ಬೆಂಗಳೂರು: ರಾಜಕಾಲುವೆ ಒತ್ತುವರಿ ಸಂಬಂದ ಮನವಿ ನೀಡಲು ಬಂದಾಗ ಶಾಸಕ ಅರವಿಂದ ಲಿಂಬಾವಳಿ ಅವರು ಆವಾಜ್ ಹಾಕಿ ಕೈಯಲ್ಲಿದ್ದ ಅಹವಾಲು ಪತ್ರವನ್ನು ಕಿತ್ತುಕೊಂಡಿದ್ದ ಪ್ರಕರಣದಲ್ಲಿ, ಮಹಿಳೆಯ ವಿರುದ್ಧ ವೈಟ್‌ಫೀಲ್ಡ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಓರ್ವ ಮಹಿಳೆ ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ಮನವಿ ನೀಡಲು ಗುರುವಾರ ಮದ್ಯಾಹ್ನ ಬಂದರು. ಆಗ ಶಾಸಕರು ಆ ಮಹಿಳೆಗೆ ಆವಾಜ್ ಹಾಕಿದ ದೃಶ್ಯ ಕಂಡುಬಂದಿತ್ತು. ಮಹಿಳೆ ನೀಡಲು ಬಂದ ಮನವಿ ಪತ್ರವನ್ನು ಕಸಿದುಕೊಂಡು ಕೂಗಾಡಿದ್ದರು. ʼನಿಂಗೆ ಮಾನ ಮರ್ಯಾದೆ ಇದೆಯೇ? ನಾಚಿಕೆ ಅಗಲ್ವಾ ನಿಂಗೆ?ʼ ಎಂದು ಆವಾಜ್ ಹಾಕಿ ನಂತರ ಮಹಿಳೆಯನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗಲು ಪೊಲೀಸರಿಗೆ ಹೇಳಿದ್ದರು.
ರೂತ್ ಸಗಾಯ್ ಮೇರಿ ಎಂಬ ಹೆಸರಿನ ಮಹಿಳೆ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತೆ ಎನ್ನಲಾಗಿದ್ದು, ರಾಜಕಾಲುವೆ ಒತ್ತುವರಿ ತೆರವು ಸಂಬಂಧ ಗುರುವಾರ ಮದ್ಯಾಹ್ನ ಒತ್ತುವರಿ ತೆರವಿಗೆ ಸಂಬಂಧಿಸಿ ಬಿಬಿಎಂಪಿ ಅಧಿಕಾರಿಗಳ ಜತೆಗೆ ವಾಗ್ವಾದ ನಡೆದಿತ್ತು.
ಇದನ್ನೂ ಓದಿ | ಬೆಂಗಳೂರು| ಅಹವಾಲು ಸಲ್ಲಿಸಲು ಬಂದ ಮಹಿಳೆಗೆ ಶಾಸಕ ಅರವಿಂದ್ ಲಿಂಬಾವಳಿ ಆವಾಜ್
ನಂತರ ಅದೇ ದಿನ ಮದ್ಯಾಹ್ನ ಕೆರೆ ಕೋಡಿ ಸಮೀಪ ಲಿಂಬಾವಳಿ ವೀಕ್ಷಣೆ ಮಾಡುತ್ತಿದ್ದ ಸ್ಥಳಕ್ಕೆ ಬಂದ ಮಹಿಳೆ ಮನವಿ ನೀಡಲು ಮುಂದಾಗಿದ್ದರು. ಈ ವೇಳೆ ಶಾಸಕರು ಮಹಿಳೆಯ ಕೈಯಲ್ಲಿದ್ದ ಮನವಿ ಪತ್ರವನ್ನು ಕಿತ್ತುಕೊಂಡು ಕಳಿಸಿದ್ದರು. ಅಲ್ಲಿಂದ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ, ಶಾಸಕರ ವಿರುದ್ಧ ದೂರು ನೀಡಿದ್ದಾರೆ.
ಶಾಸಕ ಅರವಿಂದ ಲಿಂಬಾವಳಿ ಅವರ ಬಿಜೆಪಿ ಪಕ್ಷದ ಕೆಲ ಮುಖಂಡರು ಹಾಗೂ ಬಿಬಿಎಂಪಿಯ ಕೆಲ ಅಧಿಕಾರಿಗಳು ಅಕ್ರಮವಾಗಿ ಬಂದು ಜೆಸಿಬಿ ಮೂಲಕ ತಮ್ಮ ಕಟ್ಟಡದ ಕಾಂಪೌಂಡನ್ನು ಕೆಡವಿದ್ದಾರೆ. ನಂತರ ಶಾಸಕರು ಬಾಯಿಗೆ ಬಂದಂತೆ ಬೈದು ಅವಮಾನಿಸಿದ್ದಾರೆ ಎಂದು ವೈಟ್‌ಫೀಲ್ಡ್ ಠಾಣೆಗೆ ದೂರು ನೀಡಿದ್ದಾರೆ. 40 ವರ್ಷದ ಹಿಂದೆ ಕಟ್ಟಡ ನಿರ್ಮಾಣವಾಗಿದ್ದು, ಈಗಾಗಲೆ ಎಲ್ಲ ಸರ್ಕಾರಿ ಸರ್ವೇ ಮಾಡಿಸಲಾಗಿದೆ. ಈ ಕುರಿತು ಎಲ್ಲ ದಾಖಲೆಗಳಿದ್ದರೂ ಯಾವುದೇ ನೋಟಿಸ್ ಸಹ ನೀಡದೆ ಏಕಾಏಕಿ ಬಂದು ಗೋಡೆ ಒಡೆದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ವಿರುದ್ಧ ಎಫ್‌ಐಆರ್
ರೂತ್ ಸಗಾಯ್ ಮೇರಿ, ಆಕೆಯ ಪತಿ ಹಾಗೂ ಮಗನ ವಿರುದ್ಧ ಬಿಬಿಎಂಪಿ ವೈಟ್‌ಫೀಲ್ಡ್ ಸರ್ಕಲ್‌ನ ಕಂದಾಯ ನಿರೀಕ್ಷಕ ಪಾರ್ಥಸಾರಥಿ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಗುರುವಾರ ರಾತ್ರಿ ಎಫ್‌ಐಆರ್ ದಾಖಲಿಸಲಾಗಿದ್ದು, ರಾಜಕಾಲುವೆ ಒತ್ತುವರಿಯಿಂದಾಗಿ ಇತ್ತೀಚೆಗೆ ಸುತ್ತಮುತ್ತಲಿನ ಪ್ರದೇಶ, ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ನುಗ್ಗಿತ್ತು. ಮತ್ತೂ ಮಳೆಯಾಗುವ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರರ ಮೌಖಿಕ ಆದೇಶದಂತೆ ಒತ್ತುವರಿ ತೆರವಿಗೆ ಮುಂದಾಗಲಾಗಿತ್ತು. ಆದರೆ ಈ ಸಮಯದಲ್ಲಿ ಒತ್ತುವರಿ ತೆರವಿಗೆ ಅವಕಾಶ ನೀಡದೆ ವಾತಾವರಣವನ್ನು ಕಲುಷಿತಗೊಳಿಸಿದರು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವುದರೊಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಠಾಣೆ ಎದುರು ಪ್ರತಿಭಟನೆ
ಶಾಸಕರು ಹಾಗೂ ಅವರ ಹಿಂಬಾಲಕರು ತಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದೂರುದಾರ ಮಹಿಳೆ ರೂತ್ ಸಗಾಯ್ ಮೇರಿ ಹಾಗೂ ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು ವೈಟ್‌ಫೀಲ್ಡ್ ಠಾಣೆ ಎದುರು ಗುರುವಾರ ರಾತ್ರಿಯೇ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಹಾಗೂ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ, ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಅಜಾಗರೂಕ ಚಾಲನೆ, ಪೊಲೀಸರ ಜತೆ ಶಾಸಕ ಲಿಂಬಾವಳಿ ಪುತ್ರಿಯ ಕಿರಿಕ್