ಬೆಂಗಳೂರು: ಮಾರುಕಟ್ಟೆಯಲ್ಲಿ ಈಗಂತೂ ತರಹೇವಾರಿ ಡಿಟರ್ಜೆಂಟ್ ಪೌಡರ್‌ಗಳು ಲಭ್ಯವಿದೆ. ಅಸಲಿ ಪೌಡರ್‌ಗಳಿಗೂ ಸೆಡ್ಡು ಹೊಡೆಯುವ ನಕಲಿ ಡಿಟರ್ಜೆಂಟ್ ಪೌಡರ್ (Fake Detergent Powder) ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಠಾಣೆಗೆ ಬಂದ ದೂರನ್ನು ಬೆನ್ನತ್ತಿದ್ದ ಪೊಲೀಸರಿಗೆ ನಕಲಿ ಉತ್ಪನ್ನಗಳ ತಯಾರಿಕಾ ಜಾಲದ ಕಳ್ಳಾಟ (Fraud Case) ಬಯಲಾಗಿದೆ.
ಲ್ಯಾಕ್ಮೆ, ಪಾಂಡ್ಸ್ , ವೀಲ್ ವಾಷಿಂಗ್ ಪೌಡರ್, ಸರ್ಫ್ ಎಕ್ಸೆಲ್, ಡೌ, ರೆಡ್ ಲೇಬಲ್ ಇವೆಲ್ಲ ಹಿಂದೂಸ್ತಾನ್ ಯುನಿಲಿವೆರ್ ಲಿಮಿಟೆಡ್ ಪರವಾನಗಿ ಹೊಂದಿರುವ ಉತ್ಪನ್ನಗಳಾಗಿವೆ. ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿ ವ್ಯಕ್ತಿಯೊಬ್ಬ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ. ನಕಲಿ ವಸ್ತುಗಳ ಮಾರಾಟವನ್ನು ಉದ್ಯೋಗಿ ಪಾನಿಕುಮಾರ್ ಎಂಬುವವರು ಗಮನಿಸಿದ್ದರು.
ಮಲ್ಲೇಶ್ವರಂ ಸಂಪಿಗೆ ರಸ್ತೆಯ ಬಳಿ ಟಾಟಾ ಏಸ್ ವಾಹನವೊಂದರಲ್ಲಿ ಆರೋಪಿಯೊಬ್ಬ ನಕಲಿ ಉತ್ಪನ್ನ ಮಾರಾಟ ಮಾಡುತ್ತಿದ್ದ. ಈ ಕುರಿತಾಗಿ ಕ್ರಮ ಕೈಗೊಳ್ಳುವಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕಾಪಿರೈಟ್ ಆ್ಯಕ್ಟ್ ಅಡಿಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ: ಕುಡಿತದ ಚಟ ಸಹಿಸದೆ ಬೆಂಗಳೂರಿನಲ್ಲಿ ಮಗನನ್ನೇ ಕೊಂದ ತಂದೆ; ಇಲ್ಲಿದೆ ಒಂದು ಟ್ವಿಸ್ಟ್
ಥೇಟ್ ಒರಿಜಿನಲ್ ಕಂಪನಿಯಂತೆ 100 ಗ್ರಾಂನಿಂದ 1 ಕೆ.ಜಿಯ ವೆರೆಗೆ ವಿಂಗಡಿಸಿ ಪ್ಯಾಕೇಟ್ ಮಾಡಿ ಕೆಎ 04 ಎಸಿ 4409 ನೋಂದಣಿ ಸಂಖ್ಯೆಯ ಟಾಟಾ ಏಸ್ ವಾಹನದಲ್ಲಿ ಉತ್ಪನ್ನಗಳ ಮಾರಾಟ ಮಾಡಲಾಗುತ್ತಿತ್ತು. ಇದರ ಹಿಂದೆ ಬಿದ್ದ ಪೊಲೀಸರು ನೇರವಾಗಿ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ್ದರು.
ಬೆಂಗಳೂರಿನ ಹೆಗ್ಗಡದೇವನಪುರದಲ್ಲಿದ್ದ ಉತ್ಪನ್ನ ಘಟಕದ ಮೇಲೆ ದಾಳಿ ಮಾಡಿದ ಪೊಲೀಸರು ಬಹು ದೊಡ್ಡಮಟ್ಟದಲ್ಲಿ ನಕಲಿ ಉತ್ಪನ್ನಗಳನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 15 ಲಕ್ಷ ಮೌಲ್ಯದ ತಯಾರಿಕಾ ಮೆಷಿನ್ ಮತ್ತು ಉತ್ಪನ್ನಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಅರ್ಜುನ್ ಸಿಂಗ್ ಎಂಬಾತ ತಲೆ ಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ