Site icon Vistara News

Fali s Nariman : ಹೋಗಿ ಬನ್ನಿ ನಾರಿಮನ್‌ ಸಾಬ್‌, ಕನ್ನಡಿಗರ ಮನಸ್ಸಿನಲ್ಲಿ ನಿಮ್ಮ ನೆನಪು ಸದಾ ಹಸಿರು

Fali S Nariman death memories

ಬೆಂಗಳೂರು: ಕಾವೇರಿ ನದಿ ನೀರು ವಿವಾದದಲ್ಲಿ (Cauvery Water Dispute) ಕರ್ನಾಟಕದ ಪರ ಪ್ರಬಲ ವಾದ ಮಂಡಿಸುತ್ತಾ, ಕನ್ನಡಿಗರ ಕಣ್ಮಣಿಯಾಗಿದ್ದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ (Supreme court Advocate) ಫಾಲಿ ಸ್ಯಾಮ್‌ ನಾರಿಮನ್‌ (Fali s Nariman) ಅವರ ನಿಧನಕ್ಕೆ ಕನ್ನಡ ನಾಡು ಕಂಬನಿ ಮಿಡಿದಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaiah), ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಗಲಿದ ಶ್ರೇಷ್ಠ ನ್ಯಾಯವಾದಿ ಫಾಲಿ ನಾರಿಮನ್‌ ಅವರು ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿಕೊಂಡಿದ್ದಾರೆ.

ಹೋಗಿಬನ್ನಿ ನಾರಿಮನ್‌ ಸಾಬ್‌, ನಿಮ್ಮ ನೆನಪು ಸದಾ ಹಸಿರು ಎಂದ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ತುಂಬ ಭಾವುಕರಾಗಿ ಫಾಲಿ ಎಸ್‌ ನಾರಿಮನ್‌ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ಬರೆದುಕೊಂಡಿದ್ದು ಹೀಗೆ..

ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಫಾಲಿ ಎಸ್ ನಾರಿಮನ್ (Fali s Nariman) ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು.

ದೇಶದ ಅತ್ಯಂತ ಶ್ರೇಷ್ಠ ನದಿ ನೀರಿನ ವಿವಾದ ತಜ್ಞರಾಗಿದ್ದ ನಾರಿಮನ್ ಅವರು ದಶಕಗಳ ಕಾಲ ಕರ್ನಾಟಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದರು. ಕೃಷ್ಞಾ, ಕಾವೇರಿ ನದಿಗಳ ಜಲಹಂಚಿಕೆ ವಿವಾದಗಳಲ್ಲಿ ಕರ್ನಾಟಕದ ರೈತರಿಗೆ ನ್ಯಾಯ ಸಿಕ್ಕಿದ್ದರೆ ಅದರಲ್ಲಿ ನಾರಿಮನ್ ಅವರ ದೊಡ್ಡ ಕೊಡುಗೆ ಇದೆ. ಸುಪ್ರೀಂಕೋರ್ಟ್‌ನ ನ್ಯಾಯಪೀಠದ ಗೌರವಾದರಗಳಿಗೆ ಪಾತ್ರರಾಗಿದ್ದ ನಾರಿಮನ್ ಅವರಂತಹವರು ನ್ಯಾಯವಾದಿಯಾಗಿ ಸಿಕ್ಕಿದ್ದು ಕರ್ನಾಟಕದ ಪಾಲಿನ ಭಾಗ್ಯವಾಗಿತ್ತು. ವಕೀಲಿ ವೃತ್ತಿಯಿಂದ ಬಂದ ನನಗೆ ಅವರ ಬಗ್ಗೆ ವಿಶೇಷವಾದ ಅಭಿಮಾನ ಇತ್ತು.

ದೇಶದ ಖ್ಯಾತ ಮತ್ತು ಪ್ರತಿಭಾವಂತ ವಕೀಲರಾಗಿದ್ದ ನಾರಿಮನ್ ಅವರ ಜೊತೆಗೆ ನನ್ನದು ದೀರ್ಘಕಾಲದ ಒಡನಾಟ. ನೀರಾವರಿಗೆ ಸಂಬಂಧಿಸಿದ ಎಂತಹ ಜಟಿಲ ಸಮಸ್ಯೆಗಳು ಎದುರಾದರೂ ಉದ್ವೇಗಗೊಳ್ಳದೆ ಪರಿಹಾರದ ಕ್ರಮಗಳನ್ನು ಸೂಚಿಸುತ್ತಿದ್ದ ಅವರ ಕಸುಬುಗಾರಿಕೆ ಅನನ್ಯವಾದುದು. ಆಂತರಿಕವಾದ ಸಭೆಯಲ್ಲಿ ಅವರು ನೀಡುತ್ತಿದ್ದ ಸಲಹೆಗಳು ಮತ್ತು ನ್ಯಾಯಾಲಯದಲ್ಲಿ ಮಂಡಿಸುತ್ತಿದ್ದ ವಾದಗಳಿಂದ ನೀರಾವರಿ ವಿಷಯದಲ್ಲಿ ನನ್ನ ಜ್ಞಾನವೃದ್ಧಿಯಾಗಿದೆ ಎನ್ನುವುದನ್ನು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತೇನೆ.

ನಾರಿಮನ್ ಅವರ ಅಗಲಿಕೆಯ ದು:ಖದಲ್ಲಿರುವ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು.‌ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಹೋಗಿ ಬನ್ನಿ ನಾರಿಮನ್ ಸಾಬ್, ಕನ್ನಡಿಗರ ಮನಸ್ಸಿನಲ್ಲಿ ನಿಮ್ಮ ನೆನಪು ಸದಾ ಹಸಿರಾಗಿರುತ್ತದೆ.

ಕರ್ನಾಟಕದ ಪರವಾಗಿ ಹೋರಾಡುತ್ತಿದ್ದ ಶ್ರೇಷ್ಠ ಸಂವಿಧಾನ ತಜ್ಞ: ಬಿವೈ ವಿಜಯೇಂದ್ರ

ಕರ್ನಾಟಕದ ನದಿ ನೀರಿನ ಪರವಾಗಿ ನ್ಯಾಯಾಲಯಗಳಲ್ಲಿ ಭಗೀರಥ ಹೋರಾಟ ನಡೆಸುತ್ತಿದ್ದ ದೇಶಕಂಡ ಶ್ರೇಷ್ಠ ಸಂವಿಧಾನ ತಜ್ಞ, ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ, ಪದ್ಮವಿಭೂಷಣ ಫಾಲಿ ಎಸ್. ನಾರಿಮನ್ (Fali s Nariman) ಅವರು ಇನ್ನಿಲ್ಲದಿರುವ ಸುದ್ದಿ ದುಃಖ ತರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ಇದನ್ನೂ ಓದಿ : Fali Nariman: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಪರ ನಿಂತಿದ್ದ ವಕೀಲ ಫಾಲಿ ನಾರಿಮನ್‌ ಇನ್ನಿಲ್ಲ

ಮೂರು ದಶಕಗಳಿಂದ ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಅಂತಾರಾಜ್ಯ ನದಿ ನೀರು ಹಂಚಿಕೆಯ ಎಲ್ಲ ವ್ಯಾಜ್ಯಗಳಲ್ಲಿ ರಾಜ್ಯದ ಪರ ವಾದಿಸುತ್ತಿದ್ದ ಅಂತರಾಷ್ಟ್ರೀಯ ಖ್ಯಾತಿಯ ಜಲತಜ್ಞರೆಂಬ ಖ್ಯಾತಿಯೂ ಪಡೆದಿದ್ದ ನಾರಿಮನ್ ಅವರು ಕರ್ನಾಟಕಕ್ಕೆ ನೀಡಿದ ಅನುಪಮ ಸೇವೆಯನ್ನು ರಾಜ್ಯದ ಜನತೆ ಎಂದೂ ಮರೆಯಲಾಗದು, ಅವರ ನಿಧನದಿಂದ ದೇಶ ಒಬ್ಬ ಮೇಧಾವಿ ಕಾನೂನು ತಜ್ಞನನ್ನು ಕಳೆದು ಕೊಂಡಂತಾಗಿದೆ, ಭಗವಂತನು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ರಾಜ್ಯದ ಪರ ಪ್ರಬಲ ಪ್ರತಿಪಾದಕನನ್ನು ಕಳೆದುಕೊಂಡಂತಾಗಿದೆ: ಬೊಮ್ಮಾಯಿ

ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರಿಮನ್ (Fali s Nariman) ಅವರ ನಿಧನದ ಸುದ್ದಿ ಕೇಳಿ ಮನಸಿಗೆ ನೋವಾಯಿತು. ಸುಮಾರು ಎಪ್ಪತ್ತು ವರ್ಷಗಳ ಕಾಲ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿರುವ ಅವರು ದೇಶದ ಪ್ರಮುಖ ವಕೀಲರಲ್ಲಿ ಒಬ್ಬರಾಗಿದ್ದರು.

ಕರ್ನಾಟಕದ ನೀರಾವರಿ ಯೋಜನೆ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಪರ ವಾದ ಮಾಡಿ, ರಾಜ್ಯಕ್ಕೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕ ನೀರಾವರಿ ವಿಚಾರದಲ್ಲಿ ರಾಜ್ಯದ ಪರ ವಾದ ಮಾಡುವ ಒಬ್ಬ ಸಮರ್ಥ ನ್ಯಾಯವಾದಿಯನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ

Exit mobile version