ಆನೇಕಲ್: ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದ ಬಾಲಾಜಿ ಟ್ರೇಡರ್ಸ್ ಪಟಾಕಿ ಅಂಗಡಿಯಲ್ಲಿ (Fireworks shop) ನಡೆದ ಅಗ್ನಿ ದುರಂತದಲ್ಲಿ (Attibele Fire Accident) ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ. ಅಕ್ಟೋಬರ್ 7ರಂದು ಮಧ್ಯಾಹ್ನದ ಹೊತ್ತಿಗೆ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಅಂದೇ 14 ಮಂದಿ ಪ್ರಾಣ ಕಳೆದುಕೊಂಡಿದ್ದರು. ಮುಂದೆ ಹಂತ ಹಂತವಾಗಿ ಇಬ್ಬರು ಪ್ರಾಣ ಕಳೆದುಕೊಂಡು ಸಾವಿನ ಸಂಖ್ಯೆ 16ಕ್ಕೆ ಏರಿತ್ತು. ಇದೀಗ ಮಂಗಳವಾರ (ಅಕ್ಟೋಬರ್ 17) ಅಂಗಡಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ರಾಜೇಶ್ ಪ್ರಾಣ ಕಳೆದುಕೊಂಡಿದ್ದಾನೆ. ಅಲ್ಲಿಗೆ ಬಲಿಯಾದವರ ಸಂಖ್ಯೆ 17ಕ್ಕೇರಿದಂತಾಗಿದೆ. ಇನ್ನೂ ಇಬ್ಬರು ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತ್ಯು
ಅಂದು ದುರಂತದಲ್ಲಿ ಗಾಯಗೊಂಡಿದ್ದ ತಮಿಳುನಾಡು ಮೂಲದ ರಾಜೇಶ್ (19) ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರೀಗ ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ. ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದ ಮೂವರು ಗಾಯಾಳುಗಳ ಪೈಕಿ ಈಗ ಇಬ್ಬರು ಮೃತಪಟ್ಟಂತಾಗಿದೆ.
ಪಟಾಕಿ ಮಳಿಗೆ ಮಾಲೀಕ ನವೀನ್, ಗ್ರಾಹಕ ವೆಂಕಟೇಶ್ ಹಾಗೂ ಕಾರ್ಮಿಕ ರಾಜೇಶ್ ಅವರು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಪೈಕಿ ತನ್ನ ಗೆಳೆಯನ ಬರ್ತ್ಡೇಗೆ ಪಟಾಕಿ ಕೊಳ್ಳಲು ಬಂದಿದ್ದ ಬಾಡಿ ಬಿಲ್ಡರ್ ಕೂಡಾ ಆಗಿದ್ದ ಫೋಟೋ ಗ್ರಾಫರ್ ವೆಂಕಟೇಶ್ ಮತ್ತು ಈಗ ಕಾರ್ಮಿಕ ರಾಜೇಶ್ ಮೃತಪಟ್ಟಿದ್ದಾರೆ. ಮಾಲೀಕ ನವೀನ್ಗೆ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ.
ಮೃತಪಟ್ಟ 16ನೇ ವ್ಯಕ್ತಿ ಫೋಟೊಗ್ರಾಫರ್ ಬಾಡಿ ಬಿಲ್ಡರ್
ಬಾಲಾಜಿ ಟ್ರೇಡರ್ಸ್ನಲ್ಲಿ ಕೋಟ್ಯಂತರ ರೂ. ಮೌಲ್ಯದ ಪಟಾಕಿಯನ್ನು ಸಂಗ್ರಹ ಮಾಡಲಾಗಿತ್ತು. ಇನ್ನಷ್ಟು ಪಟಾಕಿಗಳು ಬಂದಿದ್ದು ಅವುಗಳನ್ನು ಗೋದಾಮಿನಲ್ಲಿ ಸ್ಟೋರ್ ಮಾಡಲಾಗುತ್ತಿತ್ತು. ಈ ವೇಳೆ ಬೆಂಕಿ ಹತ್ತಿಕೊಂಡಿತ್ತು. ಗೋದಾಮಿಗೆ ಒಂದೇ ಹೊರ ಹೋಗುವ ಬಾಗಿಲು ಇದ್ದ ಹಿನ್ನೆಲೆಯಲ್ಲಿ ಒಳಗೆ ಸೇರಿದವರಿಗೆ ಹೊರಗೆ ಬರಲಾಗದೆ ಹಲವರು ಸುಟ್ಟು ಕರಕಲಾಗಿದ್ದರು. ಮೃತಪಟ್ಟವರಲ್ಲಿ ಕೆಲವರು ಕಾರ್ಮಿಕರಾಗಿದ್ದರೆ ಕೆಲವರು ಪಟಾಕಿ ಕೊಳ್ಳಲು ಬಂದವರೂ ಇದ್ದಾರೆ.
ಗುರುವಾರ ಮೃತಪಟ್ಟವರು ವೆಂಕಟೇಶ್. ವೆಂಕಟೇಶ್ ಅವರು ಬೊಮ್ಮನಹಳ್ಳಿಯ ಗಾರೇಬಾವಿಪಾಳ್ಯದ ನಿವಾಸಿಯಾಗಿದ್ದಾರೆ. ಅವರು ತಮ್ಮ ಸ್ನೇಹಿತ ಮುರಳಿ ಬರ್ತ್ಡೇಗಾಗಿ ಪಟಾಕಿ ಖರೀದಿಸಲು ಅಲ್ಲಿಗೆ ಹೋಗಿದ್ದರು. ಅವರು ಹೋಗಿದ್ದಾಗಲೇ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಸ್ನೇಹಿತ ಓಡಿ ಹೋಗಿದ್ದರೆ ವೆಂಕಟೇಶ್ ಬೆಂಕಿಯ ಬಲೆಗೆ ಸಿಕ್ಕಿ ಸುಮಾರು ಶೇ. 50ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದರು.
ಬೆನ್ನು, ತಲೆ, ಕೈ ಕಾಲುಗಳಿಗೆ ಬೆಂಕಿ ತಗುಲಿದ್ದ ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆವರು ಬುಧವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವೃತ್ತಿಯಲ್ಲಿ ಫೋಟೊಗ್ರಾಫರ್ ಆಗಿದ್ದ ವೆಂಕಟೇಶ್ ಅವರು ಬಾಡಿ ಬಿಲ್ಡರ್ ಕೂಡಾ ಆಗಿದ್ದರು. ಬಾಡಿ ಬಿಲ್ಡರ್ ಆಗಿ ದೊಡ್ಡ ಹೆಸರು ಮಾಡಬೇಕೆಂದು ಕನಸು ಕಂಡಿದ್ದ. ಆದರೆ, ಪಟಾಕಿ ಅಂಗಡಿಯ ಅಗ್ನಿ ಅವಘಡದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಒಳ್ಳೆ ಚಿಕಿತ್ಸೆ ನೀಡಿದ್ದರೆ ವೆಂಕಟೇಶ ಬದುಕುತ್ತಿದ್ದ ಎಂದ ಸ್ನೇಹಿತ ಮುರಳಿ
ಪಟಾಕಿ ಅಂಗಡಿಗೆ ಬೆಂಕಿ ಹೊರಗಿನಿಂದ ಬಂದಿದ್ದಲ್ಲ, ಗೋದಾಮಿನ ಒಳಗಿನಿಂದಲೇ ಬೆಂಕಿ ಹೊತ್ತಿಕೊಂಡು ಹೊರಗೆ ಬಂದಿತ್ತು. ನಾನು ಮತ್ತು ವೆಂಕಟೇಶ್ ಪಟಾಕಿ ಖರೀದಿ ಮಾಡಲು ಹೋಗಿದ್ದೆವು. ಒಮ್ಮಿಂದೊಮ್ಮೆಗೇ ಬೆಂಕಿ ಬಂದಾಗ ನಾವು ಓಡಿಹೋದೆವು ಎಂದು ದುರಂತದ ದಿನ ವೆಂಕಟೇಶ್ ಜತೆಗಿದ್ದ ಸ್ನೇಹಿತ ಮುರಳಿ ಹೇಳಿದ್ದಾರೆ.
ನಾವು ಬೆಂಕಿ ಕಂಡ ಕೂಡಲೇ ಹೊರಗೆ ಓಡಿಬಂದೆವು. ನಾನು ಎಡಗಡೆ ತಿರುಗಿಕೊಂಡೆ. ವೆಂಕಟೇಶ್ ಬಲಗಡೆ ಓಡಿದ. ನಾನು ಬೆಂಕಿಯಿಂದ ಬಚಾವ್ ಆದೆ. ಆದರೆ ವೆಂಕಟೇಶ್ ಗಾಯಗೊಂಡ. ಅವನ ಬೆನ್ನಿನ ಭಾಗ ಹೆಚ್ಚಾಗಿ ಸುಟ್ಟಿತ್ತು. ಕೂಡಲೇ ಅವನನ್ನ ಆಸ್ಪತ್ರೆಗೆ ದಾಖಲು ಮಾಡಿದೆ. ದಾಯಿಯುದ್ದಕ್ಕೂ ಮಾತನಾಡುತ್ತಲೇ ಇದ್ದ. ನಾನು ಬದುಕಲ್ಲ ಎಂದು ಕೂಗಿಕೊಳ್ಳುತ್ತಿದ್ದ. ಒಂದು ವೇಳೆ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದರೆ ವೆಂಕಟೇಶ್ ಬದುಕುತ್ತಿದ್ದ. ಆದರೆ, ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು ಮುರಳಿ.
ಐವರ ಮೇಲೆ ಕೇಸು ದಾಖಲು
ಅತ್ತಿಬೆಲೆ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 285, 286, 337, 338, 427, 304 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಕಾರಣರಾದ ಆರೋಪಿ ಲೈಸನ್ಸ್ ಹೊಂದಿದ್ದ ರಾಮಸ್ವಾಮಿ ರೆಡ್ಡಿ, ಆತನ ಪುತ್ರ ನವೀನ್ ರೆಡ್ಡಿ ಹಾಗೂ ಜಾಗದ ಮಾಲೀಕರಾದ ಜಯಮ್ಮ ಹಾಗೂ ಪುತ್ರ ಅನಿಲ್ ರೆಡ್ಡಿ, ಅಂಗಡಿ ಮ್ಯಾನೇಜರ್ ಲೋಕೇಶ್ ವಿರುದ್ಧ ಕೇಸ್ ದಾಖಲಾಗಿದೆ.
ಅತ್ತಿಬೆಲೆ ದುರಂತದಲ್ಲಿ ಪ್ರಾಣ ಕಳೆದುಕೊಂಡವರು
1.ಗಿರಿ ಬಿನ್ ವೇಡಿಯಪ್ಪನ್
2. ಚೀನ್ ಬಿನ್ ಲೇಟ್ ವೇಡಿಯಪ್ಪನ್
3. ಜಯರಾಘವನ್
4. ವಿಳಂಬರತಿ ಬಿನ್ ಸೆಂದಿಲ್
5.ಆಕಾಶ ಬಿನ್ ರಾಜಾ
6. ವೇಡಿಯಪ್ಪನ್
7. ಆದಿಕೇಶವ ಬಿನ್ ಪೆರಿಯಾಸ್ವಾಮಿ
(ಇವೆರಲ್ಲರೂ ಧರ್ಮಪುರಿ ಜಿಲ್ಲೆಯ ಅಮ್ಮಾಪೇಟ್ ನಿವಾಸಿಗಳು)
8.ಪ್ರಕಾಶ್ ಬಿನ್ ರಾಮು:ತಿರುವಣ್ಣಾಮಲೈ ಮೂಲದವರು
9. ವಸಂತರಾಜು ಬಿನ್ ಗೋವಿಂದ ರಾಜು
10.ಅಬ್ಬಾಸ್ ಬಿಸ್ ಶಂಕರ್
11. ಪ್ರಭಾಕರನ್ ಬಿನ್ ಗೋಪಿನಾಥ್
(ಮೇಲಿನ ಮೂವರು ಕಲ್ಕುರ್ಚಿ ಜಿಲ್ಲೆಯ ವೆಡುತ್ತ ವೈನತ್ತಂ ಮೂಲದವರು)
12. ನಿತೀಶ್ ಬಿನ್ ಮೇಘನಾಥ್
13. ಸಂತೋಷ್ ಬಿನ್ ಕುಮಾರ್
(ಇಬ್ಬರು ತಿರುಪತ್ತೂರು ಜಿಲ್ಲೆಯ ವೆಲ್ಲಕುಟೈ ಗ್ರಾಮದವರು)
14.ಮತ್ತೊಬ್ಬನ ಹೆಸರು ವಿಳಾಸ ಪತ್ತೆ ಆಗಿಲ್ಲ.
15. ದಿನೇಶ್ ಕಾರ್ಮಿಕ
1.6. ವೆಂಕಟೇಶ್, ಬೊಮ್ಮನಹಳ್ಳಿ ನಿವಾಸಿ
ಇದನ್ನೂ ಓದಿ: Fire Accident : ಅತ್ತಿಬೆಲೆ ಬೆನ್ನಲ್ಲೇ ತಮಿಳುನಾಡಲ್ಲೂ ಪಟಾಕಿ ಸ್ಫೋಟ; 10 ಮಂದಿ ಸಾವು, ಹಲವರು ಗಂಭೀರ