ಬೆಂಗಳೂರು: ಕೆಂಗೇರಿ ಸಮೀಪದ ಹೆಮ್ಮಿಗೆಪುರ ಬಳಿ ನಡೆದಿದ್ದ ಹೇಮಂತ್ ಕೊಲೆ ಪ್ರಕರಣದಲ್ಲಿ ಐದು ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಕುಳ್ಳ ರಿಜ್ವಾನ್ ಈಗಾಗಲೇ ಕೆ.ಜಿ. ನಗರ ಪೊಲೀಸರ ವಶದಲ್ಲಿದ್ದು, ಇದೀಗ ಎರಡನೇ ಆರೋಪಿ ರಿಜ್ವಾನ್ ಸಹಚರನಾದ ಹರೀಶ್ ಅಲಿಯಾಸ್ ಹ್ಯಾಂಟ್ರೋ ಹರಿ ಹಾಗೂ ನಾಲ್ವರು ಬಾಲಾಪರಾಧಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜುಲೈ 16ರಂದು ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬರುತ್ತಿದ್ದಾಗ ಕೆಂಗೇರಿ ಕೋನಸಂದ್ರ ಸಮೀಪ ಹೇಮಂತ್‌ನನ್ನು ಆರೋಪಿಗಳು ಕೊಲೆ ಮಾಡಿದ್ದರು. ಕುಳ್ಳ ರಿಜ್ವಾನ್ ಸಹಚರರು ನಮ್ಮ ಬಾಸ್ ಯಾರೋ ಗೊತ್ತಾ ಎಂದು ಕೇಳಿದಾಗ ಹೇಮಂತ್, ಯಾವ ರೌಡಿಗಳು ಇಲ್ಲ, ಎಲ್ಲ ಪುಡಿರೌಡಿಗಳೇ ಎಂದಿದ್ದ. ಹೀಗಾಗಿ ಕುಳ್ಳ ರಿಜ್ವಾನ್ ಶಿಷ್ಯರು ಹೇಮಂತ್‌ಗೆ ಡ್ರಾಪ್ ನಡುವ ನೆಪದಲ್ಲಿ ಕರೆದೊಯ್ದು ಕೋನಸಂದ್ರ ನೈಸ್ ರೋಡ್ ಅಂಡರ್ ಪಾಸ್ ಬಳಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮುಖ ಗುರುತು ಸಿಗದಂತೆ ಮಚ್ಚಿನಿಂದ ಕೊಚ್ಚಿ ಕೊಂದಿದ್ದರು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಕೆಂಗೇರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | Murder Case | ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ 8 ಆರೋಪಿಗಳು ಪೊಲೀಸರಿಗೆ ಶರಣು
ಒಟ್ಟು ಆರು ಆರೊಪಿಗಳ ಬಂಧನ : ಡಿಸಿಪಿ ಲಕ್ಷ್ಮಣ್ ನಿಂಬರಗಿ
ಹೇಮಂತ್ ಕುಮಾರ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಬಾಲಾಪರಾಧಿಗಳು ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಕೆಂಪೇಗೌಡನಗರ ಪೊಲೀಸರಿಂದ ಬಂಧಿತನಾಗಿದ್ದ ಕುಖ್ಯಾತ ರೌಡಿ ಕುಳ್ಳ ರಿಜ್ವಾನ್, ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ನಡೆಸುವಾಗ ರಿಜ್ವಾನ್ ಸಹಚರರು ಹೇಮಂತ್ ಕೊಲೆ ಮಾಡುವ ವಿಡಿಯೊ ಪತ್ತೆಯಾಗಿತ್ತು. ಇದೇ ಆಧಾರದ ಮೇರೆಗೆ ವಿಶೇಷ ತಂಡ ರಚಿಸಿ ಐವರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಹೇಮಂತ್ ಹಾಗೂ ಆರೋಪಿಗಳಿಗೂ ಈ ಹಿಂದೆ ಗಲಾಟೆ ನಡೆದಿತ್ತು. ಜುಲೈ 17 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ರೌಡಿ ವಿಚಾರವಾಗಿ ಚರ್ಚೆಗೆ ಬಂದಿತ್ತು. ಬಳಿಕ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುವಾಗ ಡ್ರಾಪ್ ಕೊಡುವ ನೆಪದಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Murder Case | ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದವರು ನಾಲ್ಕು ತಿಂಗಳ ಬಳಿಕ ಸೆರೆ