Site icon Vistara News

HD Devegowda : ಶ್ರೀರಾಮನಿಗೆ ಚಿನ್ನದ ಕತ್ತಿ ಸಮರ್ಪಿಸಿದ ಮಾಜಿ ಪ್ರಧಾನಿ ದೇವೇಗೌಡರು

Sri Rama Sword Devegowda

ಬೆಂಗಳೂರು: ನಾನು ಶ್ರೀರಾಮನಿಗೆ (Shri Rama) ಚಿನ್ನದ ಕತ್ತಿಯನ್ನು (Golden sword) ಸಮರ್ಪಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು (HD Devegowda) ಹೇಳಿದರು. ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ಶ್ರೀ ರಾಮ ಮಂದಿರ ಲೋಕಾರ್ಪಣೆಗೆ ಆಹ್ವಾನ ಪಡೆದಿರುವ ಎಚ್‌.ಡಿ. ದೇವೇಗೌಡರು ತಾವು ಶ್ರೀರಾಮನಿಗೆ ಚಿನ್ನದ ಕತ್ತಿ ನೀಡಿದ್ದನ್ನು ನೆನಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೆ ಪ್ರಧಾನಿ ಆಗಿದ್ದಾಗ ಒಮನ್ ದೇಶಕ್ಕೆ ಹೋಗಿದ್ದೆ. ಅಲ್ಲಿ ನನಗೆ ಚಿನ್ನದ ಕತ್ತಿಯನ್ನು ಉಡುಗೊರೆಯಾಗಿ ನೀಡಿದ್ದರು. ನಾನು ಅದನ್ನು ತೆರಿಗೆ ಕಟ್ಟಿ ಬೆಂಗಳೂರಿಗೆ ತರಿಸಿಕೊಂಡಿದ್ದೆ. ಬೆಲೆಬಾಳುವ ಈ ಕತ್ತಿಯನ್ನು ನಾನೇ ಇಟ್ಟುಕೊಳ್ಳಬಹುದಾಗಿತ್ತು. ಆದರೆ, ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿರುವ ಶ್ರೀರಾಮ ದೇವರಿಗೆ ಅರ್ಪಿಸಿದೆ. ದೈವಸೇವೆ ನಮ್ಮ ನಂಬಿಕೆ. ಅದನ್ನೇ ಮಾಡಿದೆ. ಇದು ನನ್ನ ರಾಮಸೇವೆ ಎಂದು ದೇವೇಗೌಡ ಅವರು ಹೇಳಿದರು.

ಡಿಸೆಂಬರ್‌ 17ರಂದು ದೇವೇಗೌಡರಿಗೆ ಆಹ್ವಾನ

ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಎಚ್.ಡಿ. ದೇವೇಗೌಡರು, ರಾಮ ಮಂದಿರ ಕಟ್ಟಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಹಿರಿಯ ಆರ್‌ಎಸ್‌ಎಸ್ ನಾಯಕ ರಾಮ್ ಲಾಲ್ ಮತ್ತು ಹಿರಿಯ ವಿಎಚ್‌ಪಿ ನಾಯಕ  ಅಲೋಕ್ ಕುಮಾರ್ ಅವರಿಂದು ನನ್ನನ್ನು ನವದೆಹಲಿಯ ನನ್ನ ನಿವಾಸದಲ್ಲಿ ಭೇಟಿಯಾದರು ಎಂದು ತಿಳಿಸಿದ್ದರು.

ಇದನ್ನೂ ಓದಿ: CM Siddaramaiah : ಕಾಂಗ್ರೆಸ್‌ ಅಂತ್ಯ; ಆಶೀರ್ವಾದ ಮಾಡೋ ವಯಸ್ಸಲ್ಲಿ ಶಾಪ ಕೊಡಬಹುದೇ ಗೌಡ್ರೇ ಎಂದ ಸಿದ್ದರಾಮಯ್ಯ

ಆಗಸ್ಟ್ 5, 2020 ರಂದು, ಪ್ರಧಾನಿ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ರಾಮ ಮಂದಿರದ ಸಮೀಪವಿರುವ 70 ಎಕರೆ ಪ್ರದೇಶದಲ್ಲಿ ವಾಲ್ಮೀಕಿ, ಕೇವತ್, ಶಬರಿ, ಜಟಾಯು, ಸೀತಾ, ಗಣೇಶ ಮತ್ತು ಶೇಷಾವತಾರ (ಲಕ್ಷ್ಮಣ) ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ. ಜನವರಿ 22ರಂದು ಶ್ರೀರಾಮ ದೇವಾಲಯದ ಪ್ರಾಣಪ್ರತಿಷ್ಠೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

Exit mobile version