ಬೆಂಗಳೂರು: ಈತ ಬಹಳ ಚಾಲಕಿ ಮನುಷ್ಯ. ಸ್ವಯಂಘೋಷಿತ ಪಕ್ಷವೊಂದನ್ನು ಕಟ್ಟಿಕೊಂಡಿದ್ದ. ಅದಕ್ಕೆ ದಿ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಇಟ್ಟುಕೊಂಡಿದ್ದ. ತಾನೇ ಅದರ ರಾಜ್ಯಾಧ್ಯಕ್ಷ ಎಂದೂ ಹೇಳಿಕೊಂಡಿದ್ದ. ಇದನ್ನು ನಂಬಿಸಲು ರಾಮಕೃಷ್ಣ ಹೆಗಡೆ ಜತೆಗಿರುವಂತೆ ಎಡಿಟೆಡ್ ಫೋಟೊ ಬಳಸಿ ಜನರನ್ನು ನಂಬಿಸಿದ್ದ. ಇದೀಗ ಅರಣ್ಯ ಇಲಾಖೆ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಡೀಲ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಈತನ ಹೆಸರು ಸಂತೋಷ್. ಸಂತೋಷ್ ರಾಮಕೃಷ್ಣ ಹೆಗಡೆ ಜನತಾ ಪಕ್ಷ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಖಾತೆಯೊಂದನ್ನೂ ತೆರೆದಿದ್ದು, ಅದರಲ್ಲಿ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಫೋಟೊವನ್ನು ಬಳಸಿಕೊಂಡು ಪಕ್ಷದ ಪರವಾಗಿ ಸಾಕಷ್ಟು ಪ್ರಚಾರ ಕಾರ್ಯಗಳನ್ನು ನಡೆಸಿದ್ದಾನೆ. ಕೆಲವು ಹೋರಾಟಗಳಲ್ಲೂ ಭಾಗಿಯಾಗಿದ್ದು, ನಾಗರಿಕರು, ರೈತರ ಪರ ಧ್ವನಿಯೆತ್ತುವಂತಹ ಪೋಸ್ಟ್‌ಗಳನ್ನೂ ಹಾಕಿಕೊಂಡಿದ್ದಾನೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ಮತ ಆರ್‌ಜೆಪಿಗೆ ಎಂದೂ ಬರೆದುಕೊಂಡಿರುವ ಪೋಸ್ಟ್ ಈ ಖಾತೆಯಲ್ಲಿದೆ. ಆದರೆ, ಮಹಿಳಾ ಅರಣ್ಯಾಧಿಕಾರಿಯೊಬ್ಬರ ಇಲಾಖೆಯ ಆಂತರಿಕ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಎದುರಿಸುತ್ತಿದ್ದ ತನಿಖೆಯ ಪ್ರಕರಣವನ್ನು ಸುಲಭವಾಗಿ ಬಗೆಹರಿಸಿಕೊಡುವುದಾಗಿ ನಂಬಿಸಿ ಅವರಿಂದ ೨ ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿರುವ ಕೇಸ್ ಇದೀಗ ಈತನ ವಿರುದ್ಧ ದಾಖಲಾಗಿದೆ.
ಏನಿದು ಪ್ರಕರಣ?
ಅರಣ್ಯ ಇಲಾಖೆಯಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಅರಣ್ಯಾಧಿಕಾರಿ ನೇತ್ರಾವತಿ ಎಂಬುವವರು ಈ ಹಿಂದೆ ವಿಚಾರಣೆಗೊಳಪಟ್ಟಿದ್ದರು. ಈ ಪ್ರಕರಣ ಸಂಬಂಧ ನೇತ್ರಾವತಿಯವರು ಸರ್ಕಾರಕ್ಕೆ ಹಣ ಕಟ್ಟಬೇಕೆಂದು ಹೇಳಲಾಗಿದೆ. ಈ ವಿಷಯವು ನೇತ್ರಾವತಿ ಅವರ ಅಣ್ಣನ ಮಗ ನಂಜುಂಡ ಎಂಬಾತನಿಂದ ಸಂತೋಷ್‌ಗೆ ತಿಳಿದಿದೆ. ಆಗ ಪರಿಚಯ ಮಾಡಿಕೊಂಡ ಸಂತೋಷ್ ತಾನಿದನ್ನು ಕಡಿಮೆ ಮೊತ್ತದಲ್ಲಿ ಬಗೆಹರಿಸಿಕೊಡುತ್ತೇನೆ ಎಂದು ಹೇಳಿದ್ದಾನೆ.
ಇದನ್ನು ನೇತ್ರಾವತಿ ತಕ್ಷಣಕ್ಕೆ ನಂಬಲಿಲ್ಲ ಎನ್ನಲಾಗಿದೆ. ಆದರೆ, ಈತ ತನ್ನ ಫೇಸ್‌ಬುಕ್ ಖಾತೆ ಸೇರಿದಂತೆ ರಾಮಕೃಷ್ಣ ಹೆಗಡೆ ಅವರ ಜತೆಗೆ ತೆಗೆಸಿಕೊಂಡಿದ್ದಾನೆಂದು ಹೇಳಲಾಗಿರುವ ಫೋಟೊಗಳನ್ನು ತೋರಿಸಿದ್ದಲ್ಲದೆ, ಪಕ್ಷರ ರಾಜ್ಯಾಧ್ಯಕ್ಷನಾಗಿದ್ದೇನೆ ಎಂದೂ ಹೇಳಿಕೊಂಡಿದ್ದಾನೆ. ಅದಲ್ಲದೆ, ನಮ್ಮ ಪಕ್ಷದ ಹೆಸರು ಹೇಳಿದರೆ ಕೆಲಸ ಆಗುತ್ತದೆ. ಎಲ್ಲ ರಾಜಕಾರಣಿಗಳು, ಶಾಸಕರು, ಸಚಿವರು ನನಗೆ ಗೊತ್ತು. ನಾನೇ ಕೆಲಸ ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿ ತನ್ನ ಬ್ಯಾಂಕ್ ಖಾತೆಗೆ ಆನ್‌ಲೈನ್ ಮುಖಾಂತರ ಹಂತ ಹಂತವಾಗಿ ೨ ಲಕ್ಷ ರೂಪಾಯಿ ಹಣವನ್ನು ನೇತ್ರಾವತಿಯಿಂದ ಪಡೆದುಕೊಂಡಿದ್ದ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಇದಾದ ಬಳಿಕವೂ ನೇತ್ರಾವತಿ ಅವರಿಗೆ ಇಲಾಖೆಯಲ್ಲಾಗಿದ್ದ ಸಮಸ್ಯೆ ಬಗೆಹರಿದಿಲ್ಲ. ಹಣ ಪಡೆದ ಮೇಲೆ ಯಾವುದೇ ಕ್ರಮವಾಗಿಲ್ಲ. ಸಮಸ್ಯೆಯೂ ಬಗೆಹರಿದಿಲ್ಲ ಎಂದು ವಿಚಾರಿಸಿದ್ದಾರೆ. ಆದರೆ, ಆತ ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳಿಗೂ ಹಣ ಸಂದಾಯ ಮಾಡಿ ಇತ್ಯರ್ಥಪಡಿಸುತ್ತೇನೆ. ಎರಡು ವಾರದಲ್ಲಿ ನಿಮ್ಮ ಮೇಲಿರುವ ಪ್ರಕರಣಕ್ಕೆ ಅಂತ್ಯ ಸಿಗಲಿದೆ ಎಂದು ನಂಬಿಸಿ ಸಾಗಹಾಕಿದ್ದ. ಆದರೆ, ಎರಡು ವಾರ ಕಳೆದರೂ ಪರಿಸ್ಥಿತಿ ಯಥಾಸ್ಥಿತಿಯಲ್ಲಿದ್ದರಿಂದ ಪದೇ ಪದೆ ಆತನ ಕಚೇರಿಗೆ ಬಂದು ನೇತ್ರಾವತಿ ವಿಚಾರಿಸಿದ್ದಾರೆ. ಆಗ ಸಂತೋಷ್, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಸಿ ನೇತ್ರಾವತಿಯನ್ನು ಹೊರಗಟ್ಟಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ಸಂತೋಷ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನೇತ್ರಾವತಿ ವಂಚನೆ ದೂರು ದಾಖಲಿಸಿದ್ದಾರೆ.
ಆದರೆ, ಈ ರಾಮಕೃಷ್ಣ ಹೆಗಡಿ ಜನತಾ ಪಕ್ಷವು ಅಧಿಕೃತವಾಗಿ ನೋಂದಣಿಯಾಗಿದೆಯೇ? ಅಥವಾ ಅನಧಿಕೃತವಾಗಿ ಈತನೇ ಹೆಸರನ್ನು ಹಾಕಿಕೊಂಡಿದ್ದಾನೆಯೇ? ಎಂಬ ಬಗ್ಗೆಯೂ ತನಿಖೆಯಿಂದಲೇ ತಿಳಿದುಬರಬೇಕಿದೆ.
ಇದನ್ನೂ ಓದಿ | Alert | ಉಚಿತ ಕೊಡುಗೆಗಳ ಆಫರ್ ನೀಡುವ ಚೀನಿ ವೆಬ್‌ಸೈಟ್‌ಗಳ ವಂಚನೆ ಬಗ್ಗೆ ಇರಲಿ ಎಚ್ಚರ