Site icon Vistara News

Fraud Case: ಪೊಲೀಸ್ ಇನ್‌ಫಾರ್ಮರ್ ಎಂದು ಪೊಲೀಸರಿಗೇ ವಂಚಿಸಿದ ಖತರ್‌ನಾಕ್!‌

wasim fraud case

ಬೆಂಗಳೂರು: ತಾನು ಪೊಲೀಸ್‌ ಇನ್‌ಫಾರ್ಮಮರ್‌ ಎಂದು ಹೇಳಿಕೊಂಡು ಪೊಲೀಸರಿಗೇ ವಂಚಿಸಿ (Fraud Case) ಅವರ ದುಡ್ಡಿನಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದ ವಂಚಕನನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಈ ಖತರ್ನಾಕ್ ಕಿಲಾಡಿಯ ಹೆಸರು ವಸೀಂ. ಕಳೆದ ನಾಲ್ಕು ವರ್ಷಗಳಿಂದ ಈತ ಹೀಗೆ ಪೊಲೀಸರಿಗೆ ವಂಚಿಸಿ ಪಬ್ ಬಾರ್‌ಗಳಲ್ಲಿ ಮೋಜುಮಸ್ತಿ ಮಾಡುತ್ತಿದ್ದ.

ಇಲ್ಲೊಂದು ದಂಧೆ ನಡೆಯುತ್ತಿದೆ, ನಾನು ಅಲ್ಲಿಗೆ ಹೋಗಿ ಲೊಕೇಷನ್ ಕಳಿಸುತ್ತೇನೆ. ದಂಧೆಯಲ್ಲಿ ಏನೇನು ನಡೆಯುತ್ತೆ ಎಂದು ಮಾಹಿತಿ ನೀಡುತ್ತೇನೆ ಎಂದೆಲ್ಲಾ ಪೊಲೀಸರೇ ನಂಬುವಂತೆ ರೈಲು ಬಿಡುತ್ತಿದ್ದ. ಪೊಲೀಸರು, ಈಗ್ಲೇ ಬರುತ್ತೇವೆ ಅಂದರೆ, ಬೇಡ ನಾನು ಅಲ್ಲಿಗೆ ಹೋಗಿ ಸ್ಪಾಟ್ ಲೊಕೇಷನ್ ಕಳಿಸುತ್ತೇನೆ ಎನ್ನುತ್ತಿದ್ದ. ನಂತರ ಸರ್ ಆಟೋ ಪ್ರಾಬ್ಲಂ ಆಗ್ಬಿಟ್ಟಿದೆ, ಪೆಟ್ರೋಲ್ ಬೇಕಿತ್ತು, ಬೈಕ್ ಇಲ್ಲ, ಮನೆಯಲ್ಲಿ ಸಮಸ್ಯೆ ಎಂದೆಲ್ಲ ನಂಬಿಸಿ ಎರಡು ಮೂರು ಸಾವಿರ ಪೋನ್ ಪೇ ಮಾಡಲು ಹೇಳುತ್ತಿದ್ದ.

ಸರಿ ಎಂದು ಹಣ ಪೋನ್ ಪೇ ಮಾಡಿದರೆ, ಹಣ ಬಂದ ಕೆಲವೇ ಕ್ಷಣಗಳಲ್ಲಿ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದ. ಹೀಗೆ ಹಲವು ಸಿಸಿಬಿ ಹಾಗು ಲಾ ಆಂಡ್ ಆರ್ಡರ್ ಪೊಲೀಸರಿಗೇ ಯಾಮಾರಿಸಿದ್ದ ವಸೀಂ. ಸದ್ಯ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಸರಿಯಾದ ವಿಚಾರಣೆಗೆ ಒಳಪಡಿಸಿದ್ದಾರೆ.

ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿ ದರೋಡೆಗೆ ಯತ್ನ

ಕೊಡಗು: ಮಹಿಳೆಯೊಬ್ಬರು ಮನೆಯಲ್ಲಿ ಒಂಟಿಯಾಗಿದ್ದ ಸಮಯ ನೋಡಿಕೊಂಡು ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ ಘಟನೆ ಮಡಿಕೇರಿಯ ಕಾಲೇಜು ರಸ್ತೆಯ IDBI ಬ್ಯಾಂಕ್ ಎದುರು ನಡೆದಿದೆ.

ಮನೆಯಲ್ಲಿ ಮಹಿಳೆ ಒಬ್ಬರೇ ಇರುವಾಗ ಮನೆಗೆ ನುಗ್ಗಿದ ಖದೀಮ ಮಹಿಳೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾನೆ. ನಿವೃತ್ತ ಪೊಲೀಸ್ ಅಧಿಕಾರಿ ಎಂ.ಸಿ ಪ್ರಭಾಕರ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿ ಪ್ರಭಾಕರ್ ಪತ್ನಿ ಸಾಕಮ್ಮ‌ ಒಬ್ಬರೇ ಇದ್ದಾಗ ಘಟನೆ‌ ನಡೆದಿದೆ. ಮಹಿಳೆ ಮೇಲೆ ದರೋಡೆ ಕೋರ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಪೊಲೀಸರ ಮೇಲೆಯೇ ಹಲ್ಲೆ; ಕೊಲೆ ಆರೋಪಿ ಕಾಲಿಗೆ ಗುಂಡೇಟು ಕೊಟ್ಟು ಬಂಧನ!

Exit mobile version