ಬೆಂಗಳೂರು: ಚೀಟಿ ಹಣ (Chit Fund) ಗುಳುಂ ಮಾಡಿ ಇಡೀ ಕುಟುಂಬವೇ (Fraud Case) ಪರಾರಿ ಆದ ಘಟನೆ ಬೆಂಗಳೂರಲ್ಲಿ ನಡೆದಿದೆ. ಮಧ್ಯಮ ವರ್ಗದವರನ್ನೇ ಟಾರ್ಗೆಟ್ ಮಾಡುತ್ತಿದ್ದ ವಂಚಕ ದಂಪತಿ ನಯವಾದ ಮಾತುಗಳಿಂದ ಪರಿಚಯ ಮಾಡಿಕೊಳ್ಳುತ್ತಿತ್ತು. ನಂತರ ಲಕ್ಷಾಂತರ ರೂ. ಹಣ ಕಟ್ಟಿಸಿಕೊಂಡು ಪರಾರಿ ಆಗುತ್ತಿದ್ದರು. ಸದ್ಯ ನೂರಕ್ಕೂ ಹೆಚ್ಚು ಜನರಿಗೆ ಚಿಟ್ ಫಂಡ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ. ಚೀಟಿ ಹಣ ವಾಪಸ್ ಕೊಡಿಸುವಂತೆ ಚೀಟಿದಾರರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು.
ಬ್ಯಾಡರಹಳ್ಳಿ ಪೊಲೀಸ್ ಠಾಣಾ ಮುಂದೆ 50ಕ್ಕೂ ಹೆಚ್ಚು ಜನ ಜಮಾಯಿಸಿ ಪ್ರತಿಭಟಿಸಿದರು. ಸಿದ್ದಲಿಂಗಯ್ಯ ಎಂಬಾತ ಶ್ರೀ ಸಾಯಿ ಲಕ್ಷ್ಮಿ ಕೃಪೆ ಚಿಟ್ಸ್ ಹೆಸರಿನಲ್ಲಿ ಚಿಟ್ ಕಂಪೆನಿಯನ್ನು ನಡೆಸುತ್ತಿದ್ದ. ಇದರಲ್ಲಿ 10, 12, 15 ಹಾಗೂ 16 ಲಕ್ಷ ರೂ. ಹೀಗೆ ಹಲವಾರು ಬಗೆಯಲ್ಲಿ ಚೀಟಿಯನ್ನು ನಡೆಸುತ್ತಿದ್ದ. ನಮ್ಮ ಸಂಸ್ಥೆಯಲ್ಲಿ ಚೀಟಿ ಹಾಕಿದರೆ ನಿಮಗೆ ಅಪಾರವಾದ ಲಾಭವನ್ನು ಮಾಡಿಕೊಡುತ್ತೆವೆ ಅಂದಿದ್ದ. ಸಿದ್ದಲಿಂಗಯ್ಯನನ್ನು ನಂಬಿದ ಜನರು ಲಕ್ಷಾಂತರ ರೂ. ಹೂಡಿಕೆ ಮಾಡಿದ್ದರು.
ಆದರೆ ಮೊನ್ನೆ ಇದ್ದಕ್ಕಿದ್ದಂತೆ ಸಿದ್ದಲಿಂಗಯ್ಯನ ಕುಟುಂಬದವರು ಯಾರಿಗೂ ಹೇಳದಂತೆ ಮನೆ ಖಾಲಿ ಮಾಡಿದ್ದಾರೆ. ಇದರಿಂದ ಕಂಗಲಾದ ಚೀಟಿದಾರರು ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತಲೆಮರೆಸಿಕೊಂಡಿದ್ದ ಸಿದ್ದಲಿಂಗಯ್ಯ ಹಾಗೂ ಅವರ ಪತ್ನಿ ಪ್ರೇಮಕುಮಾರಿ ಎಂಬವರನ್ನು ಬಂಧಿಸಿದ್ದಾರೆ. ಇತ್ತ ಚೀಟಿ ಹಣ ಕೊಡಿಸುವಂತೆ ಠಾಣೆ ಮುಂದೆ ಚೀಟಿದಾರರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ