ಮೈಸೂರು: ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ದಂಧೆಯನ್ನು ಪೊಲೀಸರು ಬಯಲಿಗೆಳೆದ ಬೆನ್ನಿಗೇ ಇನ್ನೊಂದು ಆಸ್ಪತ್ರೆಯಲ್ಲೂ ಮಕ್ಕಳನ್ನು ಹುಟ್ಟುವ ಮೊದಲೇ ಸಾಯಿಸುವ ಕರಾಳ ಕೃತ್ಯ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಮೈಸೂರಿನ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ (Chamundeshwari Hospital) ಭ್ರೂಣ ಹತ್ಯೆ (Foeticide Case) ನಡೆಯುತ್ತಿದ್ದು, ಇದಕ್ಕೆ ಸಂಬಂದಿಸಿ ಅಲ್ಲಿನ ಹೆಡ್ ನರ್ಸ್ ಉಷಾರಾಣಿ (Nurse Usharani arrested) ಎಂಬಾಕೆಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಬೈಯಪ್ಪನ ಹಳ್ಳಿ ಪೊಲೀಸರು ಮಂಡ್ಯದಲ್ಲಿ ನಡೆಯುತ್ತಿರುವ ಬೃಹತ್ ಜಾಲವನ್ನು ಪತ್ತೆ ಹಚ್ಚಿ 10ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ ಬೆನ್ನಿಗೇ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ದಂಧೆಗಳು ಬಯಲಾಗುತ್ತಿವೆ.
ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ಅಬಾರ್ಷನ್ ನಡೆಯುತ್ತಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅಲ್ಲಿನ ವೈದ್ಯ ಚಂದನ ಬಳ್ಳಾಲ್ ಮತ್ತು ನರ್ಸ್ ಮಂಜುಳಾಳನ್ನು ಬಂಧಿಸಲಾಗಿತ್ತು. ಇದೀಗ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ ಕೂಡ ಭ್ರೂಣ ಹತ್ಯೆ ದಂಧೆ ನಡೆಯುತ್ತಿರುವುದು ಪತ್ತೆಯಾಗಿದ್ದು, ಹೆಡ್ ನರ್ಸ್ ಉಷಾರಾಣಿ ಸೆರೆ ಸಿಕ್ಕಿದ್ದಾಳೆ
ಬ್ರೋಕರ್ ಪುಟ್ಟರಾಜು ಅಣತಿಯಂತೆ ಇಲ್ಲಿ ಮಹಿಳೆಯರಿಗೆ ಅಬಾರ್ಷನ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪುಟ್ಟರಾಜು ಮಾತಾ ಮತ್ತು ಚಾಮುಂಡೇಶ್ವರಿ ಆಸ್ಪತ್ರೆಗೆ ಗರ್ಭಿಣಿಯರನ್ನು ಕರೆದುಕೊಂಡು ಹೋಗುತ್ತಿದ್ದ. ಚಾಮುಂಡೇಶ್ವರಿ ಆಸ್ಪತ್ರೆ ನರ್ಸ್ ಉಷಾರಾಣಿ ಗರ್ಭಿಣಿಯರಿಗೆ ಅಬಾರ್ಷನ್ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಚಾಮುಂಡೇಶ್ವರಿ ಆಸ್ಪತ್ರೆಯ ಮಾಲೀಕ ಜಗದೀಶ್‌ಗೆ ನೋಟಿಸ್ ನೀಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಚಾಮುಂಡೇಶ್ವರಿ ಆಸ್ಪತ್ರೆಯ ದಾಖಲಾತಿಗಳನ್ನು ಪೊಲೀಸರಿಗೆ ನೀಡುವಂತೆ ನೋಟೀಸ್ ನಲ್ಲಿ ತಿಳಿಸಲಾಗಿದೆ.
ಭ್ರೂಣ ಹತ್ಯೆ ಮಾಡಿ ಟಾಯ್ಲೆಟ್ ನಲ್ಲಿ ಫ್ಲಸ್ ಮಾಡುತ್ತಿದ್ದ ಮಂಜುಳಾ
ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ಅಬಾರ್ಷನ್ ಮಾಡಿಸುವಲ್ಲಿ ಚಂದನ್ ಬಲ್ಲಾಳ್ ಗೆ ಸಹಕಾರ ನೀಡುತ್ತಿದ್ದ ನರ್ಸ್ ಮಂಜುಳಾ, ಚಂದನ್ ಬಳ್ಳಾಲ್ ಬಂಧನದ ಬೆನ್ನಿಗೇ ತಲೆಮರೆಸಿಕೊಂಡಿದ್ದಳು. ಆಕೆ ಮತ್ತೊಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.
ಭ್ರೂಣ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಘಾತಕಾರಿ ಅಂಶಗಳು ಹೊರಬೀಳುತ್ತಿವೆ. ಚಂದನ್ ಬಲ್ಲಾಳ್ ಮಾಲೀಕತ್ವದ ಮಾತಾ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಂಜುಳಾ, ತಿಂಗಳಿಗೆ 70ಕ್ಕೂ ಹೆಚ್ಚು ಅಬಾರ್ಷನ್ ಮಾಡಿಸುತ್ತಿದ್ದಳು. ಅಬಾರ್ಷನ್ ಮಾಡಿಸಿದ ಭ್ರೂಣಗಳನ್ನು ನಾನಾ ರೀತಿಯಲ್ಲಿ ಎಸೆಯುತ್ತಿದ್ದಳು.
ಭ್ರೂಣಗಳನ್ನು ಪೇಪರ್‌ನಲ್ಲಿ ಸುತ್ತಿ ಲ್ಯಾಬ್ ಟೆಕ್ನಿಶಿಯನ್ ನಿಸಾರ್‌ಗೆ ಕೊಡುತ್ತಿದ್ದಳು. ಆತ ಮಗುವನ್ನು ಕಾವೇರಿ ನದಿಯಲ್ಲಿ ಎಸೆದು ಬರುತ್ತಿದ್ದ. 12 ವಾರ ಕಳೆದ ಮಕ್ಕಳನ್ನು ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದವು. ಒಮ್ಮೊಮ್ಮೆ ಭ್ರೂಣಗಳನ್ನು ಟಾಯ್ಲೆಟ್‌ನಲ್ಲಿ ಎಸೆದು ಫ್ಲಶ್ ಮಾಡುತ್ತಿದ್ದಾಗಿ ವಿಚಾರಣೆಯಲ್ಲಿ ಹೇಳಿದ್ದಾಳೆ.