ಬೆಂಗಳೂರು: ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ಫೋನ್ ಮಾಡಿ ಜನರ ಬ್ಯಾಂಕ್ ಅಕೌಂಟ್‌ಗಳಿಗೆ ಕನ್ನ ಹಾಕಿ, ಲಕ್ಷಾಂತರ ರೂ. ಹಣವನ್ನು ಲೂಟಿ ಮಾಡುತ್ತಿದ್ದ ಸೈಬರ್ ವಂಚಕರನ್ನು (Fraud case) ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಒಟ್ಟು ಎಂಟು ಮಂದಿ ವಂಚಕರು ಸೆನ್ ಪೊಲೀಸರ ಕೆಡ್ಡಕ್ಕೆ ಬಿದ್ದಿದ್ದಾರೆ. ವಸೀಂ, ಹಬೀಬುಲ್ಲ, ನಿಝಾಮುದ್ದೀನ್, ಮುಶ್ರಫ್ ಖಾನ್, ನೂರುಲ್ಲ ಖಾನ್ ಹಾಗೂ ಮೊಹಮಮ್ದ್ ಉಮರ್, ಸೈಯದ್ ಅಹ್ಮದ್, ಸೈಯದ್ ಹುಸೇನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 13 ಲಕ್ಷ ರೂ., 11 ಮೊಬೈಲ್ ಫೋನ್, ಬ್ಯಾಂಕ್ ಪಾಸ್ ಬುಕ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸೈಬರ್ ವಂಚಕರು ಮಲ್ಲೇಶ್ವರದ ವ್ಯಕ್ತಿಗೆ ನ.10ರಂದು ವಾಟ್ಸ್ ಆ್ಯಪ್ ಮೂಲಕ ಕಾಲ್ ಮಾಡಿದ್ದಾರೆ. ಬಳಿಕ ತಾವು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು, ನಿಮ್ಮ ಪತ್ನಿಯ ಹೆಸರಲ್ಲಿ ಫೆಡೆಕ್ಸ್ ಕೋರಿಯರ್‌ನಲ್ಲಿ ಮುಂಬೈನಿಂದ ಥೈಲ್ಯಾಂಡ್ ದೇಶಕ್ಕೆ ಕಾನೂನು ಬಾಹಿರ ಪಾರ್ಸೆಲ್ ಬಂದಿದೆ. ನಿಮ್ಮ ಹೆಸರಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ತೆರೆದು ಅದರಿಂದ ಮನಿ ಲಾಂಡರಿಂಗ್ ಆಗುತ್ತಿದೆ. ಆರ್‌ಬಿಐ ನಿಮ್ಮ ಅಕೌಂಟ್ ಅನ್ನು ಪ್ರೀಜ್ ಮಾಡುತ್ತಾರೆ. ಹೀಗಾಗಿ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ತನಿಖೆಗಾಗಿ ವಿಚಾರಿಸಬೇಕಿದೆ ಎಂದು ಕಥೆ ಕಟ್ಟಿದ್ದಾರೆ.
ಇದನ್ನೂ ಓದಿ: Murder Case : ತಂಗಿ ಮಗನನ್ನೇ ಕೊಂದು ಹೂತು ಹಾಕಿದ ದೊಡ್ಡಮ್ಮ!
ಅಸಲಿ ಪೊಲೀಸರೆಂದು ನಂಬಿದ ವ್ಯಕ್ತಿಯಿಂದ ಬ್ಯಾಂಕ್ ಖಾತೆ ಮಾಹಿತಿ ಪಡೆದು ಹಾಗೂ ತನಿಖಾ ವಿಚಾರಣೆ ಸಲುವಾಗಿ ಮುಂಗಡ ಹಣವನ್ನು ನೀಡಬೇಕು. ತನಿಖೆ ನಂತರ ನಿಮ್ಮ ಹಣ ವಾಪಸ್ ಕೊಡುತ್ತೇವೆ ಎಂದು ಹೇಳಿ ಪುಸಲಾಯಿಸಿದ್ದಾರೆ. ಎಚ್‌ಡಿಎಫ್‌ಸಿ ಅಕೌಂಟ್‌ನಿಂದ 66 ಲಕ್ಷ ರೂ., ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಿಂದ 42 ಲಕ್ಷ ರೂ. ಸೇರಿದಂತೆ ಒಟ್ಟು 1 ಕೋಟಿ 8 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ.
ವಂಚನೆಗೊಳಗಾದವರು ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಆಕ್ಟ್ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಇಎನ್ ಕ್ರೈಂ ಪೊಲೀಸರು ವಿಶೇಷ ತಂಡವನ್ನು ರಚಿಸಿ, ತನಿಖೆಗಿಳಿದಿದ್ದರು. ದೂರುದಾರರ ಖಾತೆಯಿಂದ ವರ್ಗಾವಣೆ ಮಾಡಿಕೊಂಡಿದ್ದ ಖಾತೆಯನ್ನು ಪರಿಶೀಲಿಸುವಾಗ ವಂಚಕರು ಆ ಹಣವನ್ನು ದಾವಣಗೆರೆಯ ಆರ್‌ಬಿಎಲ್ ಬ್ಯಾಂಕ್‌ನಲ್ಲಿ ವಿತ್‌ಡ್ರಾ ಮಾಡಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಅಲರ್ಟ್ ಪೊಲೀಸರು ವಂಚಕರನ್ನು ಬೇಟೆಯಾಡಿದ್ದಾರೆ.
ಬ್ಯಾಂಕ್ ಖಾತೆಯಲ್ಲಿದ್ದ 19 ಲಕ್ಷ ಹಣ ಪೀಜ್ ಮಾಡಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಬ್ಯಾಂಕ್‌ಗಳ 148 ಖಾತೆಗಳನ್ನು ಪ್ರೀಜ್ ಮಾಡಿದ್ದು, ಚೆಕ್‌ಬುಕ್, ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳ ಬಂಧನದಿಂದ ಎನ್‌ಸಿಆರ್‌ಬಿ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಸುಮಾರು 75 ವಂಚನೆ ಪ್ರಕರಣಗಳು ಪತ್ತೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.