ಬೆಂಗಳೂರು: ಸಿಬಿಐ ಪೊಲೀಸರೆಂದು (Fake CBI Officer ) ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ವಿದ್ಯಾರ್ಥಿಗಳಿದ್ದ ಮನೆಗೆ ಸಿಬಿಐ ಅಧಿಕಾರಿಗೆಳೆಂದು ದಾಳಿ ಮಾಡಿದ್ದರು. ಈ ವೇಳೆ ತಾವೇ ತಂದಿದ್ದ ಗಾಂಜಾವನ್ನು ವಿದ್ಯಾರ್ಥಿಗಳ ಕೈಯಲ್ಲಿ ಇಟ್ಟು ವಿಡಿಯೊ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದರು. ಕೈಯಲ್ಲಿದ್ದ ಪಿಸ್ತೂಲ್, ಐಡಿ ಕಾರ್ಡ್, ಲಾಟಿಯಿಂದ ಹಲ್ಲೆ ಮಾಡಿದ್ದರು.
ಆರೋಪಿಗಳ ನಡವಳಿಕೆಯಿಂದ ಅನುಮಾನಗೊಂಡ ಯುವಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ತನಿಖೆ ನಡೆಸಿದ ಸೋಲದೇವನಹಳ್ಳಿ ಪೊಲೀಸರು ದೂರು ದಾಖಲಾಗಿ 12 ಗಂಟೆಯೊಳಗೆ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅನಂತಕೃಷ್ಣ(23), ಪ್ರಮೋದ (42), ಆದರ್ಶ್(22) ಮತ್ತು ದೀಪಕ್ ಆರ್ ಚಂದ್ರ (37) ಬಂಧಿತ ಆರೋಪಿಗಳಾಗಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 1- ಮಹೀಂದ್ರ ಎಕ್ಸ್ ಯು ವಿ, 1 ಹ್ಯೂಂಡೈ ಐ 20 ಕಾರು, 1 ಏರ್ ಪಿಸ್ತೂಲ್, ಕೈ ಕೋಳ, ಐಡಿ ಕಾರ್ಡ್, ಬ್ಯಾಟನ್ ಮತ್ತು 4 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: Love Case : ಪ್ರೇಮಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕೇಸ್; ಯುವತಿ ತಂದೆ ಅರೆಸ್ಟ್
ಇನ್ನೂ ಆರೋಪಿ ಪ್ರಮೋದ್ ತಿರುವನಂತಪುರಂನಲ್ಲಿ ಹೋಟೆಲ್ ಬಿಸಿನೆಸ್ ನಡೆಸುತ್ತಿದ್ದ. ತನ್ನ ತಂಗಿಯನ್ನು ಬೆಂಗಳೂರಿನ ಯುವಕನಿಗೆ ಮದುವೆ ಮಾಡಿಕೊಟ್ಟಿದ್ದ. ಈ ಹಿನ್ನೆಲೆಯಲ್ಲಿ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ. ಪ್ರಮೋದ್‌ನ ಪಕ್ಕದ ಊರಿನವರಾದ ಅನಂತಕೃಷ್ಣ ಮತ್ತು ಆದರ್ಶ್ ಬೆಂಗಳೂರಿನಲ್ಲಿ ಓದುತ್ತಿದ್ದರು. ಇವರನ್ನು ಪ್ರಮೋದ್ ಪರಿಚಯ ಮಾಡಿಕೊಂಡಿದ್ದ. ಜತೆಗೆ ಕೇರಳದಿಂದ ದೀಪಕ್ ಎಂಬಾತನನ್ನು ಕರೆಸಿಕೊಂಡು ಪ್ಲ್ಯಾನ್ ಮಾಡಿದ್ದ. ಸಿಬಿಐ ಅಧಿಕಾರಿಗಳೆಂದು ಹೇಳಿದರೆ ಸುಲಭವಾಗಿ ಹಣ ವಸೂಲಿ ಮಾಡಬಹುದೆಂದು ಈ ರೀತಿಯ ಕೃತ್ಯ ಮಾಡಿದ್ದರು.
ಬ್ಲ್ಯಾಕ್ ಮೇಲ್ ವೇಳೆ 3 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಲ್ಲಿ ಗಾಂಜಾ ಕೈಯಲ್ಲಿರುವ ವಿಡಿಯೋ ರಿಲೀಸ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆ ಸಮಯದಲ್ಲಿ ಯುಪಿಐ ಐಡಿಗೆ ವಿದ್ಯಾರ್ಥಿಗಳಿಂದ 90,000 ಹಣ ವರ್ಗಾವಣೆ ಮಾಡಿಕೊಂಡಿದ್ದರು. ಇನ್ನುಳಿದ ಹಣವನ್ನು ಮುಂದಿನ ದಿನ ನೀಡಬೇಕೆಂದು ಹೇಳಿ ಹೋಗಿದ್ದರು. ಸದ್ಯ ನಾಲ್ವರನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ