ಬೆಂಗಳೂರು: ಆರ್‌ಬಿಐ ಹಾಗೂ ಇಡಿ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ವಂಚಿಸಿದ್ದ ವಂಚಕರನ್ನು (Fraud Case) ಪೊಲೀಸರು ಬಂಧಿಸಿದ್ದಾರೆ. ಖತರ್ನಾಕ್ ಗ್ಯಾಂಗ್ 6 ವರ್ಷದಲ್ಲಿ ಬರೋಬ್ಬರಿ 22 ಕೋಟಿ ರೂ. ವಂಚಿಸಿದ್ದಾರೆ.
ಸಂಬಂಧಿಕರು, ಪರಿಚಯಸ್ಥರನ್ನೇ ಮೊದಲಿಗೆ ಟಾರ್ಗೆಟ್ ಮಾಡಿ ವಂಚನೆ ಮಾಡುವ ಈ ಆರ್‌ಬಿಐ, ಇಡಿಯಲ್ಲಿ ಸೀಜ್ ಆಗಿರುವ ಹಣ ನಮ್ಮ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ನಮಗೆ ಚೆನ್ನಾಗಿ ಪರಿಚಯ ಇದ್ದಾರೆ. ಕಪ್ಪು ಹಣವನ್ನು ಕಾನೂನುಬದ್ಧ ಹಣವನ್ನಾಗಿ ಪರಿವರ್ತಿಸುತ್ತಿದ್ದೇವೆ. ಪ್ರಾಥಮಿಕ ಕೆಲಸ ಮಾಡಲು ನಮಗೆ ಹಣ ಖರ್ಚಾಗುತ್ತೆ. ಇದಕ್ಕೆ ನೀವು ಇನ್ವೆಸ್ಟ್ ಮಾಡಿದರೆ ನಿಮ್ಮ ಹಣ ಡಬಲ್, ತ್ರಿಬಲ್ ಆಗುತ್ತೆ ಎಂದು ನಂಬಿಸುತ್ತಿದ್ದರು.
ಹಣಕ್ಕೆ ಪ್ರತಿಯಾಗಿ ನಿಮಗೆ ನಾವು ಬಂಗಾರ ಮತ್ತು ಬೆಳ್ಳಿಯನ್ನು ಕೊಡುತ್ತೇವೆ. ಕೊಟ್ಟ ಹಣಕ್ಕೆ ಶೇಕಡಾ ನಿಗದಿತ ಬಡ್ಡಿಯನ್ನೂ ನೀಡುತ್ತೇವೆ ಎಂದು ಆಮಿಷವೊಡ್ಡಿ ಹಣ ಪಡೆದು ವಂಚನೆ ಮಾಡುತ್ತಿದ್ದರು.
ಈ ಖತರ್ನಾಕ್ ಗ್ಯಾಂಗ್‌ನಲ್ಲಿ ರಿಟೈರ್ಡ್ ಬ್ಯಾಂಕ್ ಮ್ಯಾನೇಜರ್ ಮತ್ತು ಮಹಿಳೆಯರನ್ನೊಳಗೊಂಡಿದೆ. ಒಬ್ಬರಿಂದ ಹಣ ಪಡೆಯುವುದು ನಂತರ, ಇನ್ನೊಬ್ಬರಿಂದ ಪಡೆದು ಮೊದಲಿನವರಿಗೆ ಸ್ವಲ್ಪ ಹಣ ರಿಟರ್ನ್ ಮಾಡುತ್ತಾರೆ. ಈ ರೀತಿ ಚೈನ್ ಲಿಂಕ್ ಬೆಳೆಸಿ ಹಣ ವಂಚನೆ ಮಾಡುತ್ತಿದ್ದರು.
ಇದೇ ರೀತಿ ಹಣ ಪಡೆದು ವಂಚನೆ ಮಾಡಿದ್ದ ಬಗ್ಗೆ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಾಂತಿ ಎಂಬುವವರ ದೂರಿನ ಮೇಲೆ ಮೇ ತಿಂಗಳಲ್ಲಿ 4 ಕೋಟಿ ಹಣ ವಂಚನೆ ಪ್ರಕರಣ ದಾಖಲಾಗಿತ್ತು. ನಾಗೇಶ್ವರರಾವ್, ಸುಜಾರಿತಾ, ಕಲ್ಪನಾ, ಸೇರಿದಂತೆ ಒಟ್ಟು 8 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಈ ಸಂಬಂಧ ಹೆಬ್ಬಾಳ ಪೊಲೀಸರು ಒಟ್ಟು 7 ಜನರನ್ನು ಬಂಧಿಸಿದ್ದಾರೆ.
ಹೆಬ್ಬಾಳದಲ್ಲಿ ಪ್ರಕರಣ ದಾಖಲಾದ ನಂತರ ಇನ್ನಿತರ ಠಾಣೆಯಲ್ಲೂ ಇವರ ವಿರುದ್ಧ ದೂರು ಬಂದಿದೆ. ಸದ್ಯ ಆರೋಪಿಗಳು ವಂಚಿಸಿರುವ ಹಣ ಏನೇನು ಮಾಡಿದ್ದಾರೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜಾಗ, ಮನೆ, ಆಸ್ತಿ ಖರೀದಿಗಾಗಿ ಕೋಟ್ಯಾಂತರ ಹಣ ಬಳಸಿರುವ ಶಂಕೆ ಇದೆ. ಸದ್ಯ ಆರೋಪಿಗಳನ್ನು ಬಂಧಿಸಿ ತನಿಖೆ ಹೆಬ್ಬಾಳ ಪೊಲೀಸರು ನಡೆಸುತ್ತಿದ್ದಾರೆ. ಈ ಆರೋಪಿಗಳಿಂದ ಯಾರಾದರೂ ವಂಚನೆಗೆ ಒಳಗಾಗಿದ್ದರೆ ಠಾಣೆಗೆ ದೂರು ನೀಡುವಂತೆ ಡಿಸಿಪಿ ಸೈದುಲು ಅಡಾವತ್ ಅವರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:Theft Case : ಮನೆಗೆಲಸ ಮಾಡುತ್ತಾ ಚಿನ್ನ ಕದ್ದಳು ಕಳ್ಳಿ; ವಾಟ್ಸ್‌ಆ್ಯಪ್ ಡಿಪಿ ಹಾಕಿ ಸಿಕ್ಕಿಬಿದ್ದಳು ಮಳ್ಳಿ
ಸಿಎಂ ಆಪ್ತ ಕಾರ್ಯದರ್ಶಿ ಎಂದು ವಂಚನೆ
ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ ಅಂತೇಳಿ ವಂಚಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಶೈಲ ಜಕ್ಕಣ್ಣನವರ್ ಎಂಬಾತ ಸಿಎಂ ಕಚೇರಿಯಲ್ಲಿ ಏನ್ ಕೆಲಸ ಬೇಕಾದರೂ ಮಾಡಿಕೊಡುವೆ ಎಂದು ವಂಚಿಸುತ್ತಿದ್ದ. ವಿಧಾನಸೌಧ ಪೊಲೀಸರು ಆರೋಪಿ ಶ್ರೀ ಶೈಲ ಜಕ್ಕಣ್ಣನವರ್ ಬಂಧನ ಮಾಡಿದ್ದಾರೆ. ಜನರನ್ನು ನಂಬಿಸಲೆಂದೇ ಮುಖ್ಯಮಂತ್ರಿಗಳ ಆಪ್ತ ಸಹಾಯಕನೆಂದು ನಕಲಿ ಐಡಿ ಕಾರ್ಡ್ ಮಾಡಿಕೊಂಡು ವಂಚಿಸುತ್ತಿದ್ದ. ವಂಚನೆ ಸಂಬಂಧ ಮುಖ್ಯಮಂತ್ರಿ ಕಚೇರಿಯ ಅಧಿಕಾರಿ ಅರುಣ್ ಪುರಟಾಡು ಎಂಬುವವರು ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿರೋ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ