ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಜತೆ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭಿಣಿಯಾಗಿ 7 ತಿಂಗಳ ಬಳಿಕ ಮಗುವನ್ನು ಕೊಲ್ಲಿಸಿದ ವಂಚಕನನ್ನು ಪೊಲೀಸರು ಶೋಧಿಸುತ್ತಿದ್ದಾರೆ.
ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆಯಿದು. ಸಾಗರ್ ಎಂಬವನೇ ಯುವತಿಗೆ ವಂಚಿಸಿ ಎಸ್ಕೇಪ್ ಆದ ಕಾಮುಕ. ಯುವತಿ ಲ್ಯಾಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಲ್ಯಾಬ್‌ನಲ್ಲಿ ಸಾಗರ್ ಸಿಸ್ಟಮ್ ವರ್ಕ್ ಮಾಡಿಕೊಂಡಿದ್ದ. ಈ ವೇಳೆ ಯುವತಿಯನ್ನ ಪ್ರೀತಿ ಹೆಸರಲ್ಲಿ ಪುಸಲಾಯಿಸಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಯುವತಿಯ ಇಚ್ಛೆಗೆ ವಿರುದ್ಧವಾಗಿಯೂ ಲೈಂಗಿಕ ಕ್ರಿಯೆ ನಡೆಸಿದ್ದ.
ಇದರಿಂದ ಯುವತಿ ಗರ್ಭಿಣಿಯಾಗಿದ್ದಳು. 7 ತಿಂಗಳ ನಂತರ ಆಕೆಗೆ ಸಾಗರ್ ಬಲವಂತವಾಗಿ ಗರ್ಭಪಾತ ಮಾತ್ರೆ ನುಂಗಿಸಿದ್ದ. ಯುವತಿಗೆ ತೀವ್ರ ರಕ್ತಸ್ರಾವವಾಗಿ 7 ತಿಂಗಳ ಮಗು ಹೊರಬಂದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವಿಗೀಡಾಗಿತ್ತು. ಯುವತಿಯ ಪೋಷಕರು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಈ ವೇಳೆ ಸಾಗರ್ ಯುವತಿಯ ಪೋಷಕರ ಜೊತೆ ರಾಜಿಗಿಳಿದು ಯುವತಿಗೆ ತಾಳಿ ಕಟ್ಟಿ ಮದುವೆಯಾಗಿದ್ದ.
ನಂತರ ರಿಜಿಸ್ಟರ್ ಕಚೇರಿಯಲ್ಲಿ ಅಧಿಕೃತವಾಗಿ ಮದುವೆಯಾಗುವಂತೆ ಯುವತಿ ಒತ್ತಾಯಿಸಿದ್ದಳು. ಈ ವೇಳೆ ಫೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಕ ಸಾಗರ್‌ಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ.
ಇದನ್ನೂ ಓದಿ: Fraud Case: ತಾನು ಗರ್ಭಿಣಿ ಎಂದು ನಂಬಿಸಿ ಮದುವೆಯಾದ ಯುವತಿ, ವಂಚನೆ ಕೇಸ್ ದಾಖಲು