Site icon Vistara News

Fali S Nariman : ಹೆಚ್ಚು ಶುಲ್ಕದ ವದಂತಿಗೆ ಬೇಸತ್ತು ವಾದವನ್ನೇ ಮಾಡಲ್ಲ ಎಂದಿದ್ದರಂತೆ ನಾರಿಮನ್‌; ಎಂಬಿಪಾ ನೆನಪು

Fali S Nariman MB Patil

ಬೆಂಗಳೂರು: ಕಾವೇರಿ ಜಲ ವಿವಾದದಲ್ಲಿ (Cauvery Water Dispute) ರಾಜ್ಯದ ಪರ ವಾದಿಸಿ, ನ್ಯಾಯ ಒದಗಿಸಿದ ಖ್ಯಾತ ನ್ಯಾಯವಾದಿ ಫಾಲಿ ಎಸ್ ನಾರಿಮನ್ (Fali S Nariman) ಅವರ ನಿಧನಕ್ಕೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ (MB Patil) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅದರ ಜತೆಗೆ ಅವರೊಂದಿಗಿನ ಹಲವು ಘಟನಾವಗಳಿಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾದದ್ದು ಹೆಚ್ಚು ಶುಲ್ಕ ಪಡೆಯುತ್ತಿದ್ದಾರೆ ಎಂಬ ವದಂತಿ ಹರಡಿದಾಗ ವಾದವನ್ನೇ ಮಾಡಲ್ಲ ಎಂದು ಹೇಳಿದ್ದು ಕೂಡಾ ಒಂದು.

‘ನಾರಿಮನ್ ಅವರು ಈ ದೇಶ ಕಂಡ ಅಪ್ರತಿಮ ನ್ಯಾಯವಾದಿಗಳಲ್ಲಿ ಒಬ್ಬರು. ವೃತ್ತಿಯಲ್ಲಿ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದ ಅವರು, ಉದಾರ ಮಾನವತಾವಾದಿ ಆಗಿದ್ದರು. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಕಾವೇರಿ ನೀರಿನ ಹಕ್ಕಿನ ವಿಚಾರವಾಗಿ ಮಾತನಾಡುವಾಗ ಇದು ಅನುಭವಕ್ಕೆ ಬಂದಿತ್ತು’ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

ಕಾವೇರಿ ಜಲ ವಿವಾದ ಭುಗಿಲೆದ್ದಾಗ ನಾರಿಮನ್ ಅವರು ಕರ್ನಾಟಕದ ಹಕ್ಕನ್ನು ಸಮರ್ಥವಾಗಿ ಮಂಡಿಸಿದರು. ಅವರ ವಾದದಿಂದಾಗಿ ರಾಜ್ಯಕ್ಕೆ ಹೆಚ್ಚು ನೀರು ಸಿಕ್ಕಿತು. ನಮ್ಮ ಅಹವಾಲುಗಳನ್ನು ನಾರಿಮನ್ ಅವರು ಸದಾ ಸಹಾನುಭೂತಿಯಿಂದ ಆಲಿಸುತ್ತಿದ್ದರು ಎಂದು ಅವರು ಸ್ಮರಿಸಿದ್ದಾರೆ.

ಇದನ್ನೂ ಓದಿ: Fali s Nariman : ಹೋಗಿ ಬನ್ನಿ ನಾರಿಮನ್‌ ಸಾಬ್‌, ಕನ್ನಡಿಗರ ಮನಸ್ಸಿನಲ್ಲಿ ನಿಮ್ಮ ನೆನಪು ಸದಾ ಹಸಿರು

Fali S Nariman ಸಚಿವರು ಹೇಗಿರಬೇಕು ಎಂದು ಪಾಠ ಮಾಡುತ್ತಿದ್ದರು

ನಾರಿಮನ್ ಅವರೊಂದಿಗೆ ನನಗೆ ವೈಯಕ್ತಿಕವಾಗಿ ಗಾಢ ಸಂಬಂಧವಿತ್ತು. ಕಾವೇರಿ ನದಿಯ ವಿಚಾರದಲ್ಲಿ ಪ್ರತಿಯೊಂದು ವಿವರ ಮತ್ತು ಅಂಕಿಅಂಶಗಳನ್ನೆಲ್ಲ ಅವರು ಕರತಲಾಮಲಕ ಮಾಡಿಕೊಂಡಿದ್ದರು. ಎಷ್ಟೋ ಸಂದರ್ಭಗಳಲ್ಲಿ ಅವರು ನಮ್ಮನ್ನೆಲ್ಲ ಉದ್ದೇಶಿಸಿ, ಸಚಿವರಾದವರು ಯಾವುದೇ ವಿಚಾರದ ಬಗ್ಗೆ ಸೂಕ್ತ ತಿಳಿವಳಿಕೆ ಹೊಂದಿರಬೇಕು ಎಂದು ಹೇಳುತ್ತಿದ್ದರು. ಅವರ ಇಂತಹ ಮಾತುಗಳು ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತಿದ್ದವು ಎಂದು ಅವರು ನೆನಪಿಸಿಕೊಂಡಿದ್ದಾರೆ.

Senior Supreme Court Lawyer Fali S Nariman Dies At 95

Fali S Nariman ಅಧಿಕ ಶುಲ್ಕದ ಸುಳ್ಳು ವದಂತಿಯಿಂದ ಬೇಸತ್ತಿದ್ದರು

ಒಂದು ಹಂತದಲ್ಲಿ ನಾರಿಮನ್ ಅವರಿಗೆ ಅನಗತ್ಯವಾಗಿ ಅತ್ಯಧಿಕ ಶುಲ್ಕ ಪಾವತಿ ಮಾಡಲಾಗುತ್ತಿದೆ ಎನ್ನುವ ಅನಪೇಕ್ಷಿತ ಮಾತುಗಳು ಕೇಳಿಬಂದವು. ಆಗ ನೊಂದುಕೊಂಡ ನಾರಿಮನ್ ಅವರು ತಾವು ಹಿಂದೆ ಸರಿಯುವುದಾಗಿ ಹೇಳಿದರು. ಆ ಸಂದರ್ಭದಲ್ಲಿ ನಾನು ಅವರನ್ನು ಮನವೊಲಿಸಿ, ಪುನಃ ರಾಜ್ಯದ ಪರವಾಗಿ ವಾದಿಸುವಂತೆ ಮಾಡಿದೆ. ಅಂತಿಮವಾಗಿ ಅವರು ತಾವು ಕೊಟ್ಟ ಮಾತಿನಂತೆ ಕರ್ನಾಟಕಕ್ಕೆ ನ್ಯಾಯ ಒದಗಿಸಿ ಕೊಟ್ಟರು ಎಂದು ಅವರು ವಿವರಿಸಿದ್ದಾರೆ.

ಬೆಂಗಳೂರಿಗೆ ಹೆಚ್ಚುವರಿ ನೀರು ಕೊಡಿಸಿದ ಪುಣ್ಯಾತ್ಮ

ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಅವಾಸ್ತವಿಕವಾಗಿ ಮಾತನಾಡುತ್ತಿತ್ತು. ಆಗ ನಾರಿಮನ್ ಅವರು ಚೆನ್ನೈ ನಗರದ ಕುಡಿಯುವ ನೀರಿನ ಅಗತ್ಯಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ತಮ್ಮ ಪಾಲಿನ ತಲಾ 5 ಟಿಎಂಸಿ ಅಡಿ ನೀರನ್ನು ಉದಾರವಾಗಿ ಬಿಟ್ಟು ಕೊಟ್ಟಿರುವುದನ್ನು ನ್ಯಾಯ ಮಂಡಳಿಯ ಗಮನಕ್ಕೆ ತಂದರು. ಈ ಮೂಲಕ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 4.75 ಟಿಎಂಸಿ ಅಡಿ ನೀರು ಸಿಗುವಂತೆ ನೋಡಿಕೊಂಡರು. ಇದಕ್ಕಾಗಿ ಬೆಂಗಳೂರು ನಗರದ ಜನ ನಾರಿಮನ್ ಅವರಿಗೆ ಸದಾ ಕೃತಜ್ಞರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಭಗವಂತನು ನಾರಿಮನ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.

ರಾಜ್ಯಕ್ಕೆ ನ್ಯಾಯ ಒದಗಿಸಿದ ನಾರಿಮನ್‌: ಮಾಜಿ ಸಚಿವ ಕೆ. ಗೋಪಾಲಯ್ಯ

‘ನಾರಿಮನ್ ಅವರು ದೇಶ ಕಂಡ ಉತ್ತಮ ನ್ಯಾಯವಾದಿಗಳಲ್ಲಿ ಒಬ್ಬರು. ಕಾವೇರಿ ಜಲ ವಿವಾದದ ಸಂದರ್ಭದಲ್ಲಿ ರಾಜ್ಯದ ಪರ ವಾದಿಸಿ ನ್ಯಾಯವನ್ನು ದೊರಕಿಸಿ ಕೊಟ್ಟಿದ್ದರು. ಅವರ ನಿಧನದ ಸುದ್ದಿಯಿಂದ ತೀವ್ರ ಬೇಸರ ಉಂಟಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ. ಗೋಪಾಲಯ್ಯ ಅವರು ಸಂತಾಪ ವ್ಯಕ್ತಪಡಿಸಿದರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

Exit mobile version