ಬೆಂಗಳೂರು: ಸೆಪ್ಟೆಂಬರ್ 18ರಂದು ನಾಡಿನೆಲ್ಲೆಡೆ ಗಣೇಶ ಹಬ್ಬದ (Ganesha Chaturthi) ಸಂಭ್ರಮ. ಗಣೇಶೋತ್ಸವವನ್ನು (Ganesha Festival) ರಾಜ್ಯದಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದ್ದು, ಕೆಲವು ಕಡೆ ಒಂದು ದಿನ, ಕೆಲವು ಕಡೆ ಮೂರು, ಕೆಲವು ಕಡೆ ಏಳು ದಿನಗಳ ಕಾಲ ನಡೆಯುತ್ತದೆ. ಈ ಹಬ್ಬವನ್ನು ವ್ಯವಸ್ಥಿತವಾಗಿ ಆಚರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕೆಲವೊಂದು ನಿಯಮಗಳನ್ನು (Rules for Ganeshotsava) ಜಾರಿ ಮಾಡಲಾಗಿದೆ. ಇದರಲ್ಲಿ ಹೊಸದಾಗಿ ಘೋಷಣೆಯಾಗಿರುವ ನಿಯಮವೇನೆಂದರೆ, ಗಣೇಶ ಹಬ್ಬದ ವೇಳೆ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವಂತಿಲ್ಲ (Flex and Banner Banned during Ganeshothsava) ಎನ್ನುವುದು.
ಬೆಂಗಳೂರಿನಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆದರೆ ವ್ಯವಸ್ಥಿತವಾಗಿ ಆಚರಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ಎಸ್.ಪಿ. ದಯಾನಂದ್ ನೇತೃತ್ವದಲ್ಲಿ ಗುರುವಾರ ಟೌನ್ ಹಾಲ್‌ನಲ್ಲಿ ಸಭೆ ನಡೆಯಿತು. ಈ ವೇಳೆ ಹಲವಾರು ವಿಚಾರಗಳು, ನಿಯಮಗಳ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಗರದಲ್ಲಿ ಯಾರೂ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಗಣೇಶೋತ್ಸವ ನಡೆಯುವ ಸಂದರ್ಭದಲ್ಲಿ ಆಯಾ ಪ್ರದೇಶದಲ್ಲಿ 10-20 ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವ ಪರಿಪಾಠವಿದೆ. ಆದರೆ, ಇನ್ನು ಮುಂದೆ ಹಾಗೆ ಮಾಡುವಂತಿಲ್ಲ. ಫ್ಲೆಕ್ಸ್ ಬ್ಯಾನರ್ ಹಾಕುವಂತಿಲ್ಲ. ಗಣೇಶ ಕೂರಿಸುವ ಪೆಂಡಾಲ್‌ನಲ್ಲಿ ಕಾರ್ಯಕ್ರಮದ ಮಾಹಿತಿಯನ್ನು ಹಾಕಬಹುದು ಎಂದು ತುಷಾರ್ ಗುರುನಾಥ್ ಹೇಳಿದರು.
ಇದನ್ನೂ ಓದಿ: Ganesha Chaturthi : ಚೌತಿಗೆ ಗಣೇಶನ ಕೂರಿಸ್ತೀರಾ? ಹಾಗಿದ್ದರೆ ನೀವು ಈ 9 ನಿಯಮ ಕಡ್ಡಾಯವಾಗಿ ಪಾಲಿಸಲೇಬೇಕು
ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮಣಗುಪ್ತಾ, ಸತೀಶ್ ಕುಮಾರ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಉಪಸ್ಥಿತರಿದ್ದರು.
ಮಣ್ಣಿನ ಗಣೇಶ ಕೂರಿಸಿ, ಪಿಒಪಿ ಬೇಡ: ಪ್ರಮುಖ ಸೂಚನೆಗಳು
- ಯಾರೆಲ್ಲ ಗಣೇಶ ಕೂರಿಸುತ್ತಾರೋ ಅವರೆಲ್ಲರೂ ಮಣ್ಣಿನ ಗಣೇಶನನ್ನೇ ಕೂರಿಸಬೇಕು, ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಪ್ ಪ್ಯಾರಿಸ್‌ನಿಂದ ಮಾಡಿದ ಗಣೇಶನ ಮೂರ್ತಿ ಬಳಸಬಾರದು. ಬೆಂಗಳೂರಿನಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೂ ನಿರ್ಬಂಧವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
- ಒಂದು ಪ್ರದೇಶದಲ್ಲಿ ದೊಡ್ಡ ಗಣೇಶನ ಮೆರವಣಿಗೆ ಯಾವ ಮಾರ್ಗವಾಗಿ ಸಾಗುತ್ತದೋ ಅದೇ ರೂಟ್‌ನಲ್ಲಿ ಉಳಿದವುಗಳನ್ನು ಸಾಗಿಸುವುದು ಉತ್ತಮ.
- ವಾರ್ಡ್‌ನಲ್ಲಿ ಎರಡು ಕಡೆ ವಾಟರ್ ಟ್ಯಾಂಕ್ ಇಡುತ್ತೇವೆ, ಅಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಬಹುದು.
- ಗಣೇಶ ಮೂರ್ತಿ ಇಡುವವರು ಅನುಮತಿ ಪಡೆಯಬೇಕು. ಬೆಸ್ಕಾಂ, ಪೊಲೀಸ್, BBMP ಅಧಿಕಾರಿಗಳು ಒಂದೇ ಕಡೆ ಇದ್ದು ಅನುಮತಿ ನೀಡುವ ವ್ಯವಸ್ಥೆ ಮಾಡುತ್ತೇವೆ.
- ಬಟ್ಟೆಯಲ್ಲಿ ತಯಾರಿಸುವ ಬ್ಯಾನರ್ ಬಳಸಬಹುದು. ಬಟ್ಟೆ ಮೇಲೆ ಪೈಂಟ್‌ನಲ್ಲಿ ಬರೆಯಬಹುದು. ಇದು ಪೆಂಡಾಲ್‌ನಲ್ಲಿ ಹಾಕಬಹುದಾದ ಬ್ಯಾನರ್. ಫ್ಲೆಕ್ಸ್‌ಗಳನ್ನು ಹಾಕುವಂತಿಲ್ಲ.
- ಹಲಸೂರು ಕೆರೆಯಲ್ಲಿ ಗಣೇಶ ವಿಸರ್ಜನೆ ಕೌಂಟರ್ ನಲ್ಲಿ ಹೂಳು ತುಂಬಿದೆ. ಅದನ್ನು ಸರಿ ಮಾಡುತ್ತೇವೆ.
- ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸುವಾಗ ಅದರ ಮೇಲಿರುವ ಎಲ್ಲ ಹೂಗಳನ್ನು ತೆಗೆಯಬೇಕು. ಹೂಗಳ ಸಹಿತ ಮೂರ್ತಿ ವಿಸರ್ಜನೆ ಮಾಡುವುದರಿಂದ ಹೂಳು ಹೆಚ್ಚಾಗಿದೆ.
- ಮೆರವಣಿಗೆಯಲ್ಲಿ ತಂದ ಮೂರ್ತಿಗಳನ್ನು ಹೇಗೆ ಬೇಕೆಂದ ಹಾಗೆ ಎಸೆಯಬೇಡಿ. ಅದಕ್ಕೆ ಧಾರ್ಮಿಕ ಭಾವನೆ ಇದೆ. ನಿಧಾನವಾಗಿ ನೀರಿಗೆ ಬಿಡಿ