ಬೆಂಗಳೂರು: ಓಎಲ್‌ಎಕ್ಸ್ ವೆಬ್‌ಸೈಟ್‌ನಲ್ಲಿ ಸೈಟ್, ಮನೆ ಮಾರಲು ಮುಂದಾದವರು ನೀವಾಗಿದ್ದರೆ ಹುಷಾರು, ವಂಚಕರು ನಿಮ್ಮನ್ನು ತಗುಲಿಕೊಳ್ಳಬಹುದು. ಹಾಗೆ ಸಾರ್ವಜನಿಕರಿಗೆ ಮೋಸ ಮಾಡಿ ಹಣ ಲಪಟಾಯಿಸುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ದೇವರೆಂಟಿ ವಿನೋದ್ ಕುಮಾರ್ (38) ಬಂಧಿತ ಆರೋಪಿ. ಸೈಟ್, ಮನೆ ಮಾರಾಟ ಮಾಡಲು ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ಹಾಕುತ್ತಿದ್ದವರೇ ಇವನ ಟಾರ್ಗೆಟ್. ಜಾಹೀರಾತು ನೋಡಿ ಮಾಲೀಕರಿಗೆ ಕರೆ ಮಾಡುತ್ತಿದ್ದ ಆರೋಪಿ, ಬಳಿಕ ಭೇಟಿಯಾಗಿ ಫೋನ್ ಪೇ ಖಾತೆಗೆ ಹಣ ಕಳಿಸುವುದಾಗಿ ನಂಬಿಸಿ ಪಾಸ್‌ವರ್ಡ್ ಪಡೆದುಕೊಳ್ಳುತ್ತಿದ್ದ. ಬಳಿಕ ಮಾತನಾಡುವ ನೆಪದಲ್ಲಿ ಮಾಲೀಕರ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ತೆಗೆದುಕೊಳ್ಳುತ್ತಿದ್ದ. ಬಳಿಕ ಮಾಲೀಕರ ಅಕೌಂಟ್‌ನಿಂದ ಹಂತ ಹಂತವಾಗಿ ಹಣ ಎಗರಿಸುತ್ತಿದ್ದ.
ಪೀಣ್ಯದ ವ್ಯಕ್ತಿಯೊಬ್ಬರಿಂದ ಈತ 1 ಲಕ್ಷ 40 ಸಾವಿರ ರೂಪಾಯಿ ಹಣ ಎಗರಿಸಿದ್ದ. ಈ ಬಗ್ಗೆ ಸೈಟ್ ಮಾಲೀಕರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್, ಸಿಮ್ ಕಾರ್ಡ್, ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಗೋವಾ, ಆಂಧ್ರ ಪ್ರದೇಶ, ನರಸಾಪೇಟ, ಗುಡಿವಾಡ, ಕಾಕಿನಾಡ, ವಿಜಯವಾಡ, ನೆಲ್ಲೂರು, ಎಸ್.ಆರ್.ನಗರ ಪೊಲೀಸ್ ಠಾಣೆ ಹೈದರಾಬಾದ್, ಕರ್ನಾಟಕದ ಹುಬ್ಬಳ್ಳಿ, ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲೀ ಈತ ವಂಚಿಸಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ | Fraud Case | ಮೈಮೇಲೆ ದೇವರು ಬಂದಂತೆ ವರ್ತಿಸಿ ಜನರಿಂದ ಹಣ, ಚಿನ್ನ ಪಡೆದು ವಂಚನೆ