ಬೆಂಗಳೂರು: ಬುಕ್ ಮಾಡಿ ಪ್ರಯಾಣಿಸಿದ ಕ್ಯಾಬ್‌ನಲ್ಲಿ ಪರ್ಸನಲ್ ವಿಚಾರ ಮಾತನಾಡಿ ಮಹಿಳೆಯೊಬ್ಬರು ಲಕ್ಷಲಕ್ಷ ಹಣ ಕಳೆದುಕೊಂಡಿದ್ದಾರೆ. ಕ್ಯಾಬ್‌ನಲ್ಲೋ ಇನ್ನೆಲ್ಲೋ ಅಪರಿಚಿತರು ಇರುವಾಗ ಪರ್ಸನಲ್ ವಿಚಾರ ಮಾತನಾಡುವ ಮುನ್ನ ಎಚ್ಚರವಿರಬೇಕು ಎಂಬುದನ್ನು ಈ ವಂಚನೆ ಪ್ರಕರಣ (Fraud Case) ಸಾಬೀತುಪಡಿಸಿದೆ.
ಖತರ್ನಾಕ್ ಕ್ಯಾಬ್ ಚಾಲಕ (Cab driver) ಸಿನಿಮೀಯ ಶೈಲಿಯಲ್ಲಿ ಮಹಿಳೆಯನ್ನು ವಂಚಿಸಿದ್ದಾನೆ. 2022ರ ನವೆಂಬರ್‌ನಲ್ಲಿ ಮಹಿಳೆ ಇಂದಿರಾನಗರದಿಂದ ಬಾಣಸವಾಡಿವರೆಗೆ ಕ್ಯಾಬ್ ಬುಕ್ ಮಾಡಿ ಪ್ರಯಾಣ ಮಾಡಿದ್ದರು. ಆ ವೇಳೆ ಚಾಲಕ ಕಿರಣ್ ಕುಮಾರ್ ಮಹಿಳೆಯನ್ನು ಪರಿಚಯಿಸಿಕೊಂಡಿದ್ದ. ಇದೇ ವೇಳೆ ಕ್ಲಾಸ್‌ಮೇಟ್ ಬಗ್ಗೆ ಮಹಿಳೆ ಮಾತನಾಡಿದ್ದರು.
ಕೆಲ ದಿನಗಳ ನಂತರ ʼನಾನು ನಿಮ್ಮ ಬಾಲ್ಯ ಸ್ನೇಹಿತʼ ಎಂದು ಮಹಿಳೆಗೆ ಕ್ಯಾಬ್ ಚಾಲಕ ಮೆಸೇಜ್ ಹಾಕಿದ್ದ. ಹಳೇ ಸ್ನೇಹಿತ ಎಂದು ಫೋನ್‌ನಲ್ಲಿ ಕಂಟ್ಯಾಕ್ಟ್ ಬೆಳೆಸಿದ ಈತ, ಬಳಿಕ ನಾನು ಆರ್ಥಿಕ ತೊಂದರೆಯಲ್ಲಿದ್ದೇನೆಂದು ಸಹಾಯ ಕೇಳಿದ್ದ. ಬಾಲ್ಯ ಸ್ನೇಹಿತ ಎಂದು ಕನಿಕರ ತೋರಿಸಿ ಮಹಿಳೆ ಹಣ ಕಳಿಸಿದ್ದರು. ಹೀಗೆ ಸುಮಾರು 22 ಲಕ್ಷ ರೂ. ಹಣ ಕಳಿಸಿದ್ದರು.
ಮಹಿಳೆ ಬಳಿ ಹಣ ಪಡೆದು ಚಾಲಕ ಕಿರಣ್ ಮೋಜು ಮಸ್ತಿ ಮಾಡಿದ್ದ. ಹಣ ಕೊಟ್ಟ ಬಳಿಕ ಚಾಲಕನ ಅಸಲಿಯತ್ತು ಬೆಳಕಿಗೆ ಬಂದಿದೆ. ಇಷ್ಟು ದಿನ ಫೋನ್‌ನಲ್ಲಿ ಮಾತನಾಡಿದ್ದು ಬಾಲ್ಯ ಸ್ನೇಹಿತ ಅಲ್ಲ ಅನ್ನುವುದು ಪತ್ತೆಯಾಗಿದೆ. ಮಹಿಳೆಗೆ ವಿಚಾರ ತಿಳಿಯುತ್ತಿದ್ದಂತೆ ಕ್ಯಾಬ್ ಚಾಲಕ ಬ್ಲ್ಯಾಕ್‌ಮೇಲ್ (blackmail) ಮಾಡತೊಡಗಿದ್ದ. ನಿನ್ನ ಮತ್ತು ನಿನ್ನ ಸ್ನೇಹಿತನ ವಿಚಾರ ಹೊರಬಿಡ್ತೀನಿ, ನಿನ್ನ ಗಂಡನಿಗೆ ವಿಚಾರ ತಿಳಿಸಿ ಸಂಸಾರ ಹಾಳು ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದ. ಜತೆಗೆ, ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟಿದ್ದ.
ಹೀಗೆ ಮಹಿಳೆಯನ್ನು ಬೆದರಿಸಿ ಸುಮಾರು 750 ಗ್ರಾಂ ಚಿನ್ನಾಭರಣವನ್ನೂ ಸುಲಿದಿದ್ದಾನೆ ಈ ಖತರ್‌ನಾಕ್ ಆಸಾಮಿ. ಬಳಿಕ ಈ ಬಗ್ಗೆ ರಾಮಮೂರ್ತಿನಗರ ಠಾಣೆಯಲ್ಲಿ ಉಬರ್ ಕ್ಯಾಬ್ ಚಾಲಕ ಕಿರಣ್ ಕುಮಾರ್ ವಿರುದ್ಧ ಮಹಿಳೆ ದೂರು ಮಹಿಳೆ ದೂರು ದಾಖಲಿಸಿದ್ದರು. ಹೆಸರಘಟ್ಟ ಮೂಲದ ಕ್ಯಾಬ್ ಚಾಲಕನನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಬಳಿ ಪಡೆದಿದ್ದ ಚಿನ್ನಾಭರಣಗಳನ್ನು ಈತ ಅಡ ಇಟ್ಟು ಹಣ ಪಡೆದಿದ್ದಾನೆ. ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Fraud Case: ವಿದ್ಯಾರ್ಥಿಗಳ 25 ಲಕ್ಷ ರೂ. ಕದ್ದು ಲೇಡಿ ಪ್ರೊಫೆಸರ್ ಎಸ್ಕೇಪ್