನು ಅಪ್‌ಡೇಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಆನ್‌ಲೈನ್‌ ಸೇವೆಯನ್ನು ಬಂದ್‌ ಮಾಡಲಾಗುತ್ತಿದೆ.

ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು ಸೇರಿ ಹಲವೆಡೆ ಮೂರು ದಿನಗಳ ಕಾಲ ಆನ್‌ಲೈನ್‌ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಸ್ಕಾಂ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ.

ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಅವೈಜ್ಞಾನಿಕ ಅನ್ನೋದು ತಪ್ಪೆಂದ ಕಾಂತರಾಜು! ಬಿಜೆಪಿ ಮೇಲೆ ಕೆಂಡ

ಬೆಸ್ಕಾಂ ವೆಬ್‌ಸೈಟ್‌ನಲ್ಲಿನ ಪ್ರಕಟಣೆ

ESCOM Karnataka payment

ಯಾವೆಲ್ಲಾ ಸೇವೆ ಇರಲ್ಲ?

-ಹೊಸ ವಿದ್ಯುತ್ ಸಂಪರ್ಕ ನೋಂದಣಿ
-ಆನ್ ಲೈನ್ ಹಣ ಪಾವತಿ
-ಕೌಂಟರ್ ಗಳಲ್ಲಿ ನಗದು ಪಾವತಿ ಸೇರಿದಂತೆ ಇನ್ನಿತರ ಸೇವೆಗಳು ಅಲಭ್ಯವಾಗಲಿವೆ

ಅಪ್ಡೇಟ್‌ ಪ್ರಕ್ರಿಯೆಗೆ ಚಾಲನೆ

ಸದರಿ ತಂತ್ರಾಂಶಗಳು ಹಾಗೂ ಹಾರ್ಡ್‌ವೇರ್‌ಗಳನ್ನು ಅಪ್ಡೇಟ್‌ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಹಾಲಿ ಇರುವ ತಂತ್ರಾಂಶಗಳನ್ನು ಹೊಸ ಹಾರ್ಡ್‌ವೇರ್‌ಗಳ ಮೇಲೆ ಅಳವಡಿಸುವ ಹಾಗೂ ಸ್ಥಳಾಂತರಿಸುವ ಕೆಲಸವನ್ನು ಪ್ರಥಮ ಹಂತವಾಗಿ ತೆಗೆದುಕೊಳ್ಳಲಾಗಿದೆ. ಹೀಗಾಗಿ ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ – ಧಾರವಾಡ , ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರ ಸೇರಿದಂತೆ 98 ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈ ಮೂರು ದಿನಗಳ ಕಾಲ ಎಲ್ಲ ಮಾಹಿತಿ ತಂತ್ರಜ್ಞಾನ ಆಧಾರಿತ ಹಾಗೂ ವಿದ್ಯುತ್‌ ಕಚೇರಿಗಳ ನಗದು ಪಾವತಿ ಕೌಂಟರ್‌ಗಳಲ್ಲಿ ನಗದು ಪಾವತಿ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಈ ಅವಧಿಯಲ್ಲಿ ಆನ್‌ಲೈನ್‌ ಸೇವೆಗಳಾದ ಹೊಸ ವಿದ್ಯುತ್‌ ಸಂಪರ್ಕ, ಹೆಸರು/ ಲೋಡ್‌ ಬದಲಾವಣೆ, ನಗದು ಪಾವತಿ, ಆನ್‌ಲೈನ್‌ ಮೂಲಕ ವಿದ್ಯುತ್‌ ಬಿಲ್‌ ಪಾವತಿಗಳು ಹಾಗೂ ಇತರ ಸೇವೆಗಳು ಲಭ್ಯವಿರುವುದಿಲ್ಲ. ಆನ್‌ಲೈನ್‌ ಸೇವೆಗಳ ಅಲಭ್ಯತೆಯನ್ನು ಗಮನಿಸಿ ಗ್ರಾಹಕರು ಹಾಗೂ ಗುತ್ತಿಗೆದಾರರು ತಮ್ಮ ಅವಶ್ಯಕತೆಗಳನ್ನು ಮುಂಚಿತವಾಗಿ ರೂಪಿಸಿಕೊಳ್ಳಲು ಬೆಸ್ಕಾಂ ವಿನಂತಿಸಿದೆ.

ವಿದ್ಯುತ್‌ ಸೇವೆಗೆ ಸಮಸ್ಯೆ ಇಲ್ಲ

ಈ ಅವಧಿಯಲ್ಲಿ ವಿದ್ಯುತ್‌ ಸರಬರಾಜು ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಗ್ರಾಹಕರು ಆತಂಕ ಪಡಬೇಕಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆನ್‌ಲೈನ್‌ ಸೇವೆ ಲಭ್ಯ ಇಲ್ಲದ ಪಟ್ಟಣಗಳ ವಿವರ:

ಬೆಸ್ಕಾಂ: ಬೆಂಗಳೂರು ನಗರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಕ್ಯಾತಸಂದ್ರ, ಸಿರಾ, ಚನ್ನಪಟ್ಟಣ, ಆನೇಕಲ್‌, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್‌, ಚಳ್ಳಕೆರೆ, ಹರಪ್ಪನಹಳ್ಳಿ, ಹರಿಹರ, ಹಿರಿಯೂರು, ತಿಪಟೂರು ಹಾಗೂ ಗೌರಿ ಬಿದನೂರು.

ಸೆಸ್ಕ್‌: ಮಳವಳ್ಳಿ, ನಂಜನಗೂಡು, ಮೈಸೂರು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ.ಆರ್.‌ ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೇಗಾಲ, ಹಾಸನ ಹಾಗೂ ಚೆನ್ನರಾಯಪಟ್ಟಣ.

ಮೆಸ್ಕಾಂ: ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ ಹಾಗೂ ಚಿಕ್ಕಮಗಳೂರು.

ಜೆಸ್ಕಾಂ: ಮಾನ್ವಿ, ಸಿಂಧನೂರು, ಬೀದರ್‌, ಗಂಗಾವತಿ, ಕಲಬುರಗಿ, ಸೇಡಂ, ಬಸವಕಲ್ಯಾಣ, ವಾಡಿ, ಅಲನಾಡ್‌, ಭಾಲ್ಕಿ, ಶಹಬಾದ್‌, ಶಹಾಪುರ, ಶೋರಾಪುರ, ಸಿರಗುಪ್ಪ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮ್ನಾಬಾದ್‌ ಹಾಗೂ ಹೊಸಪೇಟೆ.

ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಬಗ್ಗೆ ಊಹೆ ಮಾಡ್ಬೇಡಿ, ನಾವೇಕೆ ಸಮಾಜ ಒಡೆಯುತ್ತೇವೆ? ಸಿಎಂ ಖಡಕ್‌ ಪ್ರಶ್ನೆ

ಹೆಸ್ಕಾಂ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ನಿಪ್ಪಾಣಿ, ಜಮಖಂಡಿ, ಬೈಲಹೊಂಗಲ, ಲಕ್ಷ್ಮೇಶ್ವರ, ನರಗುಂದ, ರಾಮದುರ್ಗ, ಚಿಕ್ಕೋಡಿ, ಗುಳೇದಗುಡ್ಡ, ಮಹಾಲಿಂಗಪುರ, ಅಥಣಿ, ಭಟ್ಕಳ, ದಾಂಡೇಲಿ, ಇಂಡಿ, ಸವದತ್ತಿ, ಸೇವನೂರು, ಶಿರಸಿ, ಕುಮಟಾ, ಬಾಗಲಕೋಟೆ, ರಬಕವಿ-ಬನಹಟ್ಟಿ, ಗದಗ, ಗೋಕಾಕ್‌, ಹಾವೇರಿ, ಇಳಕಲ್‌, ಮುಧೋಳ, ರಾಣೆಬೆನ್ನೂರು ಹಾಗೂ ವಿಜಯಪುರ ನಗರದಲ್ಲಿ ಮಾಹಿತಿ ತಂತ್ರಜ್ಞಾನ ತಂತ್ರಾಂಶ ಸೇವೆಗಳು ಲಭ್ಯವಿರುವುದಿಲ್ಲ.

Exit mobile version