ಬೆಂಗಳೂರು: ಒಂದು ಕಷ್ಟ ಬಂದಾಗ ಅದರ ಪರಿಹಾರಕ್ಕಾಗಿ ನಾವು ಇರುವ ಎಲ್ಲ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಈ ಪ್ರಯತ್ನದಲ್ಲಿ ಕೆಲವೊಮ್ಮೆ ಖದೀಮರ ಕೈಗೆ ಸಿಕ್ಕಿಬೀಳುವುದೂ (Fraud Case) ಉಂಟು. ಬೆಂಗಳೂರಿನ ನೀರಾವರಿ ಇಲಾಖೆಯಲ್ಲಿ (Irrigation Department) ಪ್ರಥಮ ದರ್ಜೆ ಸಹಾಯಕರಾಗಿರುವ (First Division assistant) ಮಹಿಳೆಯೊಬ್ಬರು ಹೀಗೆ ಸಿಕ್ಕಿಬಿದ್ದು ಲಕ್ಷಾಂತರ ರೂಪಾಯಿ (Lost lakhs of rupees) ಕಳೆದುಕೊಂಡಿದ್ದಾರೆ ಮತ್ತು ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
ನೀರಾವರಿ ಇಲಾಖೆಯಲ್ಲಿ ಆಧಿಕಾರಿಯಾಗಿರುವ ಮುಸ್ಲಿಂ ಮಹಿಳೆಯೊಬ್ಬರು ಬದುಕಿನಲ್ಲಿ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದರು. ಗಂಡ ಮೂರು ವರ್ಷದ ಹಿಂದೆ ಬಿಟ್ಟು ಹೋಗಿದ್ದ. ಮೂರು ವರ್ಷದ ಮಗುವಿನ ಕೈಗೆ ಗಾಯದ ಸಮಸ್ಯೆ ಇತ್ತು. ಮಗುವಿನ ಗಾಯವೊಂದು ಸರಿಯಾದರೆ ಸಾಕು, ಹೇಗಾದರೂ ಬದುಕಿಕೊಳ್ಳುತ್ತೇನೆ ಎಂದು ಅವರು ಆಶಿಸುತ್ತಿದ್ದರು.
ಈ ನಡುವೆ, ಪಕ್ಕದ ಮನೆಯವರು ನಾಗಮಂಗಲದಲ್ಲಿರುವ ಹಜರತ್ ನೂರ್ ಅವರು ಒಳ್ಳೆಯ ವೈದ್ಯರಾಗಿದ್ದು ಅವರು ಕೊಡುವ ಔಷಧದಿಂದ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದರು. ಅವರ ಸಲಹೆಯಂತೆ ಮಗುವನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದರು. ಅಚ್ಚರಿ ಎಂಬಂತೆ ಮಗುವಿನ ಕೈ ಕೇವಲ ಒಂದೇ ವಾರದಲ್ಲಿ ಸರಿ ಹೋಗಿತ್ತು.
ಈ ನಡುವೆ, ಮಹಿಳೆಗೆ ಹಜರತ್ ನೂರ್ ಮೇಲೆ ಇನ್ನಿಲ್ಲದ ನಂಬಿಕೆ ಬಂದಿತ್ತು. ಅವನೊಬ್ಬ ಪವಾಡ ಪುರುಷ ಎಂಬಂತೆ ಖುಷಿಪಟ್ಟಿದ್ದರು. ಅದರ ಬೆನ್ನಿಗೇ ಇನ್ನೊಂದು ಕೆಲಸ ಮಾಡಿಕೊಡಬಹುದಾ ಎಂದು ಕೇಳಿದ್ದರು. ಅದೇನೆಂದರೆ ಮೂರು ವರ್ಷದ ಹಿಂದೆ ಬಿಟ್ಟು ಹೋದ ಗಂಡನನ್ನು ಮತ್ತೆ ಸೇರಿಸಬಹುದಾ, ಜತೆಗಿರುವಂತೆ ಮಾಡಬಹುದಾ ಅಂತ. ಅದಕ್ಕೆ ಹಜರತ್ ನೂರ್ ಖಂಡಿತವಾಗಿಯೂ ಮಾಡೋಣ ಎಂದು ಹೇಳಿದ್ದ.
ಗಂಡ ನಿನ್ನ ಜೊತೆಗೇ ಇರುವಂತೆ ಮಾಡ್ತೀನಿ. ಆದರೆ, ಅದಕ್ಕೆ ಕೆಲವೊಂದು ಕ್ರಿಯಾಭಾಗಗಳು, ಪ್ರಾರ್ಥನಾದಿ ತಂತ್ರಗಳನ್ನು ಮಾಡಬೇಕಾಗುತ್ತದೆ. ಅದಕ್ಕೆ ಒಂದು ಲಕ್ಷ ರೂ. ಬೇಕಾಗುತ್ತದೆ ಎಂದು ಹೇಳಿದ್ದ. ಮಹಿಳೆ ಗಂಡನ ಜತೆಯಾಗುತ್ತಾನಲ್ಲಾ ಎಂಬ ಕಾರಣಕ್ಕೆ ಹಿಂದೆ ಮುಂದೆ ನೋಡದೆ ಹಣ ಕೊಟ್ಟಿದ್ದರು.
ಇದನ್ನೂ ಓದಿ: ಬಾಯ್‌ಫ್ರೆಂಡ್ ಮೊಬೈಲ್ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!
ಈ ನಡುವೆ, ತನಗೆ ವೈಯಕ್ತಿಕ ಸಮಸ್ಯೆ ಇದೆ ಎಂದು ಹೇಳಿ ಏಳು ಲಕ್ಷ ರೂ ಪಡೆದಿಲ್ಲ. ಮಹಿಳೆ ಲೋನ್ ಮಾಡಿ ಹಣ ಕೊಟ್ಟಿದ್ದರು. ಅದರ ತಿಂಗಳ ಕಂತನ್ನು ತಾನೇ ಕಟ್ಟುವುದಾಗಿ ಆತ ಹೇಳಿದ್ದ. ಆದರೆ, ಈಗ ಹಣ ಕೈಗೆ ಸಿಗುತ್ತಿದ್ದಂತೆಯೇ ಆತ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಪೊಲೀಸರು ಇದೀಗ ಎಫ್‌ಡಿಎ ಅಧಿಕಾರಿಯಾಗಿರುವ ಮಹಿಳೆಯ ದೂರಿನ ಆಧಾರದಲ್ಲಿ ಆತನನ್ನು ಕೊನೆಗೂ ಬಂಧಿಸಿದ್ದಾರೆ. ಶಿರಾ ಪೊಲೀಸರ ಕೈಗೆ ಸಿಕ್ಕಿರುವ ಆತನನ್ನು ಬಾಡಿ ವಾರಂಟ್ ಮೂಲಕ ವಿಧಾನಸೌಧ ಪೊಲೀಸ್ ಠಾಣೆಗೆ ತರಲು ಸಿದ್ಧತೆ ನಡೆಸಲಾಗಿದೆ.
ಏಳು ಲಕ್ಷ ರೂ. ಹಣ ಕಳೆದುಕೊಂಡ ಮಹಿಳೆ ಈಗ ಕಣ್ಣೀರು ಹಾಕುವಂತಾಗಿದೆ. ಆದರೆ, ಮಗು ಹುಷಾರಾಗಿದೆ ಎಂಬ ಒಂದು ಸಮಾಧಾನವೂ ಆಕೆಗೆ ಇದೆ.