Site icon Vistara News

Fraud Case | ಬುಡಬುಡಿಕೆ ದಾಸನ ಮಾತಿಗೆ ಮರುಳಾದ ಮಹಿಳೆ; ಚಿನ್ನಾಭರಣ ದೋಚಿ ಪರಾರಿಯಾದ ದಾಸಪ್ಪ!

fraud case1

ಬೆಂಗಳೂರು: ಬುಡಬುಡಿಕೆ ದಾಸಪ್ಪನೊಬ್ಬ ತನ್ನ ಮಾತನ್ನೇ ಬಂಡವಾಳ ಮಾಡಿಕೊಂಡು ಕುಟುಂಬವೊಂದಕ್ಕೆ ವಂಚಿಸಿ (Fraud Case) ಪರಾರಿಯಾಗಿದ್ದಾನೆ. ಜ್ಞಾನಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೌಡ್ಯಕ್ಕೆ ಬಲಿಯಾದ ಕುಟುಂಬವೊಂದು, ಮನೆಯಲ್ಲಿ ಸಾವಾಗುತ್ತದೆ ಎಂದು ದಾಸಪ್ಪ ಹೇಳಿದನ್ನ ನಂಬಿ ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದೆ.

ಇತ್ತೀಚೆಗೆ ವರದರಾಜು ಎಂಬುವವರ ತಂದೆ ಮೃತಪಟ್ಟಿದ್ದರು. ಸಂಪ್ರದಾಯದ ಪ್ರಕಾರ 11 ದಿನ ಮನೆಯಲ್ಲಿ ದೀಪ ಹಚ್ಚಬೇಕು. ಹೀಗಾಗಿ ಮನೆಯಲ್ಲಿ ದೀಪ ಹಚ್ಚಿದ್ದನ್ನು ನೋಡಿ ಮನೆಗೆ ಬಂದಿದ್ದ ಬುಡಬುಡಿಕೆ ದಾಸನೊಬ್ಬ, ಈ ಮನೆಯಲ್ಲಿ ಮತ್ತೆ ಮೂರು ಸಾವಾಗುತ್ತೆ ಎಂದು ಇರುಳು ಹೊತ್ತಿನಲ್ಲಿ ಹೇಳಿ ಹೋಗಿದ್ದ. ಇದನ್ನು ಕೇಳಿ ದಂಪತಿ ಬೆದರಿದ್ದರು.

ದಂಪತಿಗಳ ಭೀತಿಯನ್ನು ಬಂಡವಾಳ ಮಾಡಿಕೊಂಡ ಬುಡಬುಡಿಕೆ ದಾಸಯ್ಯ, ಮನೆಯಲ್ಲಿ ವರದರಾಜು ಪತ್ನಿ ಒಬ್ಬರೇ ಇರುವುದನ್ನು ನೋಡಿ ಮತ್ತೊಂದು ದಿನ ಬಂದಿದ್ದ. ಈ ಮನೆಯಲ್ಲಿ ಮೂರು ಸಾವು ಆಗುತ್ತದೆ ಎಚ್ಚರ ಎಂದು ಬೆದರಿಸಿದ್ದ. ಎರಡನೇ ಬಾರಿ ಸಾವಿನ ವಿಚಾರ ಕೇಳಿದಾಗ ಭಯಗೊಂಡ ವರದರಾಜು ಪತ್ನಿ, ಬುಡಬುಡಿಕೆಯವನನ್ನು ಮನೆಯೊಳಗೆ ಕರೆಸಿ ಮಾತನಾಡಿಸಿದ್ದಾರೆ.

ಹಣೆಗೆ ಬೊಟ್ಟು ಇಟ್ಟು ಮಂಕುಬೂದಿ!

ಮುಂದಿನ ಸಾವುಗಳನ್ನು ತಪ್ಪಿಸಲು ಪೂಜೆ ಮಾಡಿಸಬೇಕು, ಇದಕ್ಕಾಗಿ ಐದು ಸಾವಿರ ಆಗುತ್ತದೆ ಎಂದಿದ್ದ ಬುಡಬುಡಿಕೆಯವನು, ಹಣ ಕೊಟ್ಟ ಬಳಿಕ ವರದರಾಜು ಅವರ ಪತ್ನಿಗೆ ಕಪ್ಪು ಇರುವ ಬೊಟ್ಟನ್ನು ಹಣೆಗೆ ಹಚ್ಚಿದ್ದ. ಆ ಬಳಿಕ ಮಾನಸಿಕ ನಿಯಂತ್ರಣ ಕಳೆದುಕೊಂಡ ಮಹಿಳೆ, ದಾಸಯ್ಯ ಕೇಳಿದ ಕೂಡಲೆ ಮೈಮೇಲಿದ್ದ ಒಡವೆಯನ್ನು ತಾವೇ ತೆಗೆದುಕೊಟ್ಟಿದ್ದಾರೆ.

ಒಂದು ಚಿನ್ನದ ಸರ ಹಾಗೂ ಎರಡು ಉಂಗುರವನ್ನು ಬಿಚ್ಚಿ ಕೊಟ್ಟಿದ್ದಾರೆ. 12 ಗಂಟೆಯೊಳಗೆ ಪೂಜೆ ಮಾಡಿ ಕೊಡುವುದಾಗಿ ಹೇಳಿದ ದಾಸಯ್ಯ ತನ್ನ ಹೆಸರು ಕೃಷ್ಣಪ್ಪ ಎಂದು ಪರಿಚಯ ಮಾಡಿಕೊಂಡು ಫೋನ್ ನಂಬರ್ ಕೊಟ್ಟು ಅಲ್ಲಿಂದ ಕಾಲ್ಕಿತ್ತಿದ್ದ.

ಫೋನ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡ

ಮನೆಗೆ ಪತಿ ವರದರಾಜು ಬಂದಾಗ ಅಸಲಿ ಸಂಗತಿ ತಿಳಿದರು. ಕೃಷ್ಣಪ್ಪನ ನಂಬರ್‌ಗೆ ಕರೆ ಮಾಡಿದ್ದು, ಅದು ಸ್ವಿಚ್ಡ್‌ ಆಫ್ ಎಂದು ಬಂದಿದೆ. ಮೋಸ ಹೋದ ವಿಚಾರ ತಿಳಿಯುತ್ತಿದ್ದಂತೆ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಪಡೆದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ | Fraud | ಪ್ರಶಸ್ತಿ ಆಮಿಷ, ಅಧಿಕಾರಿಯೆಂದು ನಂಬಿಸಿ ರಾಜಭವನದಲ್ಲೇ ವಂಚನೆ!

Exit mobile version