ಬೆಂಗಳೂರು: ಅಪಾರ್ಟ್‌ಮೆಂಟ್‌ವೊಂದರಲ್ಲಿ ಶಾರ್ಟ್ ಸಕ್ಯೂರ್ಟ್‌ನಿಂದ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿದ್ದರಿಂದ 4 ವರ್ಷದ ಮಗುವೊಂದು ಉಸಿರುಗಟ್ಟಿ (Fire Accident) ಮೃತಪಟ್ಟಿದೆ. ಈ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಆರ್.ಟಿ.ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಭಾನುವಾರ (ಏ.16) ಸಂಜೆ ಸಂಭವಿಸಿದೆ. ಅನೂಪ್ (4 ವರ್ಷ) ಮೃತ ದುರ್ದೈವಿ.
ಸುಲ್ತಾನ್ ಪಾಳ್ಯ ಬಳಿಯಿರುವ ವುಡ್ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿರುವ ಮನೆಯೊಂದರಲ್ಲಿ ಶಾರ್ಟ್ ಸಕ್ಯೂರ್ಟ್ ಆಗಿದೆ. ಕುರಾನ್ ಖಂಡಕ್, ಲಕ್ಷ್ಮಿ ದಂಪತಿಯ 4 ವರ್ಷದ ಗಂಡು ಮಗು ಅನೂಪ್ ಮೃತಪಟ್ಟಿದ್ದಾನೆ. ಕುರಾನ್ ಖಂಡಕ್, ಲಕ್ಷ್ಮಿ ದಂಪತಿ ನೇಪಾಳ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲೇ ವಾಸವಾಗಿದ್ದರು. ಇನ್ನೂ ಇದೇ ವುಡ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವಿನ ತಂದೆ ಕುರಾನ್ ಖಂಡಕ್ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಲಕ್ಷ್ಮಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದರು.
ದಂಪತಿ ವಾಸ್ತವ್ಯಕ್ಕಾಗಿ ನಾಲ್ಕನೇ ಮಹಡಿಯಲ್ಲಿರುವ ಸಣ್ಣ ಕೊಠಡಿಯಲ್ಲಿ ಮನೆ ನೀಡಲಾಗಿತ್ತು. ಗಂಡ-ಹೆಂಡತಿ ಕೆಲಸ ಮಾಡುವುದರಿಂದ ಮಗುವಿನ ಲಾಲನೆ-ಪಾಲನೆ ಕಷ್ಟವಾಗಿತ್ತು. ಹೀಗಾಗಿ ಪ್ರತಿದಿನ ಮಧ್ಯಾಹ್ನ ಮಗುವನ್ನು ಮಲಗಿಸಿ ಡೋರ್ ಲಾಕ್ ಹಾಕಿಕೊಂಡು ತಮ್ಮ ಹೊರಗಿನ ಕೆಲಸ ಮಾಡುತ್ತಿದ್ದರು.
ನಿನ್ನೆ ಭಾನುವಾರ ಸಹ ಮಗು ಮಲಗಿಸಿ ಫ್ಯಾನ್ ಹಾಕಿ ಡೋರ್ ಲಾಕ್ ಮಾಡಿಕೊಂಡು ಬಂದಿದ್ದರು. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ಹೋದಾಗ ದುರಂತ ಸಂಭವಿಸಿದೆ. ಮಗು ಮಲಗಿದ್ದಾಗ ಸಂಜೆ ವೇಳೆ ಎಲೆಕ್ಟ್ರಿಕಲ್ ಶಾರ್ಟ್ ಸಕ್ಯೂರ್ಟ್ ಕಾಣಿಸಿಕೊಂಡು ದಟ್ಟ ಹೊಗೆ ಕಾಣಿಸಿಕೊಂಡಿದೆ.
ಇತ್ತ ಎಂದಿನಂತೆ ಕೆಲಸ ಮುಗಿಸಿಕೊಂಡು ಬಂದಾಗ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಪೋಷಕರು ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಅಗ್ನಿ ನಂದಿಸಿದರೂ ಅಷ್ಟೊತ್ತಿಗಾಗಲೇ ಉಸಿರುಗಟ್ಟಿ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ.
ಯಾದಗಿರಿಯಲ್ಲಿ ಬೆಂಕಿಗೆ ತುತ್ತಾದ ಅಂಗಡಿ
ಯಾದಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಯೊಂದು ಹೊತ್ತಿ ಉರಿದಿದೆ. ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ನಿಸ್ಸಿ ಪ್ಲೈವುಡ್ ಶಾಪ್ ಧಗಧಗನೇ ಹೊತ್ತಿ ಉರಿದಿದ್ದು, ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಅಂದಾಜು 25 ಲಕ್ಷ ಮೌಲ್ಯದ ಮಷೀನ್‌ಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Tejaswi Surya: ಠೇವಣಿದಾರರ ತರಾಟೆಗೆ ತೇಜಸ್ವಿ ಸೂರ್ಯ ತಬ್ಬಿಬ್ಬು, ಸಭೆಯಿಂದ ವಾಕೌಟ್
Elephant Attack: ವಾಕಿಂಗ್ ಹೋಗುತ್ತಿದ್ದ ವ್ಯಕ್ತಿ ಮೇಲೆರಗಿ ಕೊಂದುಹಾಕಿದ ಒಂಟಿ ಸಲಗ
ಕೊಡಗು: ಕೊಡಗಿನಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ನಡೆಸಿದ ದಾಳಿಯಿಂದ (Elephant Attack) ವಾಕಿಂಗ್ ಹೋಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಪೊನ್ನಂಪೇಟೆ (Ponnampete) ತಾಲ್ಲೂಕಿನ ಬೀರುಗ ಗ್ರಾಮದ ಚಾಮುಂಡಿಕೊಲ್ಲಿ ರಸ್ತೆಯಲ್ಲಿ ಘಟನೆ ನಡೆದಿದೆ.
ಅಯ್ಯಮಾಡ ಮಾದಯ್ಯ (63) ಕಾಡಾನೆ ಕಾಲ್ತುಳಿತಕ್ಕೆ ಸಿಕ್ಕಿ ದಾರುಣ ಸಾವು ಕಂಡರವರು. ಇವರು ಮುಂಜಾನೆ ಎಂದಿನಂತೆ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದಾಗ, ಕಾಫಿ ತೋಟದ ನಡುವಿನಿಂದ ನುಗ್ಗಿಬಂದ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಗ್ರಾಮ ಹಾಗೂ ಸುತ್ತಮುತ್ತಲಲ್ಲಿ ಆನೆಗಳ ಹಿಂಡು ಸಂಚಾರ ಮಾಡುತ್ತಿದೆ. ಇದರಿಂದ ಮನೆಯಿಂದ ಹೊರಬೀಳಲೂ ಭಯವಾಗುತ್ತಿದೆ. ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ತೋಟದ ಕೆಲಸ ಮಾಡಲು ಕೂಲಿ ಕಾರ್ಮಿಕರು ಭಯಭೀತಿಯಿಂದಾಗಿ ಬರುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ಕಾಡುಪ್ರಾಣಿಗಳ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಆನೆ, ಕರಡಿ, ಚಿರತೆ ದಾಳಿ ಮುಂದುವರಿದಿದೆ. ಇತ್ತೀಚೆಗೆ ರೈತರೊಬ್ಬರು ಮನೆಯಿಂದ ಜಮೀನಿಗೆ ತೆರಳುವಾಗ ಆನೆ ಅಟ್ಟಾಡಿಸಿಕೊಂಡು ಬಂದು ರೈತನನ್ನು ಕೊಂದು ಹಾಕಿತ್ತು. ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪದ ಹೊಸಗುತ್ತಿ ಗ್ರಾಮದಲ್ಲಿ ಕಾಂತುರಾಜು ಎಂಬವರು ಮನೆಯಿಂದ ಜಮೀನಿಗೆ ತೆರಳುವಾಗ ಕಾಡಾನೆ ದಾಳಿ ನಡೆಸಿತ್ತು.
ಇದಕ್ಕೂ ಮೊದಲು ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದಲ್ಲಿ ಕಂಬೆಯಂಡ ರಾಜ ದೇವಯ್ಯ (59) ಎಂಬ ಕಾಫಿ ಪ್ಲ್ಯಾಂಟರ್, ಕಾಫಿ ತೋಟಕ್ಕೆ ಹೋಗಿದ್ದಾಗ, ಕಾಫಿ ಗಿಡಗಳ ನಡುವೆ ಅಡಗಿ ನಿಂತಿದ್ದ ಸಲ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿತ್ತು.
ಇದೀಗ ಬರ್ಬರ ಬೇಸಿಗೆ ಪರಿಣಾಮ ಕಾಡಿನಲ್ಲೂ ನೀರು ಇಲ್ಲದಂತಾಗಿದೆ. ಹೀಗಾಗಿ ಆನೆಗಳು ಹಿಂಡು ಹಾಗೂ ಸಲಗಗಳು ನೀರನ್ನು ಅರಸಿ ನಾಡಿಗೆ ಬರುತ್ತಿವೆ. ಕಾಡಿನಲ್ಲಿ ಸಹಜ ಆಹಾರವೂ ಅವುಗಳಿಗೆ ಇಲ್ಲವಾಗಿದೆ. ಇದರಿಂದ ಕಾಫಿತೋಟದ ಜನರಿಗೆ ಜೀವಭಯ ಉಂಟಾಗುತ್ತಿದೆ ಎಂದು ಕೊಡಗಿನ ಜನತೆ ದೂರಿದ್ದಾರೆ.
ಆಹಾರ ನೀರಿಲ್ಲದೆ ಆನೆಗಳು ಸಾಯುವ ಪ್ರಕರಣಗಳೂ ನಡೆದಿವೆ. ಕನಕಪುರ ತಾಲೂಕಿನ ಯಲವನತ್ತ ಅರಣ್ಯಪ್ರದೇಶ ಹಾಗೂ ಬೆಟ್ಟಹಳ್ಳಿ ಬೀಟ್‌ನಲ್ಲಿ ಕಾಡಾನೆಗಳು ಮೃತಪಟ್ಟಿವೆ. 35 ಹಾಗೂ 14 ವರ್ಷದ ಎರಡು ಕಾಡಾನೆಗಳು ಉಸಿರು ನಿಲ್ಲಿಸಿದೆ. ಬಿಸಿಲಿನ ಬೇಗೆ ತಾಳಲಾರದೆ ಕಾಡಾನೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ