ಬೆಂಗಳೂರು: ತಾನು ಲೋಕಾಯುಕ್ತ ಅಧಿಕಾರಿ (Lokayukta officer), ಎಸಿಬಿ ಅಧಿಕಾರಿ ಎಂದು ಹೇಳಿಕೊಂಡು ಸರ್ಕಾರಿ ಇಂಜಿನಿಯರ್‌ಗಳನ್ನೇ ಟಾರ್ಗೆಟ್ ಮಾಡಿಕೊಂಡು ಬೆದರಿಕೆ ಹಾಕಿ ಸುಲಿಗೆ (extortion) ಮಾಡುತ್ತಿದ್ದ ವಂಚಕನ (Fraud Case) ವಿವರ ಪತ್ತೆಯಾಗಿದೆ. ಈತನ ಸಹಚರನನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ಬೆಂಗಳೂರಿನಲ್ಲಿ ದಿನೇ ದಿನೆ ʼನಕಲಿ ಲೋಕಾಯುಕ್ತ ಅಧಿಕಾರಿʼಗಳ ದರ್ಬಾರ್ ಹೆಚ್ಚಾಗುತ್ತಿದೆ. ಈತ ಇಂಥ ಇನ್ನೊಬ್ಬ. ಇವನ ಹೆಸರು ವಿಶಾಲ್ ಪಾಟೀಲ್. ತಾನು ಎಸಿಬಿ ಅಧಿಕಾರಿ ಎಂದು ಸರ್ಕಾರಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಈತ ಎಸಿಬಿ ರದ್ದಾಗುತ್ತಿದ್ದಂತೆ ತಾನು ಲೋಕಾಯುಕ್ತ ಅಧಿಕಾರಿ ಎಂದು ಇಂಜಿನಿಯರ್‌ಗಳನ್ನು ಅಟಕಾಯಿಸಿಕೊಳ್ಳುತ್ತಿದ್ದ. ನಿಮ್ಮ ಅಕ್ರಮ ಆಸ್ತಿ, ಕಳಪೆ ಕಾಮಗಾರಿ ಟ್ರ್ಯಾಪ್ ಮಾಡ್ತೀನಿ ಎಂದು ಬೆದರಿಕೆ ಹಾಕಿ ಅವರಿಂದ ಲಕ್ಷ ಲಕ್ಷ ದೋಚಿದ್ದ.
ಹೀಗೆ ಲಕ್ಷಾಂತರ ಹಣ ಪಡೆದು ಬೆಳಗಾಂನ ತನ್ನ ಊರಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಈತ ಹಣ ತೆಗೆದುಕೊಂಡು ಬರಲೆಂದೇ ತನ್ನೂರಿನ ಯುವಕನಿಗೆ ಹಣದ ಆಮಿಷ ತೋರಿಸಿ ಇಟ್ಟುಕೊಂಡಿದ್ದ. ಮೊಬೈಲ್‌ನಲ್ಲಿಯೇ ಡೀಲ್ ಮಾಡಿ ಶಿಷ್ಯನನ್ನು ಹಣ ಪಡೆಯೋಕೆ ಕಳಿಸುತ್ತಿದ್ದ. ನಂಬಿಕೆ ಬರಲು ವಿಧಾನಸೌಧ ಸುತ್ತಮುತ್ತ ಕರೆಸಿಕೊಂಡು ಹಣ ಪಡೆದು ಎಸ್ಕೇಪ್ ಆಗುತ್ತಿದ್ದ. ಇದರಲ್ಲಿ ಒಮ್ಮೆ ಆರೆಸ್ಟ್ ಆಗಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದರೂ ಆರೋಪಿ ಈ ಕಸುಬು ಬಿಟ್ಟಿಲ್ಲ.
ಈತ ತಾನು ಬೆಂಗಳೂರು ಲೋಕಾಯುಕ್ತ ಡಿವೈಎಸ್‌ಪಿ ಎಂದು ಕುಷ್ಟಗಿ ಮತ್ತು ಲಿಂಗಸೂರು ಭಾಗದ ಇಂಜಿನಿಯರ್‌ಗಳಿಗೆ ಬೆದರಿಕೆ ಹಾಕಿದ್ದ. ಹಣ ಕೊಟ್ಟರೆ ನಿಮ್ಮ ಮೇಲಿನ ಕೇಸ್ ಕ್ಲೋಸ್ ಮಾಡ್ತೀವಿ ಅಂತ ಬೆಂಗಳೂರಿಗೆ ಕರೆಸಿಕೊಂಡಿದ್ದ. ಇಂಜಿನಿಯರ್ಸ್ ಇದರ ಬಗ್ಗೆ ಅನುಮಾನಗೊಂಡು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಣ ಕೊಡಲೆಂದು ಟ್ರ್ಯಾಪ್ ಮಾಡಿ ಆತನನ್ನು ಕರೆಸಿಕೊಳ್ಳುವ ವೇಳೆ ಪ್ರಮುಖ ಆರೋಪಿ ವಿಶಾಲ್ ಪಾಟೀಲ್ ಎಸ್ಕೇಪ್ ಆಗಿದ್ದು, ಸಹಚರ ಸಂತೋಷ್ ಕೊಪ್ಪದ್ ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Lokayukta Raid: 25 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಹೆಡ್ ಕಾನ್ಸ್‌ಟೇಬಲ್